ಒಡಿಶಾದಲ್ಲಿ ನಡೆಸಿದ ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ತಲೆಗೆ 1.1 ಕೋಟಿ ರು. ಬಹುಮಾನ ಹೊಂದಿದ್ದ ಗಣೇಶ್ ಉಯಿಕೆ (69) ಸೇರಿದಂತೆ 6 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಇದು ಇನ್ನು 3 ತಿಂಗಳಲ್ಲಿ ದೇಶವನ್ನು ನಕ್ಸಲ್ ಮುಕ್ತ ಮಾಡುವ ಕೇಂದ್ರ ಸರ್ಕಾರ ಪ್ರಯತ್ನಕ್ಕೆ ದೊಡ್ಡ ಯಶಸ್ಸು ಎಂದು ಬಣ್ಣಿಸಲಾಗಿದೆ.
ಭುವನೇಶ್ವರ: ಭದ್ರತಾ ಪಡೆಗಳು ಒಡಿಶಾದಲ್ಲಿ ನಡೆಸಿದ ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ತಲೆಗೆ 1.1 ಕೋಟಿ ರು. ಬಹುಮಾನ ಹೊಂದಿದ್ದ ಟಾಪ್ ಮಾವೋವಾದಿ ನಾಯಕ ಗಣೇಶ್ ಉಯಿಕೆ (69) ಸೇರಿದಂತೆ 6 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಇದು ಇನ್ನು 3 ತಿಂಗಳಲ್ಲಿ ದೇಶವನ್ನು ನಕ್ಸಲ್ ಮುಕ್ತ ಮಾಡುವ ಕೇಂದ್ರ ಸರ್ಕಾರ ಪ್ರಯತ್ನಕ್ಕೆ ದೊಡ್ಡ ಯಶಸ್ಸು ಎಂದು ಬಣ್ಣಿಸಲಾಗಿದೆ.
ಈ ಕಾರ್ಯಾಚರಣೆ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘6 ನಕ್ಸಲರ ಹತ್ಯೆಯೊಂದಿಗೆ ಒಡಿಶಾ ನಕ್ಸಲ್ ಮುಕ್ತವಾಗುವ ಸಮೀಪದಲ್ಲಿದೆ. 2026ರ ಮಾ.31ರ ಒಳಗಾಗಿ ನಕ್ಸಲ್ ಮುಕ್ತ ಭಾರತ ನಿರ್ಮಾಣ ಮಾಡುತ್ತೇವೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಕಾರ್ಯಾಚರಣೆ ಹೇಗೆ?:
ಗುಪ್ತಚರ ಮಾಹಿತಿಯ ಆಧಾರದಲ್ಲಿ ಭದ್ರತಾ ಪಡೆಯ 23 ತಂಡಗಳು ಒಟ್ಟಾಗಿ ಕಂದಮಾಲ್ ಜಿಲ್ಲೆ ಹಾಗೂ ರಂಭಾ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದವು. ಆಗ ನಕ್ಸಲರೊಂದಿಗೆ ಮುಖಾಮುಖಿಯಾಗಿದ್ದು, ಎರಡೂ ಕಡೆಯವರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಗಣೇಶ್ ಸೇರಿದಂತೆ ನಾಲ್ವರು ನಕ್ಸಲರು ಸಾವನ್ನಪ್ಪಿದ್ದಾರೆ. ಅವರಿಂದ 2 ಐಎನ್‌ಎಸ್‌ಎಎಸ್ ಮತ್ತು .303 ರೈಫಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕೂ ಮುನ್ನ ಬುಧವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದರು.
ಈ ವರ್ಷ ಈವರೆಗೆ ಒಡಿಶಾದಲ್ಲಿ ಸುಮಾರು 128 ನಕ್ಸಲರನ್ನು ಹೊಡೆದುರುಳಿಸಲಾಗಿದೆ.
ಯಾರೀ ಉಯಿಕೆ?:
ನಿಷೇಧಿತ ಸಂಘಟನೆಯಾದ ಸಿಪಿಎಂನ ಮುಖ್ಯಸ್ಥನಾಗಿದ್ದ ಗಣೇಶ್ ಉಯಿಕೆ, ತೆಲಂಗಾಣದ ನಲ್ಗೊಂಡಾ ಜಿಲ್ಲೆಯ ಚೆಂಡೂರು ಮಂದಲದವನು. ಈತನನ್ನು ಪಕ್ಕಾ ಹನುಮಂತು, ರಾಜೇಶ್ ತಿವಾರಿ, ರೂಪಾ ಎಂಬ ಗೌಪ್ಯ ಹೆಸರುಗಳಿಂದ ಕರೆಯಲಾಗುತ್ತಿತ್ತು. ಯುವಕನಾಗಿದ್ದಾಗಲೇ ಈತ ನಕ್ಸಲ್ ಸಂಘಟನೆ ಸೇರಿ, ಛತ್ತೀಸ್‌ಗಢದಲ್ಲಿ ಸಕ್ರಿಯವಾಗಿದ್ದ.
ಒಂದೇ ಟಾಪ್ ತಲೆ ಬಾಕಿ:
ನಕ್ಸಲ್ ನಾಯಕರಾದ ಹಿದ್ಮಾ ಹಾಗೂ ಗಣೇಶ್ ಸಾವಿನೊಂದಿಗೆ ದೇಶದ ನಕ್ಸಲ್ ಚಳವಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಹೀಗಾಗಿ ದೇಶದಲ್ಲಿನ್ನು ಉಳಿದಿರುವ ಒಬ್ಬನೇ ಸಕ್ರಿಯ ಟಾಪ್ ನಕ್ಸಲ್ ನಾಯಕನೆಂದರೆ ತಿಪ್ಪಿರಿ ತಿರುಪತಿ ಅಲಿಯಾಸ್ ದೇವುಜಿ ಎಂಬಾತ ಎನ್ನಲಾಗಿದೆ. ಈತ ನಿಷೇಧಿತ ಸಿಪಿಐ (ಮಾವೋವಾದಿ) ಪ್ರಧಾನ ಕಾರ್ಯದರ್ಶಿ.
ತೆಲಂಗಾಣ ಮೂಲದವನಾದ ದೇವುಜಿ ವಯಸ್ಸೀಗ 60 ದಾಟಿದೆ ಎನ್ನಲಾಗಿದೆ. 2010ರಲ್ಲಿ ದಂತೇವಾಡದಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಬಲಿಪಡೆದ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದಾನೆ. ಪ್ರಸ್ತುತ ಎಲ್ಲಿ ಅಡಗಿಕುಳಿತಿದ್ದಾನೆ ಎಂಬ ಮಾಹಿತಿಯಿಲ್ಲ.
ಇನ್ನೊಬ್ಬ ನಕ್ಸಲ್ ಗಣಪತಿ ತಲೆಗೆ ₹3.5 ಕೋಟಿ: ಪ್ರಸ್ತುತ ಅತಿಹೆಚ್ಚು ಬಹುಮಾನ ಹೊಂದಿರುವ ನಕ್ಸಲ್ ನಾಯಕನ ತಲೆ ಎಂದರೆ ಅದು ಇನ್ನೊಬ್ಬ ನಕ್ಸಲೀಯ ಗಣಪತಿಯದ್ದು. ಮೊದಲಿಗೆ ಈತನ ಸುಳಿವಿಗೆ ಎನ್‌ಐಎ 15 ಲಕ್ಷ ರು. ಬಹುಮಾನ ಘೋಷಿಸಿತ್ತು. ಆದರೆ ಆತನ ಪ್ರಭಾವ ಮತ್ತು ಸ್ಥಾನ ಏರಿಕೆಯಾದಂತೆ ಬಹುಮಾನದ ಮೊತ್ತವೂ ಹೆಚ್ಚಿ 3.6 ಕೋಟಿ ರು. ಆಗಿದೆ. ಇದು ಪ್ರಸ್ತುತ ಮಾವೋವಾದಿಯೊಬ್ಬನ ತಲೆಗೆ ಘೋಷಣೆಯಾಗಿರುವ ಅತಿದೊಡ್ಡ ಬಹುಮಾನವಾಗಿದೆ. ಆದರೆ ಆತ ಸಕ್ರಿಯನಾಗಿಲ್ಲ. ಹೀಗಾಗಿ ಸಕ್ರಿಯ ನಕ್ಸಲ್ ನಾಯಕ ದೇವುಜಿ ಮಾತ್ರ ಪೊಲೀಸರಿಗೆ ಬೇಕಾಗಿದ್ದಾನೆ.
2026ರ ಮಾ.31ರೊಳಗೆ ಭಾರತ ನಕ್ಸಲ್ ಮುಕ್ತ
ಇದೀಗ 6 ನಕ್ಸಲರ ಹತ್ಯೆಯೊಂದಿಗೆ ಒಡಿಶಾ ನಕ್ಸಲ್ ಮುಕ್ತವಾಗುವ ಸಮೀಪದಲ್ಲಿದೆ. 2026ರ ಮಾ.31ರ ಒಳಗಾಗಿ ಭಾರತವನ್ನು ನಕ್ಸಲ್ ಮುಕ್ತ ಮಾಡುವತ್ತ ಇದು ದೊಡ್ಡ ಹೆಜ್ಜೆಯಾಗಿದೆ.
ಅಮಿತ್ ಶಾ, ಗೃಹ ಸಚಿವ


