Asianet Suvarna News Asianet Suvarna News

ಹಿಮಾಚಲ, ಪಂಜಾಬ್‌ನಲ್ಲಿ ಭಾರಿ ಮಳೆ, 93 ವರ್ಷದ ಹಿಂದೆ ನಿರ್ಮಿಸಿದ್ದ ರೈಲೈ ಸೇತುವೆ ಕಟ್‌!

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಅನಾಹುತ ಸೃಷ್ಟಿಸಿದೆ. ಮಂಡಿ ಮತ್ತು ಚಂಬಾ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ. ಕಳೆದ 24 ಗಂಟೆಗಳಲ್ಲಿ ಚಂಬಾದ ಭಟಿಯತ್‌ನಲ್ಲಿ ಮೂವರು, ಮಂಡಿಯಲ್ಲಿ ಒಬ್ಬರು ಮತ್ತು ಕಂಗ್ರಾದ ಶಹಪುರದಲ್ಲಿ ಒಬ್ಬರು ಮನೆ ಕುಸಿದು ಬಿದ್ದ ಪರಿಣಾಮ 9 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಚಂಬಾ ಮತ್ತು ಮಂಡಿ ಜಿಲ್ಲೆಗಳಲ್ಲಿ 15ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಹಮೀರ್‌ಪುರದಲ್ಲಿ 10ರಿಂದ 12 ಮನೆಗಳು ನದಿಯಲ್ಲಿ ಮುಳುಗಿವೆ. ಇವುಗಳಲ್ಲಿ ಸಿಲುಕಿದ್ದ 19 ಜನರನ್ನು ರಕ್ಷಿಸಲಾಗಿದೆ.

Torrential Rain cloud burst devastates Himachal Pradesh Railway bridge connecting Punjab collapses san
Author
Bengaluru, First Published Aug 20, 2022, 1:24 PM IST

ಧರ್ಮಶಾಲಾ (ಆ.20): ಹಿಮಾಚಲ ಪ್ರದೇಶ, ಪಂಜಾಬ್‌ ಹಾಗೂ ಉತ್ತರಾಖಂಡದ ಭಾಗಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಬೆನ್ನಲ್ಲಿಯೇ, ಈ ಮೂರೂ ರಾಜ್ಯಗಳಲ್ಲಿ ಮಳೆ ತನ್ನ ಅಬ್ಬರ ಆರಂಭಿಸಿದೆ. ಹಿಮಾಚಲ ಪ್ರದೇಶದ ಕಂಗ್ರಾ, ಕುಲು, ಮಂಡಿ, ಶಿಮ್ಲಾ, ಸೋಲನ್, ಸಿರ್ಮೌರ್, ಉನಾ, ಹಮೀರ್‌ಪುರ ಮತ್ತು ಬಿಲಾಸ್‌ಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಈ ಮಧ್ಯೆ, ಪಂಜಾಬ್ ಮತ್ತು ಹಿಮಾಚಲಕ್ಕೆ ಸಂಪರ್ಕ ಕಲ್ಪಿಸುವ ರೈಲಿನ ಚಾಕಿ ಸೇತುವೆ ಮಳೆಯಿಂದಾಗಿ ಕೊಚ್ಚಿ ಹೋಗಿದೆ. 800 ಮೀಟರ್‌ ಉದ್ದದ ಈ ಹಳೆ ರೈಲ್ವೆ ಸೇತುವೆಯನ್ನು 93 ವರ್ಷದ ಹಿಂದೆ ನಿರ್ಮಾಣ ಮಾಡಲಾಗಿತ್ತು.  ಒಂದು ವಾರದ ಹಿಂದೆಯಷ್ಟೇ ಈ ರೈಲ್ವೆ ಸೇತುವೆಯನ್ನು ಅನ್‌ಸೇಫ್‌ ಎಂದು ಹೇಳಲಾಗಿತ್ತು. ಆಗಸ್ಟ್‌ ಮೊದಲ ವಾರದಿಂದ ಈ ರೈಲ್ವೆ ಸೇತುವೆಯನ್ನು ಸಂಚಾರಕ್ಕಾಗಿ ಬಂದ್‌ ಮಾಡಲಾಗಿತ್ತು. ಮಂಡಿಯ ಗೋಹರ್ ಎಂಬಲ್ಲಿ ಗುಡ್ಡ ಕುಸಿದು ಒಂದೇ ಕುಟುಂಬದ ಎಂಟು ಜನ ಕಾಶನ್ ಪಂಚಾಯತ್ ನ ಜಡ್ ಮನ್ ಗ್ರಾಮದಲ್ಲಿ ಸಿಕ್ಕಿಬಿದ್ದಿದ್ದಾರೆ. ಇಡೀ ಕುಟುಂಬ ಮಧ್ಯರಾತ್ರಿ ಅವರ ಮನೆಯಲ್ಲಿ ಮಲಗಿತ್ತು. ಇದ್ದಕ್ಕಿದ್ದಂತೆ ಮನೆಯ ಹಿಂದಿನ ಗುಡ್ಡ ಕುಸಿದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.

ಕೊಚ್ಚಿಹೋದ ಕಾರು, ಬಾಲಕಿ ಮೃತದೇಹ ಪತ್ತೆ: ಮಂಡಿಯ ಕತೌಲಾದ ಬಘಿ ನಾಲಾ ಪ್ರವಾಹದಲ್ಲಿ ಕಾರು ಹಾಗೂ ಅದರಲ್ಲಿದ್ದ ಆರು ಮಂದಿ ಕೊಚ್ಚಿ ಹೋಗಿದ್ದಾರೆ. 15 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮತ್ತೊಂದೆಡೆ, ಚಂಬಾ ಜಿಲ್ಲೆಯ ಚುವಾಡಿಯ ಬಾನೆಟ್ ಗ್ರಾಮದಲ್ಲಿ ಭೂಕುಸಿತದಿಂದ ಮೂವರು ನಾಪತ್ತೆಯಾಗಿದ್ದಾರೆ. ಇನ್ನೂ ಮಾಹಿತಿ ಲಭ್ಯವಿಲ್ಲದ ರಾಜ್ಯದ ಹಲವು ಪ್ರದೇಶಗಳಿವೆ. ಇದರಿಂದಾಗಿ ಮಧ್ಯಾಹ್ನದ ವೇಳೆಗೆ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.


ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆ ಎಚ್ಚರಿಕೆ: ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ ಮುಂದಿನ 96 ಗಂಟೆಗಳ ಕಾಲ ಭಾರೀ ಮಳೆ ಮುಂದುವರೆಯಲಿದೆ. ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹಳದಿ ಅಲರ್ಟ್ ಘೋಷಿಸಲಾಗಿದೆ. ಲಾಹೌಲ್ ಸ್ಪಿತಿ ಹೊರತುಪಡಿಸಿ 11 ಜಿಲ್ಲೆಗಳಿಗೆ ಈ ಎಚ್ಚರಿಕೆ ನೀಡಲಾಗಿದೆ.
ಕಾಂಗ್ರಾದಲ್ಲಿ 24 ಗಂಟೆಗಳಲ್ಲಿ 346.6 ಮಿಮೀ ಮಳೆ: ಹಿಮಾಚಲದಲ್ಲಿ ಕಳೆದ 24 ಗಂಟೆಗಳಲ್ಲಿ ಕಾಂಗ್ರಾ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 346.6 ಮಿಮೀ (ಎಂಎಂ) ಮಳೆಯಾಗಿದೆ. ಮಂಡಿಯಲ್ಲಿ 119.6 ಮಿಮೀ, ಡಾಲ್‌ಹೌಸಿಯಲ್ಲಿ 111 ಮಿಮೀ, ಪಾಲಂಪುರದಲ್ಲಿ 113 ಮಿಮೀ, ಸುಂದರನಗರದಲ್ಲಿ 77.7 ಮಿಮೀ, ಧರ್ಮಶಾಲಾ 333 ಮಿಮೀ, ಬಾರ್ತಿನ್ 60, ಶಿಮ್ಲಾ 57.7 ಮಿಮೀ ಮತ್ತು ಕುಫ್ರಿಯಲ್ಲಿ 69 ಮಿಮೀ ಮಳೆ ದಾಖಲಾಗಿದೆ.

Karnataka Rain Updates: 6 ಜಿಲ್ಲೆಗಳಲ್ಲಿ ಗುಡ್ಡ ಕುಸಿತ: 28 ತಾಲೂಕಿನ ಜನರಿಗೆ ಪ್ರಾಣ ಭಯ

4 ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 336 ರಸ್ತೆಗಳು ಮತ್ತು 1525 ಎಲೆಕ್ಟ್ರಿಕ್‌ ಟ್ರಾನ್ಸ್‌ಫರ್ಮರ್‌ ಬಂದ್: ಹಿಮಾಚಲದಲ್ಲಿ ಭಾರೀ ಮಳೆಯಿಂದಾಗಿ 4 ರಾಷ್ಟ್ರೀಯ ಹೆದ್ದಾರಿಗಳು ಮತ್ತು 1525 ಎಲೆಕ್ಟ್ರಿಕ್‌ ಟ್ರಾನ್ಸ್‌ಫರ್ಮರ್‌  ಸೇರಿದಂತೆ 336 ರಸ್ತೆಗಳನ್ನು ಮುಚ್ಚಲಾಗಿದೆ. ಸುಮಾರು 150 ಕುಡಿಯುವ ನೀರಿನ ಯೋಜನೆಗಳು ಅತಿವೃಷ್ಟಿಯಿಂದ ಹಾನಿಗೆ ಒಳಗಾಗಿದ್ದು, ಜನರು ನೀರಿನ ಕೊರತೆ ಎದುರಿಸುತ್ತಿದ್ದಾರೆ.

ಅಮರನಾಥ ಅಪರ ದರ್ಶನ; ಮೇಘಸ್ಫೋಟದ ನಂತರದ ಕ್ಷಣಗಳು

1135 ಕೋಟಿ ಮೌಲ್ಯದ ಆಸ್ತಿ ನಷ್ಟ: ಭಾರೀ ಮಳೆಯಿಂದಾಗಿ ಮಂಡಿ ಜಿಲ್ಲಾಡಳಿತ ಶಾಲೆಗಳನ್ನು ಮುಚ್ಚಿದೆ. ಚಂಬಾ ಮತ್ತು ಕುಲುವಿನಲ್ಲಿಯೂ ಕೆಲವು ಶಾಲೆಗಳನ್ನು ಮುಚ್ಚಲಾಗಿದೆ. ರಾಜ್ಯದಲ್ಲಿ ಮಳೆಯಿಂದಾಗಿ 1135 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಮತ್ತು ಖಾಸಗಿ ಆಸ್ತಿ ನಾಶವಾಗಿದೆ. ಮಳೆಗಾಲದ ರಸ್ತೆ ಅಪಘಾತ, ಮೇಘಸ್ಫೋಟ, ಪ್ರವಾಹ, ಭೂಕುಸಿತದಲ್ಲಿ ಈವರೆಗೆ 217 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶಿಮ್ಲಾ ಜಿಲ್ಲೆಯಲ್ಲಿ ಗರಿಷ್ಠ 35 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕುಲುವಿನಲ್ಲಿ 31 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದ ಬಹುತೇಕ ನದಿಗಳಿಗೆ ನಿರ್ಮಿಸಿರುವ ಅಣೆಕಟ್ಟುಗಳು ಅಪಾಯದ ಮಟ್ಟ ತಲುಪಿವೆ. ಲಾರ್ಜಿ ಅಣೆಕಟ್ಟು 969 ಮೀಟರ್ ವರೆಗೆ ತುಂಬಿದ್ದು, ಅಪಾಯದ ಮಟ್ಟ 970 ಮೀಟರ್ ಇತ್ತು. ನಾಥಪಾ ಅಣೆಕಟ್ಟು 1494.5 ಮೀಟರ್‌ಗೆ ಹೋಲಿಸಿದರೆ 1494 ಮೀಟರ್, ಸೈಂಜ್ 1753 ಕ್ಕೆ ಹೋಲಿಸಿದರೆ 1752 ಮೀಟರ್, ಚಂಜು-ಏಕ್ 1441 ಕ್ಕೆ ಹೋಲಿಸಿದರೆ 1440.10 ಮೀಟರ್ ತುಂಬಿದೆ.

Follow Us:
Download App:
  • android
  • ios