* ಸಿಎಂ ಮೇಲೆ ಕಾರು ಹರಿಸಲು ಮೂವರ ಪ್ರಯತ್ನ* ತ್ರಿಪುರ ಸಿಎಂ ಬಿಪ್ಲಬ್‌ ಹತ್ಯೆಗೆ ವಿಫಲ ಯತ್ನ* ಆಗ ರಸ್ತೆ ಬದಿ ಜಿಗಿದು ಪಾರಾದ ಬಿಪ್ಲಬ್‌* ಮೂವರೂ ಆರೋಪಿಗಳ ಬಂಧನ

ಅಗರ್ತಲಾ(ಆ.08): ತ್ರಿಪುರ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಬಿಪ್ಲಬ್‌ ದೇವ್‌ ಅವರ ಹತ್ಯೆಗೆ ವಿಫಲ ಯತ್ನ ನಡೆಸಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರಿನಲ್ಲಿ ಬಂದ ಮೂವರು ವ್ಯಕ್ತಿಗಳು ನಡೆದು ಹೋಗುತ್ತಿದ್ದ ಬಿಪ್ಲಬ್‌ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಘಟನೆ ಸಂಬಂಧ ಅಗರ್ತಲಾ ಪೊಲೀಸರು ಮೂವರನ್ನು ಗುರುವಾರ ತಡರಾತ್ರಿ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ಅಗರ್ತಲಾದ ಶ್ಯಾಮಪ್ರಸಾದ ಮುಖರ್ಜಿ ಮಾರ್ಗದ ತಮ್ಮ ಸರ್ಕಾರಿ ನಿವಾಸದ ಸನಿಹ ಅಂಗರಕ್ಷಕರೊಂದಿಗೆ ಬಿಪ್ಲಬ್‌ ವಾಕಿಂಗ್‌ ಮಾಡುತ್ತಿದ್ದರು. ಆಗ ಕಾರಿನಲ್ಲಿ ಬಂದ ಮೂವರು ಬಿಪ್ಲಬ್‌ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಆಗ ಅಪಾಯ ಅರಿತ ಬಿಪ್ಲಬ್‌ ಚಂಗನೆ ರಸ್ತೆ ಬದಿಗೆ ಹಾರಿ ಬಚಾವಾಗಿದ್ದಾರೆ. ಆದರೆ ಅವರ ಅಂಗರಕ್ಷಕನಿಗೆ ಕಾರು ಬಡಿದಿದ್ದು, ಸಣ್ಣಪುಟ್ಟಗಾಯಗಳಾಗಿವೆ.

ಬಂಧಿತ ಮೂವರನ್ನೂ ಈಗ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಎಲ್ಲರೂ 20ರ ಪ್ರಾಯದವರು. ನ್ಯಾಯಾಂಗ ವಶಕ್ಕೆ ಅವರನ್ನು ಒಪ್ಪಿಸಿರುವ ಕಾರಣ ಜೈಲಿಗೇ ಹೋಗಿ ವಿಚಾರಣೆ ನಡೆಸಲಾಗುತ್ತದೆ ಎಂದು ಬಿಪ್ಲಬ್‌ ದೇಬ್‌ ಹೇಳಿದ್ದಾರೆ.