ತ್ರಿಪುರಾ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿಪ್ಲಬ್ ದೇಬ್ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಹರ್ಯಾಣ ಪಾಣಿಪತ್ ಹೆದ್ದಾರಿಯಲ್ಲಿ ಘಟನೆ ನಡೆದಿದೆ. 

ಹರ್ಯಾಣ(ಫೆ.20): ತ್ರಿಪುರ ಮಾಜಿ ಮುಖ್ಯಮಂತ್ರಿ, ಹರ್ಯಾಣದ ಬಿಜೆಪಿ ಉಸ್ತುವಾರಿ ಬಿಪ್ಲಬ್ ದೇವ್ ಕುಮಾರ್ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಹರ್ಯಾಣ ಪಾಣಿಪತ್ ಜಿಟಿ ರೋಡ್ ಬಳಿ ಈ ಅಪಘಾತ ಸಂಭವಿಸಿದೆ. ದೆಹಲಿಯಿಂದ ಚಂಡೀಘಡಕ್ಕೆ ತೆರಳುತ್ತಿದ್ದ ಬಿಪ್ಲಬ್ ದೇಬ್ ಕುಮಾರ್ ಕಾರು, ಪಂಚರ್ ಆಗಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಬಿಪ್ಲಬ್ ದೇಬ್ ಸುರಕ್ಷಿತವಾಗಿದ್ದಾರೆ. ಆದರೆ ಕಾರಿನ ಟಯರ್, ಒಂದು ಭಾಗ ನಜ್ಜು ಗುಜ್ಜಾಗಿದೆ.

ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಕಾರು ಪಂಚರ್ ಆಗಿದೆ. ಹೀಗಾಗಿ ತಕ್ಷಣ ಕಾರು ನಿಲ್ಲಿಸಲಾಗಿದೆ. ಇದರಿಂದ ಹಿಂದಿನಿಂದ ಬರುತ್ತಿದ್ದ ಬಿಪ್ಲಬ್ ದೇಬ್ ಕಾರು ದಿಢೀರ್ ನಿಂತ್ರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂಚರ್ ಆಗಿ ನಿಂತಿದ್ದ ಕಾರಿಗೆ ಡಿಕ್ಕಿಯಾಗಿದೆ. ಈ ಕುರಿತು ಸೂಪರಿಡೆಂಟ್ ಆಫ್ ಪೊಲೀಸ್ ಒಮ್ ಪ್ರಕಾಶ್ ಮಾಹಿತಿ ನೀಡಿದ್ದಾರೆ. ಹೆದ್ದಾರಿಯಲ್ಲಿ ಬಿಪ್ಲಬ್ ದೇವ್ ಅವರ ಕಾರಿನ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಕಾರು ದಿಢೀರ್ ನಿಂತ ಕಾರಣ ಈ ಅಪಘಾತ ಸಂಭವಿಸಿದೆ ಎಂದಿದ್ದಾರೆ.

ತ್ರಿಪುರ ಸಿಎಂ ಬಿಪ್ಲಬ್‌ ಹತ್ಯೆಗೆ ಯತ್ನ: ಆರೋಪಿಗಳ ಬಂಧನ!

ತ್ರಿಪುರದ ಮುಖ್ಯಮಂತ್ರಿಯಾಗಿದ್ದ ಬಿಪ್ಲಬ್ ದೇಬ್ ಅವರು ಕಳೆದ ವರ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿ ಹೈಕಮಾಂಡ್ ಚುನಾವಣೆಗೂ ಮೊದಲು ದಿಢೀರ್ ಸಿಎಂ ಬದಲಿಸಿತ್ತು. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಹಾಗೂ ಸಂಸದ ಮಾಣಿಕ್‌ ಸಾಹಾ ಅವರನ್ನು ನೂತನ ಸಿಎಂ ಆಗಿ ನೇಮಕ ಮಾಡಿತ್ತು. 2018ರಲ್ಲಿ ತ್ರಿಪುರಾ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಎಡರಂಗ ನಾಯಕ ಮಾಣಿಕ್‌ ಸರ್ಕಾರ್‌ ಅವರ 25 ವರ್ಷದ ಸರ್ಕಾರಕ್ಕೆ ಅಂತ್ಯ ಹಾಡಿತ್ತು. ಆಗ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಬಿಪ್ಲಬ್‌ ದೇಬ್‌ ಸಿಎಂ ಸ್ಥಾನ ಅಲಂಕರಿಸಿದ್ದರು.

ಬಿಪ್ಲಬ್ ದೇಬ್ ಜೊತೆ ಮಹತ್ವದ ಸಭೆ ನಡೆಸಿದ್ದ ನಡ್ಡಾ!
ಇತ್ತೀಚೆಗೆ ಬಿಪ್ಲಬ್ ದೇವ್ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಹತ್ವದ ಸಭೆ ನಡೆಸಿದ್ದರು. 2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷವನ್ನು ಸುಭದ್ರಗೊಳಿಸುವ ಸಲುವಾಗಿ ರಾಜ್ಯಗಳ ಹೊಸ ಬಿಜೆಪಿ ಪ್ರಭಾರಿಗಳೊಂದಿಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಭೆ ನಡೆಸಿದ್ದರು. ಬಿಪ್ಲಬ್ ದೇಬ್ ಹರ್ಯಾಣ ರಾಜ್ಯದ ಬಿಜೆಪಿ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.

ತ್ರಿಪುರಾದಲ್ಲಿ ಶೇ.81 ರಷ್ಟು ಮತದಾನ: ಮಾ.2ಕ್ಕೆ ಫಲಿತಾಂಶ ಪ್ರಕಟ

ದೆಹಲಿಯಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ನಡ್ಡಾ ಅವರೊಂದಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ಸಹ ಭಾಗಿಯಾಗಿದ್ದರು. ಈ ಸಭೆಯಲ್ಲಿ 2024ರ ಚುನಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.ವಿವಿಧ ರಾಜ್ಯಗಳ ಪ್ರಭಾರಿಗಳಾಗಿ ಇತ್ತೀಚೆಗೆ ನೇಮಕವಾಗಿದ್ದ ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ, ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌, ಬಿಜೆಪಿ ಪ್ರಧಾನ ಕಾರ‍್ಯದರ್ಶಿಗಳಾದ ಅರುಣ್‌ಸಿಂಗ್‌, ವಿನೋದ್‌ ತಾವ್ಡೆ, ತರುಣ್‌ ಚುಗ್‌ ಮತ್ತು ಸುನೀಲ್‌ ಬನ್ಸಲ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ತಿಂಗಳ ಆರಂಭದಲ್ಲಿ ಬಿಹಾರಕ್ಕೆ ತಾವ್ಡೆ, ಪಂಜಾಬ್‌ಗೆ ರೂಪಾನಿ ಮತ್ತು ಹರ್ಯಾಣಕ್ಕೆ ದೇಬ್‌ ಅವರನ್ನು ನೂತನ ಪ್ರಭಾರಿಗಳಾಗಿ ನೇಮಕ ಮಾಡಲಾಗಿತ್ತು.