ಕೆಂಪುಕೋಟೆ ಹಿಂಸಾಚಾರ: ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಇಬ್ಬರ ಬಂಧನ!
ಜ.26ರಂದು ರೈತರ ಟ್ರ್ಯಾಕ್ಟರ್ ಪರೇಡ್ ಪ್ರತಿಭಟನೆ ವೇಳೆ ಕೆಂಪುಕೋಟೆಗೆ ನುಗ್ಗಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ| ಇಬ್ಬರು ಪ್ರಮುಖ ಆರೋಪಿಗಳು ಅರೆಸ್ಟ್
ನವದೆಹಲಿ(ಮಾ.11): ಜ.26ರಂದು ರೈತರ ಟ್ರ್ಯಾಕ್ಟರ್ ಪರೇಡ್ ಪ್ರತಿಭಟನೆ ವೇಳೆ ಕೆಂಪುಕೋಟೆಗೆ ನುಗ್ಗಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನಿಂದರ್‌ಜಿತ್ ಸಿಂಗ್ (23), ಖೇಂಪ್ರೀತ್ ಸಿಂಗ್ (21) ಬಂಧಿತರು. ಈ ಮೂಲಕ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಮನಿಂದರ್‌ಜಿತ್ ಸಿಂಗ್ ಮೂಲತಃ ಡಚ್ ಪ್ರಜೆಯಾಗಿದ್ದು, ಬ್ರಿಟನ್ನಿನಲ್ಲಿ ನೆಲೆಸಿದ್ದ. ಕಳೆದ 2019ರಲ್ಲಿ ಈತ ಭಾರತಕ್ಕೆ ಭೇಟಿ ನೀಡಿದ್ದ. ಅನಂತರ ಕೊರೋನಾ ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ವಾಪಸ್ ತೆರಳಲು ಸಾಧ್ಯವಾಗಿರಲಿಲ್ಲ.
ಸದ್ಯ ಈತ ನಕಲಿ ದಾಖಲೆಗಳನ್ನು ಬಳಸಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಬ್ಬ ಆರೋಪಿ ಖೆಂಪ್ರೀತ್ ಸಿಂಗ್ ದೆಹಲಿ ನಿವಾಸಿ. ಈತ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ಎಂದು ಅವರು ತಿಳಿಸಿದ್ದಾರೆ.