ನವದೆಹಲಿ(ಮೇ.27):  ಕೇಂದ್ರ ಸರ್ಕಾರ 3 ಕೃಷಿ ಮಸೂದೆ ವಿರೋಧಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಗಣರಾಜ್ಯೋತ್ಸವ ದಿನ ನಿಯಂತ್ರಣ ಮೀರಿತ್ತು. ಟ್ರಾಕ್ಟರ್ ರ‍್ಯಾಲಿ ಆಯೋಜಿಸಿದ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಉದ್ರಿಕ್ತ ರೈತರ ಗುಂಪು ಐತಿಹಾಸಿಕ ಕೆಂಪು ಕೋಟೆಗೆ ಮುತ್ತಿಹಾಕಿ ದಾಂಧಲೆ ನಡೆಸಿತ್ತು. ದೆಹಲಿ ಕೆಂಪು ಕೋಟೆ ಮುತ್ತಿಗೆ ಹಾಕಿ ವಶಪಡಿಸಿಕೊಂಡ, ರೈತರ ಪ್ರತಿಭಟನಾ ಕೇಂದ್ರವನ್ನಾಗಿ ಮಾಡಲು ಸಂಚು ನಡೆಸಲಾಗಿತ್ತು ಎಂದು ದೆಹಲಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದಾರೆ.

ಕೃಷಿಕಾಯ್ದೆ ವಿರೋಧಿ ಹೋರಾಟಕ್ಕೆ 6 ತಿಂಗಳು ಪೂರ್ಣ, ಇಂದು ಕರಾಳ ದಿನ ಆಚರಣೆ

ಗಣರಾಜ್ಯೋತ್ಸವ ದಿನ ರೈತ ಪ್ರತಿಭಟನೆ ಹೆಸರಿನಲ್ಲಿ ನಡೆಸದ ಹಿಂಸಾಚಾರ, ಗಲಭೆ ಕುರಿತು ದೆಹಲಿ ಪೊಲೀಸರು 3,224 ಪುಟಗಳ ಚಾರ್ಜ‌ಶೀಟ್ ಸಲ್ಲಿಸಿದ್ದಾರೆ. ರೈತರ ಟ್ರಾಕ್ಟರ್ ರ‍್ಯಾಲಿ, ಕೆಂಪು ಕೋಟೆ ಮುತ್ತಿಗೆ, ಹಿಂಸಾಚಾರಕ್ಕೆ ಮೊದಲೇ ಪಕ್ಕಾ ಪ್ಲಾನ್ ಮಾಡಲಾಗಿತ್ತು. ಪೊಲೀಸರು ರಸ್ತೆ ತಡೆಯುತ್ತಿದ್ದಂತೆ ಗಲಭೆ ಸೃಷ್ಟಿಸಲು ಮೊದಲೇ ಪ್ಲಾನ್ ಮಾಡಲಾಗಿತ್ತು. ಕೆಂಪು ಕೋಟೆ ಮುತ್ತಿಗೆ ಹಾಕಿ, ರೈತರ ಪ್ರತಿಭಟನೆಯನ್ನು ದೆಹಲಿ ಗಡಿಯಿಂದ ಕೆಂಪುಕೋಟೆಗೆ ಸ್ಥಳಾಂತರ ಮಾಡಲು ಪ್ಲಾನ್ ಮಾಡಲಾಗಿತ್ತು. ರೈತರ ಹೆಸರಿನಲ್ಲಿ ನಡೆದ ಅತೀ ದೊಡ್ಡ ಪಿತೂರಿ ಇದಾಗಿದೆ ಎಂದು ದೆಹಲಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದಾರೆ.

ಗಣರಾಜ್ಯೋತ್ಸವ ದಿನ ವಿಶ್ವದ ಪ್ರಮುಖ ರಾಷ್ಟ್ರಗಳ ಚಿತ್ತ ಭಾರತದತ್ತ ನೆಟ್ಟಿರುತ್ತದೆ. ಈ ವೇಳೆ ಭಾರತ ಹಾಗೂ ಕೇಂದ್ರ ಸರ್ಕಾರದ ಇಮೇಜ್ ಕೆಡಿಸಲು ಹಾಗೂ ಬಿಜೆಪಿ ಸರ್ಕಾರದಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಬಿಂಬಿಸಲು ಪ್ಲಾನ್ ಮಾಡಲಾಗಿತ್ತು ಎಂದು ದೆಹಲಿ ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. 

ಕೆಂಪುಕೋಟೆ ಹಿಂಸಾಚಾರ: ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಇಬ್ಬರ ಬಂಧನ!

ಮೇ 17 ರಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ನಲ್ಲಿ ಸಲ್ಲಿಸಲಾದ  ಚಾರ್ಜ್‌ಶೀಟ್‌ನಲ್ಲಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಸೇರಿದಂತೆ ಪ್ರಮುಖ ನಾಯಕರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ. ಫೆಬ್ರವರಿ 9 ರಂದು ದೀಪ್ ಸಿಧು ಬಂಧಿಸಲಾಗಿತ್ತು. 

2020ರ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರದ ಕೃಷಿ ಕಾಯ್ದೆ ವಿರೋಧಿ ರೈತರು ದೆಹಲಿ ಸಿಂಘು ಸೇರಿದಂತೆ ಗಢಿ ಭಾಗದಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಪಂಜಾಬ್, ಹರ್ಯಾಣದಿಂದ ಲಕ್ಷಾಂತರ ರೈತರು ದೆಹಲಿ ಗಡಿಗೆ ತೆರಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಈ ಪ್ರತಿಭಟನೆ ಸ್ವರೂಪ ತೀವ್ರಗೊಳಿಸಲು ಜನವರಿ 26ರ ಗಣರಾಜ್ಯೋತ್ಸವ ದಿನ ಟ್ಟಾಕ್ಟರ್ ರ‍್ಯಾಲಿ ಆಯೋಜಿಸಲಾಗಿತ್ತು. ಈ ರ‍್ಯಾಲಿ ಹಿಂಸಾರೂಪಕ್ಕೆ ತಿರುಗಿತ್ತು. ಜೊತೆಗೆ ಕೆಂಪುಕೋಟೆಗೆ ಮುತ್ತಿಗೆ ಹಾಕಿ ರಾಷ್ಟ್ರಧ್ವಜದ ಬದಲು ಸಿಖ್ ಧ್ವಜ ಹಾರಿಸಲಾಗಿತ್ತು. ಈ ಪ್ರಕರಣ ಕುರಿತು ಚಾರ್ಜ್‌ಶೀಟ್ ಸಲ್ಲಿಸಲಾಗಿದೆ