ನವದೆಹಲಿ [ಜ.06]: ಕೇಂದ್ರ ಸರ್ಕಾರದ ಕಾರ್ಮಿಕ ಸುಧಾರಣೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಜ.8ರ ಬುಧವಾರ ಭಾರತ ಬಂದ್‌ಗೆ ಕರೆ ನೀಡಿವೆ. ಕೇಂದ್ರ ಸರ್ಕಾರಿ ನೌಕರರು, ಬ್ಯಾಂಕ್‌ ಉದ್ಯೋಗಿಗಳು, ಶಿಕ್ಷಕರು, ಉಕ್ಕು ಮತ್ತು ರೈಲ್ವೆ ಸೇರಿದಂತೆ ವಿವಿಧ ವಲಯಗಳ ನೌಕರರು ಈ ಬಂದ್‌ನಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

ಅಖಿಲ ಭಾರತ ಸಂಯುಕ್ತ ಕಾರ್ಮಿಕ ಒಕ್ಕೂಟ ಕೇಂದ್ರ (ಎಐಯುಟಿಯುಸಿ), ಭಾರತೀಯ ಕಾರ್ಮಿಕ ಒಕ್ಕೂಟಗಳ ಕೇಂದ್ರ (ಸಿಐಟಿಯು), ಅಖಿಲ ಭಾರತ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ), ಹಿಂದ್‌ ಮಜ್ದೂರ್‌ ಸಭಾ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳ ಬೆಂಬಲ ಈ ಮುಷ್ಕರಕ್ಕೆ ಇದೆ. ಈ ಸಂಘಟನೆಗಳ ಪ್ರಕಾರ, 20 ಕೋಟಿಗೂ ಅಧಿಕ ಕಾರ್ಮಿಕರು ಬಂದ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇಂದ್ರ, ಸಹಕಾರಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಹಾಗೂ ಜೀವ ವಿಮಾ ನಿಗಮ (ಎಲ್‌ಐಸಿ)ದ ಸಂಘಟನೆಗಳು ಕೂಡ ಮುಷ್ಕರಕ್ಕೆ ಬೆಂಬಲ ನೀಡಿವೆ. ಆರು ಬ್ಯಾಂಕ್‌ ಒಕ್ಕೂಟಗಳು ಮುಷ್ಕರದಲ್ಲಿ ಭಾಗಿಯಾಗಲಿವೆ ಎಂದು ಭಾರತೀಯ ಬ್ಯಾಂಕುಗಳ ಸಮಿತಿ ತಿಳಿಸಿದೆ. ಇದರಿಂದಾಗಿ ಬ್ಯಾಂಕ್‌ ಸೇವೆಗಳಲ್ಲಿ ವ್ಯತ್ಯಯವಾಗುವ ಸಂಭವವಿದೆ.

ಭಾರತ ಬಂದ್‌ ಏಕೆ?:

ಕಾರ್ಮಿಕರಿಗೆ ಸಂಬಂಧಿಸಿದ 44 ಕಾಯ್ದೆಗಳನ್ನು ವಿಲೀನಗೊಳಿಸಿ ವೇತನ, ಕೈಗಾರಿಕಾ ಸಂಬಂಧ, ಸಾಮಾಜಿಕ ಭದ್ರತೆ, ಸುರಕ್ಷತಾ ಕಾರ್ಯನಿರ್ವಹಣಾ ಷರತ್ತು ಎಂಬ ನಾಲ್ಕು ಸಂಹಿತೆಗಳನ್ನು ರೂಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. 2018ರ ನವೆಂಬರ್‌ನಲ್ಲಿ ಕೈಗಾರಿಕಾ ಸಂಬಂಧದಲ್ಲಿನ ಕಾರ್ಮಿಕ ಸಂಹಿತೆಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅದರ ಪ್ರಕಾರ, ಈಗಿನ ಕಾರ್ಮಿಕ ಸಂಘಟನೆಗಳ ಮಾನ್ಯತೆಯನ್ನು ರದ್ದುಗೊಳಿಸಲಾಗುತ್ತದೆ. 75% ಕಾರ್ಮಿಕರ ಬೆಂಬಲ ಹೊಂದಿರುವ ಕಾರ್ಮಿಕ ಸಂಘಟನೆಗಳಿಗೆ ಮಾತ್ರ ಮಾನ್ಯತೆ ನೀಡಲಾಗುತ್ತದೆ. ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕುವುದು ಉದ್ಯೋಗದಾತರಿಗೆ ಸುಲಭವಾಗಲಿದೆ. ಕಾರ್ಮಿಕರು ಮುಷ್ಕರ ಹೂಡಿದರೆ ಅದನ್ನು ಸಾಮೂಹಿಕ ಸಾಂದರ್ಭಿಕ ರಜೆ ಎಂದು ಪರಿಗಣಿಸಲಾಗುತ್ತದೆ ಎಂಬುದು ಕಾರ್ಮಿಕ ಸಂಘಟನೆಗಳ ವಾದವಾಗಿದೆ.

ಜ.8ರಂದು ಬಂದ್ ಆಗಲಿದೆ ಕರ್ನಾಟಕ ? ಏನಾಗಲಿದೆ ಎಫೆಕ್ಟ್...

ಇದಲ್ಲದೆ, ಕನಿಷ್ಠ ವೇತನವನ್ನು 21 ಸಾವಿರದಿಂದ 24 ಸಾವಿರ ರು.ವರೆಗೆ ಹೆಚ್ಚಳ ಮಾಡಬೇಕು. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌)ಗಳನ್ನು ಹಿಂಪಡೆಯಬೇಕು ಎಂಬ ಬೇಡಿಕೆಯನ್ನು ಕಾರ್ಮಿಕ ಸಂಘಟನೆಗಳು ಮಂಡಿಸಿವೆ.

ಪ್ರಮುಖ ಬೇಡಿಕೆಗಳು

1. ಕನಿಷ್ಠ ವೇತನ 24 ಸಾವಿರಕ್ಕೆ ಹೆಚ್ಚಿಸಬೇಕು

2.ಸರ್ಕಾರಿ ಬ್ಯಾಂಕುಗಳ ಖಾಸಗೀಕರಣ ನಿಲ್ಲಿಸಬೇಕು

3.ಎನ್‌ಆರ್‌ಸಿ, ಸಿಎಎ ಸ್ಥಗಿತಗೊಳಿಸಬೇಕು

4.44 ಕಾರ್ಮಿಕ ಕಾಯ್ದೆಗಳನ್ನು ವಿಲೀನಗೊಳಿಸಿ 4 ಮಸೂದೆ ಮಂಡಿಸುವುದನ್ನು ಕೈಬಿಡಬೇಕು