ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, ಕೆಲವೇ ಪುರುಷರು ಇಂತಹ ಅಪರಾಧಗಳನ್ನು ಮಾಡುತ್ತಾರೆ ಎಂದು ಹೇಳಿದ್ದಲ್ಲದೆ, ಒಬ್ಬ ಸ್ನೇಹಿತ ತನ್ನ ಸ್ನೇಹಿತೆಯನ್ನೇ ರೇಪ್‌ ಮಾಡಿದ್ರೆ ಸರ್ಕಾರ ಏನು ಮಾಡೋಕೆ ಆಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. 

ನವದೆಹಲಿ (ಜೂ.28): ಕೋಲ್ಕತ್ತಾದ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನಲ್ಲಿ ಕಾನೂನು ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರದ ಬಗ್ಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ನೀಡಿರುವ ಹೇಳಿಕೆ ಶುಕ್ರವಾರ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬ್ಯಾನರ್ಜಿ, ಕೆಲವೇ ಪುರುಷರು ಇಂತಹ ಅಪರಾಧಗಳನ್ನು ಮಾಡುತ್ತಾರೆ ಎಂದು ಹೇಳಿದ್ದಲ್ಲದೆ, ಒಬ್ಬ ಸ್ನೇಹಿತ ತನ್ನ ಸ್ನೇಹಿತೆಯನ್ನೇ ರೇಪ್‌ ಮಾಡಿದ್ರೆ ಸರ್ಕಾರ ಏನು ಮಾಡೋಕೆ ಆಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.

"ನಾನು ಕಾನೂನು ಕಾಲೇಜಿನಲ್ಲಿ ನಡೆದ ಘಟನೆಯ ಪರ ವಕೀಲನಲ್. ಆದರೆ ಆರೋಪಿಯನ್ನು ಬಂಧಿಸಬೇಕು. ಕೆಲವು ಪುರುಷರು ಈ ರೀತಿಯ ಅಪರಾಧ ಮಾಡುತ್ತಾರೆ. ಆದರೆ ಸ್ನೇಹಿತನೊಬ್ಬ ತನ್ನ ಸ್ನೇಹಿತೆಯ ಮೇಲೆ ಅತ್ಯಾಚಾರ ಮಾಡಿದರೆ ಏನು ಮಾಡೋಕೆ ಆಗುತ್ತೆ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇದು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳನ್ನು ಒಳಗೊಂಡ ಘಟನೆ ಎಂದು ಟಿಎಂಸಿ ಸಂಸದರು ತಿಳಿಸಿದ್ದು, ಪೊಲೀಸರು ಯಾವಾಗಲೂ ಇಲ್ಲದಿದ್ದರೆ ಸಂತ್ರಸ್ಥೆಯನ್ನು ಯಾರು ರಕ್ಷಿಸುತ್ತಾರೆ ಎಂದು ಪ್ರಶ್ನಿಸಿದರು.

"ಕಾಲೇಜುಗಳಲ್ಲಿ ಪೊಲೀಸರು ಇರುತ್ತಾರೆಯೇ? ಇದನ್ನು ವಿದ್ಯಾರ್ಥಿಗಳು ಇನ್ನೊಬ್ಬ ವಿದ್ಯಾರ್ಥಿನಿಗೆ ಮಾಡಿದ್ದಾರೆ. ಸಂತ್ರಸ್ಥೆಯನ್ನು ಯಾರು ರಕ್ಷಿಸುತ್ತಾರೆ? ಇದು (ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜು) ಸರ್ಕಾರಿ ಕಾಲೇಜು. ಪೊಲೀಸರು ಯಾವಾಗಲೂ ಅಲ್ಲಿ ಇರುತ್ತಾರೆಯೇ?" ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ದಕ್ಷಿಣ ಕೋಲ್ಕತ್ತಾದಲ್ಲಿ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿನಿಯೊಬ್ಬಳ ಮೇಲೆ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಇಬ್ಬರು ಹಿರಿಯ ವಿದ್ಯಾರ್ಥಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮೂವರು ಆರೋಪಿಗಳನ್ನು ಇಂದು ಮುಂಜಾನೆ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ಅಲ್ಲಿ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಬ್ಯಾನರ್ಜಿ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಬಿಜೆಪಿ ಪಶ್ಚಿಮ ಬಂಗಾಳ ತಿರುಗೇಟು ನೀಡಿದೆ. ಎಕ್ಸ್‌ ಪೋಸ್ಟ್‌ನಲ್ಲಿ ಬರೆದಿರುವ ಬಿಜೆಪಿ, 'ಬ್ಯಾನರ್ಜಿ ಆರೋಪಿಗಳ ಬಗ್ಗೆ ಸಹಾನುಭೂತಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದೆ "ಟಿಎಂಸಿ ಸಂಸದರು ಅತ್ಯಾಚಾರಿಗಳನ್ನು ಬೆಂಬಲಿಸಿದ್ದಾರೆ! ಕಸ್ಬಾದಲ್ಲಿ, ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಟಿಎಂಸಿಪಿ ನಾಯಕ ಮತ್ತು ಅವರ ತಂಡವು ಸಾಮೂಹಿಕ ಅತ್ಯಾಚಾರ ಮಾಡಿದೆ. ಆದರೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮಹಿಳೆಯರ ಸುರಕ್ಷತೆಯ ಕಾಳಜಿಯನ್ನು ಕೇವಲ 'ರಾಜಕೀಯ ಅಜೆಂಡಾ' ಎಂದು ಕರೆದಿದ್ದಾರೆ" ಎಂದು ಬಿಜೆಪಿ ಪೋಸ್ಟ್ ಮಾಡಿದೆ.

ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಪ್ರಕರಣದ ಕುರಿತು ಬ್ಯಾನರ್ಜಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ಬಿಜೆಪಿ, "ಆರ್‌ಜಿ ಕರ್ ಅತ್ಯಾಚಾರ ಪ್ರಕರಣದಲ್ಲಿ, ಬಂಗಾಳವು "ರಾತ್ ಜಾಗೋ" ಮೂಲಕ ಪ್ರತಿಭಟನೆ ನಡೆಸುತ್ತಿದ್ದಂತೆ, ಕಲ್ಯಾಣ್ ಚಳುವಳಿಯನ್ನು ಅಣಕಿಸುತ್ತಾ, ಕಾಲೇಜಿನೊಳಗೆ ಅತ್ಯಾಚಾರ ನಡೆದರೆ ಸರ್ಕಾರ ರಕ್ಷಣೆ ಕೊಡೋಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದರು. ಇದನ್ನು ಟೀಕಿಸಿದ್ದ ಬಿಜೆಪಿ, ಪೊಲೀಸರು ಟಿಎಂಸಿ ನಾಯಕರು ಮತ್ತು ಮಮತಾ ಬ್ಯಾನರ್ಜಿಗೆ ಛತ್ರಿ ಹಿಡಿಯಬಹುದು, ಆದರೆ ಮಹಿಳೆಯರನ್ನು ರಕ್ಷಿಸಬಾರದೇ?" ಎಂದು ಪ್ರಶ್ನಿಸಿದ್ದರು. "ಈ ಅವಮಾನಕರ ಮನೋಭಾವದಿಂದಾಗಿ ಬಂಗಾಳದ ಮಹಿಳೆಯರು ತಾವು ಅಸುರಕ್ಷಿತ ಎನ್ನುವ ಭಾವನೆಗೆ ಬಂದಿದ್ದಾರೆ" ಎಂದು ಪಕ್ಷವು ಹೇಳಿದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಬ್ಯಾನರ್ಜಿ ಅವರನ್ನು ಟೀಕಿಸುತ್ತಾ, ಅವರು "ನಾಚಿಕೆಯಿಲ್ಲದಿರುವಿಕೆಯ ಎಲ್ಲಾ ಮಿತಿಗಳನ್ನು" ದಾಟಿದ್ದಾರೆ ಎಂದು ಹೇಳಿದರು.

"ಅವರು ಅಪರಾಧವನ್ನು "ಸಹಪಾಠಿಗಳು" ಮಾಡಿದ್ದಾರೆ ಎಂದು ಹೇಳುವ ಮೂಲಕ ಇಡೀ ಘಟನೆಯಲ್ಲಿ ಸಣ್ಣದು ಎನ್ನುವಂತೆ ಮಾಡಿದ್ದಾರೆ. ಹಾಗಾದರೆ ಸಹಪಾಠಿಗಳಿಂದ ಅತ್ಯಾಚಾರ ಈಗ ಸ್ವೀಕಾರಾರ್ಹವೇ?" ಎಂದು ಬಿಜೆಪಿ ನಾಯಕ ಪ್ರಶ್ನೆ ಮಾಡಿದ್ದಾರೆ.

"ಪಶ್ಚಿಮ ಬಂಗಾಳ ಪೊಲೀಸರ ಪಾತ್ರ ಈಗ ಮಮತಾ ಬ್ಯಾನರ್ಜಿ ಅವರ ನಿವಾಸವನ್ನು ಕಾಪಾಡುವುದು ಮತ್ತು ಟಿಎಂಸಿ ನಾಯಕರ ಮೇಲೆ ಛತ್ರಿ ಹಿಡಿಯುವುದಕ್ಕೆ ಸೀಮಿತವಾಗಿದೆಯೇ? ಬಂಗಾಳದ ಹೆಣ್ಣುಮಕ್ಕಳು ನ್ಯಾಯಕ್ಕಾಗಿ ಅಳುತ್ತಲೇ ಇರಬೇಕೇ? ಎಂದು ಮಾಳವಿಯಾ ಪ್ರಶ್ನಿಸಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬಂಗಾಳ ಕಾನೂನುಬಾಹಿರತೆಗೆ ಇಳಿದಿದೆ ಮತ್ತು ಕಲ್ಯಾಣ್ ಬ್ಯಾನರ್ಜಿಯಂತಹ ನಾಯಕರು ಟಿಎಂಸಿ ಕಾಳಜಿ ವಹಿಸುವುದಿಲ್ಲ ಎಂದು ಸಾಬೀತುಪಡಿಸುತ್ತಾರೆ ಎಂದು ಅವರು ಹೇಳಿದರು.