ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಹೇರಿರುವ ಶೇ.50ರಷ್ಟು ತೆರಿಗೆಯಿಂದ ಕೆಲ ಉದ್ಯಮಗಳಿಗೆ ಪೆಟ್ಟು ಬಿದ್ದಿರುವುದರ ಜತೆಗೆ ಗುಜರಾತ್‌ನಲ್ಲಿ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ತೊರೆಯುವಂತೆ ಮಾಡಿದೆ ಎಂಬ ಕರುಣಾಜನಕ ವಿಷಯ ಬೆಳಕಿಗೆ ಬಂದಿದೆ.
ಸೂರತ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಹೇರಿರುವ ಶೇ.50ರಷ್ಟು ತೆರಿಗೆಯಿಂದ ಕೆಲ ಉದ್ಯಮಗಳಿಗೆ ಪೆಟ್ಟು ಬಿದ್ದಿರುವುದರ ಜತೆಗೆ ಗುಜರಾತ್‌ನಲ್ಲಿ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ತೊರೆಯುವಂತೆ ಮಾಡಿದೆ ಎಂಬ ಕರುಣಾಜನಕ ವಿಷಯ ಬೆಳಕಿಗೆ ಬಂದಿದೆ.
ಭಾರತದ ವಜ್ರಗಳ ಮೇಲೆ ಶೇ.50ರಷ್ಟು ತೆರಿಗೆ
ಭಾರತದ ವಜ್ರಗಳ ಶೇ.40ರಷ್ಟನ್ನು ಆಮದು ಮಾಡಿಕೊಳ್ಳುವ ಅಮೆರಿಕ, ಅವುಗಳ ಮೇಲೆ ಶೇ.50ರಷ್ಟು ತೆರಿಗೆ ಹೇರಿದೆ. ಇದರಿಂದ ಭಾರತೀಯ ವಜ್ರಗಳು ಅಮೆರಿಕನ್ನರ ಪಾಲಿಗೆ ದುಬಾರಿಯಾಗಿವೆ. ಪರಿಣಾಮವಾಗಿ ಬೇಡಿಕೆ ಕುಸಿದು, ವಜ್ರೋದ್ಯಮವನ್ನೇ ನೆಚ್ಚಿಕೊಂಡಿದ್ದ ಸೂರತ್‌ನ ಅದೆಷ್ಟೋ ಪರಿವಾರಗಳ ಆದಾಯ ಕಸಿದಿದೆ. ದುಡಿಮೆ ಇಲ್ಲದ ಕಾರಣ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲಾಗದೆ ಮಕ್ಕಳನ್ನು ವರ್ಷದ ನಡುವಲ್ಲೇ ಶಾಲೆಯಿಂದ ಬಿಡಿಸಲಾಗಿದೆ ಎಂದು ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾದ ಶಾಲೆ ಬಿಟ್ಟವರ ರಾಜ್ಯವಾರು ದತ್ತಾಂಶದಿಂದ ಬಯಲಾಗಿದೆ.
ಇಂಡಿಯನ್ ಡೈಮಂಡ್ ಸಂಸ್ಥೆಯ ಮುಖ್ಯಸ್ಥ ದಿನೇಶ್ ವನಾದಿಯಾರ ಪ್ರಕಾರ, ಹಲವರು ಕೆಲಸ ಕಳೆದುಕೊಂಡಿದ್ದರೆ, ಉಳಿದವರ ಆದಾಯ 35 ಸಾವಿರ ರು.ನಿಂದ 20 ಸಾವಿರ ರು.ಗೆ ಕುಸಿದಿದೆ.
ಗುಜರಾತ್‌ನಲ್ಲಿ ಅತ್ಯಧಿಕ:
2025-26ರಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯಲ್ಲಿ ಗುಜರಾತ್ ಅಗ್ರಸ್ಥಾನದಲ್ಲಿದೆ. ಒಂದೇ ವರ್ಷದಲ್ಲಿ 2.4 ಲಕ್ಷ ವಿದ್ಯಾರ್ಥಿಗಳು ಓದಿಗೆ ವಿದಾಯ ಹೇಳಿದ್ದಾರೆ. 2024ರಲ್ಲಿ 54541 ಇದ್ದ ಈ ಸಂಖ್ಯೆ ಬರೋಬ್ಬರಿ ಶೇ.341ರಷ್ಟು ಏರಿಕೆಯಾಗಿದೆ. ಸೂರತ್‌ನ 24 ನಗರ ಪಾಲಿಕೆಗಳ ಶಾಲೆಯ 600 ವಿದ್ಯಾರ್ಥಿಗಳು ವಿದ್ಯಾಭ್ಯಾಸ ತೊರೆದಿದ್ದು, ಅನ್ಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಲೆಕ್ಕವನ್ನೂ ಸೇರಿಸಿದರೆ ಈ ಸಂಖ್ಯೆ ಇನ್ನೂ ಹೆಚ್ಚುವುದು.


