Asianet Suvarna News Asianet Suvarna News

ಟಿಎಂಸಿ ಶಾಸಕ, ಸಂಸದರಿಂದಲೂ ದ್ರೌಪದಿ ಮುರ್ಮುಗೆ ಮತದಾನ..?

ವಿರೋಧ ಪಕ್ಷಗಳ ಪರ ರಾಷ್ಟ್ರಪತಿ ಅಭ್ಯರ್ಥಿಯಾಗಲು ಯಶವಂತ್ ಸಿನ್ಹಾ ಟಿಎಂಸಿಗೆ ರಾಜೀನಾಮೆ ನೀಡಿದ್ದರು. ಆದರೆ, ಟಿಎಂಸಿಯ ಶಾಸಕ, ಸಂಸದರೇ ದ್ರೌಪದಿ ಮುರ್ಮುಗೆ ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಲಾಗಿದೆ.

tmc mla mp supports draupadi murmu suvendu adhikari ash
Author
Bangalore, First Published Jul 22, 2022, 5:58 PM IST

ಭಾರತದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಅವರ ಆಯ್ಕೆ ನಿರೀಕ್ಷಿತವೇ ಆಗಿದ್ದರೂ, ಬಿಜೆಪಿಯ ನಿರೀಕ್ಷೆಗಿಂತ ದ್ರೌಪದಿ ಮುರ್ಮು ಪರವಾಗಿ ಹೆಚ್ಚು ಮತಗಳು ಬಂದಿವೆ. ಈ ಪೈಕಿ ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾಗೆ ತಮ್ಮ ಮಾಜಿ ಪಕ್ಷವಾದ ಟಿಎಂಸಿಯ ಶಾಸಕ, ಸಂಸದರೇ ದ್ರೌಪದಿ ಮುರ್ಮುಗೆ ಮತದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಹೌದು, ಕೇಂದ್ರದ ಮಾಜಿ ಸಚಿವ ಯಶವಂತ್‌ ಸಿನ್ಹಾ ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಲು ತಾವು ಕಳೆದ ವರ್ಷವಷ್ಟೇ ಸೇರಿದ್ದ ತೃಣಮೂಲ ಕಾಂಗ್ರೆಸ್‌ ಅನ್ನು ತೊರೆದಿದ್ದರು. ಆದರೆ, ಟಿಎಂಸಿಯ ಹಲವು ಶಾಸಕ, ಸಂಸದರೇ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಪರವಾಗಿ ಬೆಂಬಲ ಸೂಚಿಸಿ ಮತದಾನ ಮಾಡಿದ್ದಾರೆ ಎಂದು ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ವಿಧಾನಸಭಾ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಹೇಳಿಕೊಂಡಿದ್ದಾರೆ. 

ದ್ರೌಪದಿ ಮಹಾಭಾರತದ ರಾಷ್ಟ್ರಪತಿ: ಜುಲೈ 25ಕ್ಕೆ ಪ್ರಮಾಣ

 ಪಶ್ಚಿಮ ಬಂಗಾಳದ 291 ಶಾಸಕರು ಮತದಾನ ಮಾಡಿದ್ದು, ಈ ಪೈಕಿ 216 ಶಾಸಕರು ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾಗೆ ಮತ ಹಾಕಿದ್ದಾರೆ. ಇನ್ನುಳಿದ 71 ಮತಗಳು ದ್ರೌಪದಿ ಮುರ್ಮು ಪರವಾಗಿ ಬಂದಿವೆ. ಹಾಗೂ ನಾಲ್ಕು ಮತಗಳು ತಿರಸ್ಕೃತಗೊಂಡಿವೆ ಎಂದೂ ತಿಳಿದುಬಂದಿದೆ.

‘’ನಾನು ಭರವಸೆ ನೀಡಿದಂತೆ ಬಂಗಾಳ ಬಿಜೆಪಿಯ ಎಲ್ಲ 70 ಶಾಸಕರು ಶ್ರೀಮತಿ ದ್ರೌಪದಿ ಮುರ್ಮು ಜೀ ಪರವಾಗಿ ಮತ ಹಾಕಿದ್ದಾರೆ. ಇನ್ನೊಂದೆಡೆ, ಟಿಎಂಸಿಯ ಒಬ್ಬರು ಶಾಸಕರು ನೂತನ ರಾಷ್ಟ್ರಪತಿಯ ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ. ಅಲ್ಲದೆ, ಅವರ ಮತಗಳು ತಿರಸ್ಕೃತಗೊಳ್ಳುವಂತೆಯೂ ನಾಲ್ವರು ಟಿಎಂಸಿ ಶಾಸಕರು ನೋಡಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 71 ಮತಗಳು ಶ್ರೀಮತಿ ಮುರ್ಮು ಜೀ ಪರವಾಗಿ ಬಂದಿವೆ’’ ಎಂದು ಸುವೇಂದು ಅಧಿಕಾರಿ ಟ್ವೀಟ್‌ ಮಾಡಿದ್ದಾರೆ.

ಅಲ್ಲದೆ, ‘’ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮತದಾನ ಮಾಡಿದ 34 ಟಿಎಂಸಿ ಸಂಸದರ ಪೈಕಿ (ಲೋಕಸಭೆ ಹಾಗೂ ರಾಜ್ಯಸಭೆ ಸಂಸದರು) ಕನಿಷ್ಠ ಮತಗಳು ಶ್ರೀಮತಿ ದ್ರೌಪದಿ ಮುರ್ಮು ಜೀ ಪರವಾಗಿ ಬಿದ್ದಿವೆ. ಅಂದರೆ ನಾಲ್ವರು ಅಡ್ಡ ಮತದಾನ ಮಾಡಿದ್ದಾರೆ. ಈ ಪೈಕಿ, ಎರಡು ಮತಗಳು ದ್ರೌಪದಿ ಪರವಾಗಿ ಪರಿಗಣನೆಯಾಗಿದ್ದರೆ, ಇನ್ನೆರಡು ಮತಗಳು ತಿರಸ್ಕಾರಗೊಂಡಿವೆ. ಆ ನಾಲ್ವರು ಟಿಎಂಸಿ ಸಂಸದರಿಗೆ ಕೇಸರಿ ಪಕ್ಷದ ಶುಭಾಶಯಗಳು’’ ಎಂದೂ ಸುವೇಂದು ಅಧಿಕಾರಿ  ತಿಳಿಸಿದ್ದಾರೆ. 

ಐಷಾರಾಮಿ ಹೋಟೆಲ್‌ನಲ್ಲಿದ್ದ ಬಿಜೆಪಿ ಶಾಸಕರು..!
ಯಶವಂತ ಸಿನ್ಹಾ ಪರವಾಗಿ ಅಡ್ಡ ಮತದಾನ ಮಾಡದಂತೆ ನೋಡಿಕೊಳ್ಳಲು ಕೇಸರಿ ಪಕ್ಷ ತಮ್ಮ ಶಾಸಕರನ್ನು ಕೋಲ್ಕತ್ತ ಬಳಿಯ ನ್ಯೂ ಟೌನ್‌ನಲ್ಲಿರುವ ಐಷಾರಾಮಿ ಹೋಟೆಲ್‌ವೊಂದರಲ್ಲಿ ಇಡಲಾಗಿತ್ತು. 

ಇನ್ನೊಂದೆಡೆ, ಸುವೇಂದು ಅಧಿಕಾರಿಯ ಟ್ವೀಟ್‌ ಅನ್ನು ಸಮರ್ಥಿಸಿಕೊಂಡ ಪಶ್ಚಿಮ ಬಂಗಾಳ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ರಾಹುಲ್‌ ಸಿನ್ಹಾ ಸಹ ಹಲವು ಟಿಎಂಸಿ ಎಂಎಲ್‌ಎ, ಎಂಪಿಗಳು ಮುರ್ಮು ಪರವಾಗಿ ಮತದಾನ ಮಾಡಿರುವ ಸಾಕಷ್ಟು ಪುರಾವೆಗಳು ಇದೆ ಎಂದಿದ್ದಾರೆ.
ಟಿಎಂಸಿ ನಾಯಕತ್ವದ ವೈಖರಿ ಕುರಿತು ಹಲವು ಸ್ವಪಕ್ಷೀಯ ಶಾಸಕ, ಸಂಸದರು ಅಸಮಾಧಾನಗೊಂಡಿದ್ದಾರೆ. ಅವರ ಅತೃಪ್ತಿಗೆ ಈ ಅಡ್ಡ ಮತದಾನವೇ ಸಾಕ್ಷಿ ಎಂದೂ ಸಿನ್ಹಾ ಹೇಳಿದ್ದಾರೆ.

ಅಡ್ಡ ಮತ ಅಲ್ಲಗಳೆದ ಟಿಎಂಸಿ
ಆದರೆ, ಬಿಜೆಪಿ ಹೇಳಿಕೆಗಳನ್ನು ಅಲ್ಲಗಳೆದ ಟಿಎಂಸಿ, ತಮ್ಮ ಶಾಸಕ - ಸಂಸದರು ಯಾವುದೇ ರೀತಿ ಅಡ್ಡ ಮತದಾನ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಟಿಎಂಸಿ ಶಾಸಕರು, ಸಂಸದರಿಂದ ಆ ರೀತಿಯ ಯಾವುದೇ ಅಡ್ಡ ಮತದಾನ ನಡೆದಿಲ್ಲ. ನಮ್ಮ ಪಕ್ಷದಲ್ಲೀಗ ಯಾವುದೇ ಪಕ್ಷ ವಿರೋಧಿಗಳು ಇಲ್ಲ. ಟಿಎಂಸಿ ಶಿಸ್ತಿನ ಪಕ್ಷವಾಗಿದ್ದು, ಬಿಜೆಪಿಯಂತಹ ಕೋಮುವಾದಿ ಪಕ್ಷದ ಪರ ಅಭ್ಯರ್ಥಿಗೆ ಮತ ಹಾಕುವ ಯಾವುದೇ ಸಾಧ್ಯತೆ ಇಲ್ಲ ಎಂದು ರಾಜ್ಯ ಸಚಿವ ಫಿರ್ಹಾದ್‌ ಹಕೀಮ್‌ ಹೇಳಿದ್ದಾರೆ. 

ರಾಷ್ಟ್ರಪತಿ ಕಿರೀಟ ಮುಡಿಗೇರಿಸಿದ ಭಾರತದ ಮೊದಲ ಆದಿವಾಸಿ ಮಹಿಳೆ, ಸಿನ್ಹ ವಿರುದ್ದ ಭರ್ಜರಿ ಗೆಲುವು!

294 ಶಾಸಕರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 291 ಶಾಸಕರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಹಜ್‌ಗೆ ಪ್ರಯಾಣ ಮಾಡುತ್ತಿದ್ದ ಕಾರಣ ಟಿಎಂಸಿ ಶಾಸಕ ರಫೀಕುಲ್‌ ಇಸ್ಲಾಂ ಮೋಂಡಲ್‌ ಮತದಾನ ಮಾಡಿಲ್ಲ. ಅಲ್ಲದೆ, ಐಎಸ್‌ಎಫ್‌ ಶಾಸಕ ನೌಷಧ್‌ ಸಿದ್ದಿಕಿ ಮತದಾನದಿಂದ ದೂರವುಳಿದಿದ್ದರೆ, ಟಿಎಂಸಿ ಶಾಸಕ ಸಾಧನ್‌ ಪಾಂಡೆ ನಿಧನದಿಂದ ಒಂದು ಸೀಟು ತೆರವಾಗಿದೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios