800 ಗ್ರಾಂ ಚಿನ್ನಾಭರಣ ಮತ್ತು 70 ಲಕ್ಷ ರೂ. ಬೆಲೆಯ ವೋಲ್ವೋ ಕಾರನ್ನು ವರದಕ್ಷಿಣೆಯಾಗಿ ನೀಡಿ ಮದುವೆ ಮಾಡಲಾಗಿತ್ತು. ಮದುವೆ ಮಾಡಿ 3 ತಿಂಗಳೂ ಕಳೆದಿಲ್ಲ. ಗಂಡ ಮತ್ತು ಅತ್ತೆಯಂದಿರ ಕಿರುಕುಳದ ಬಗ್ಗೆ ತಂದೆಗೆ ಕೊನೆಯ ಸಂದೇಶ ಕಳುಹಿಸಿ ಯುವತಿ ಸಾವನ್ನಪ್ಪಿದ್ದಾಳೆ. ಆಡಿಯೋ ಕೇಳಿದರೆ ಕರುಳು ಹಿಂಡುತ್ತೆ.

ಚೆನ್ನೈ (ಜೂ.30): ತಮಿಳುನಾಡಿನ ತಿರುಪುರದಲ್ಲಿ 27 ವರ್ಷದ ಯುವತಿಯೊಬ್ಬಳು ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಗಿಣಿಯಂತೆ ಸಾಕಿ ಬೆಳೆಸಿದ ಮಗಳನ್ನು ಗಂಡನ ಮನೆಯವರೂ ಚೆನ್ನಾಗಿ ನೋಡಿಕೊಳ್ಳಲಿ ಎಂದು ಕೇಳಿದಷ್ಟು ವರದಕ್ಷಿಣೆ ಕೊಟ್ಟರೂ ಅತ್ತೆ-ಮಾವಂದಿರ ಧನದಾಹ ತೀರಿಲ್ಲ. ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಕಾರಿನಲ್ಲಿ ವಿಷ ಸೇವಿಸಿ ನವವಿವಾಹಿತೆ ಪ್ರಾಣ ಬಿಟ್ಟಿದ್ದಾಳೆ. ಆದರೆ, ಸಾವಿಗೂ ಮುನ್ನ ಅಪ್ಪನಿಗೆ ಕಳಿಸಿದ ಕೊನೆಯ ಆಡಿಯೋ ಕರಳು ಹಿಂಡುವಂತಿದೆ.

ಮೃತಳನ್ನು ಗಾರ್ಮೆಂಟ್ಸ್ ಕಂಪನಿ ಮಾಲೀಕ ಅಣ್ಣಾದುರೈ ಅವರ ಮಗಳು ರಿಧನ್ಯಾ (27) ಎಂದು ಗುರುತಿಸಲಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ರಿಧನ್ಯಾ ಮತ್ತು ಕವಿನ್ ಕುಮಾರ್ ವಿವಾಹವಾಗಿತ್ತು. 800 ಗ್ರಾಂ ಚಿನ್ನಾಭರಣ ಮತ್ತು 70 ಲಕ್ಷ ರೂ. ಬೆಲೆಯ ವೋಲ್ವೋ ಕಾರನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಭಾನುವಾರ ಮೊಂಡಿಪಾಳ್ಯಂನಲ್ಲಿರುವ ದೇವಸ್ಥಾನಕ್ಕೆ ಹೋಗುತ್ತೇನೆಂದು ಹೇಳಿ ರಿಧನ್ಯಾ ಕಾರು ತೆಗೆದುಕೊಂಡು ಹೋಗಿದ್ದಳು. ಸುಮಾರು ಹೊತ್ತು ನಿಂತಲ್ಲಿಯೇ ಕಾರು ನಿಂತಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಯುವತಿ ಕಾರಿನಲ್ಲಿ ಶವವಾಗಿ ಪತ್ತೆಯಾದಳು.

ನವ ವಿವಾಹಿತೆ ರಿಧನ್ಯಾ ದೇವಸ್ಥಾನಕ್ಕೆ ಹೋಗುವಾಗ ಕಾರನ್ನು ನಿಲ್ಲಿಸಿ ವಿಷ ಸೇವಿಸಿರಬಹುದೆಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇನ್ನು ಸಾಯುವ ಮುನ್ನ ರಿಧನ್ಯಾ ತನ್ನ ತಂದೆಗೆ ವಾಟ್ಸಾಪ್‌ನಲ್ಲಿ ಒಟ್ಟು 7 ಆಡಿಯೋ ಸಂದೇಶಗಳನ್ನು ಕಳುಹಿಸಿದ್ದಾಳೆ. ಅತ್ತೆಯಂದಿರ ಕಿರುಕುಳದ ಬಗ್ಗೆ ಸಂದೇಶಗಳಲ್ಲಿ ವಿವರಿಸಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ತಂದೆ-ತಾಯಿಯ ಬಳಿ ಕ್ಷಮೆ ಕೇಳಿದ್ದಳು. ಮುದ್ದಾಗಿ ಕಷ್ಟದ ಅರಿವೇ ಬಾರದಂತೆ ಸಾಕಿದ್ದ ಮಗಳು, ಸಾಯುವ ಮಾತನಾಡಿದಾಗ ಅಪ್ಪನಿಗಾದ ಸಂಕಷ್ಟ ಹೇಳತೀರದು.

ಮಗಳು ರಿಧನ್ಯ ಅಪ್ಪನಿಗೆ ಕೊನೆಯದಾಗಿ ಕಳಿಸಿದ ಆಡಿಯೋ ವಿವರ: 'ಅವರ ಮಾನಸಿಕ ಕಿರುಕುಳ ತಾಳಲು ಸಾಧ್ಯವಾಗುತ್ತಿಲ್ಲ. ಇದನ್ನು ಯಾರ ಬಳಿ ಹೇಳಬೇಕೆಂದೇ ಗೊತ್ತಾಗುತ್ತಿಲ್ಲ. ಯಾರಿಗೇ ನನ್ನ ಕಷ್ಟವನ್ನು ಹೇಳಿದರೂ ಜೀವನ ಹೀಗೇ ಇರುತ್ತದೆ. ನೀನೇ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ಎಲ್ಲರೂ ಹೇಳುತ್ತಾರೆ. ಯಾರಿಗೂ ನನ್ನ ನೋವು, ಕಷ್ಟ ಹಾಗೂ ಅವರು ಕೊಡುತ್ತಿರುವ ಕಿರುಕುಳ ಅರ್ಥವಾಗುತ್ತಿಲ್ಲ. ನಾನು ಯಾಕೆ ಹೀಗೆ ಸುಮ್ಮನಿದ್ದೇನೆ, ಯಾಕೆ ಹೀಗಾದೆ ಎಂದು ನನಗೇ ಗೊತ್ತಿಲ್ಲ. ನಾನು ಹೀಗೆಯೇ ಕಿರುಕುಳ ಅನುಭವಿಸಿಕೊಂಡು ಮುಂದುವರಿಯಲು ಸಾಧ್ಯವಿಲ್ಲ. ಹಾಗಂತ ಅಪ್ಪನ ಮನೆಗೆ ಬಂದು ಜೀವನಪೂರ್ತಿ ನಿಮಗೆ ಹೊರೆಯಾಗಲು ನಾನು ಬಯಸುವುದಿಲ್ಲ. ಈ ಸಲ ನಾನು ಯಾವ ತಪ್ಪೂ ಮಾಡಿಲ್ಲ. ನನಗೆ ಈ ಜೀವನ ಇಷ್ಟವಿಲ್ಲ. ಗಂಡ ದೈಹಿಕವಾಗಿ ಹಿಂಸಿಸಿದರೆ, ಅತ್ತೆಯಂದಿರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ನನಗೆ ಈ ಜೀವನ ಮುಂದುವರಿಸಲು ಸಾಧ್ಯವಿಲ್ಲ' ಎಂದು ರಿಧನ್ಯಾ ಕಳುಹಿಸಿದ ಆಡಿಯೋ ಸಂದೇಶಗಳಲ್ಲಿ ಉಲ್ಲೇಖವಿದೆ.

ತಂದೆ-ತಾಯಿಯ ಬಳಿ ರಿಧನ್ಯಾ ಸಾವಿನ ನಿರ್ಧಾರ ಕೈಗೊಂಡಿದ್ದಕ್ಕೆ ಕ್ಷಮೆಯನ್ನೂ ಕೇಳಿದ್ದಾಳೆ. 'ಅಪ್ಪ-ಅಮ್ಮನೇ ನನ್ನ ಪ್ರಪಂಚ. ನನ್ನ ಕೊನೆಯ ಉಸಿರಿನವರೆಗೂ ನೀವೇ ನನ್ನ ಆಸೆ. ಆದರೆ ನಾನು ನಿಮ್ಮನ್ನು ತುಂಬಾ ನೋಯಿಸಿದ್ದೇನೆ. ನನ್ನನ್ನು ಹೀಗೆ ನೋಡಲು ನಿಮಗೆ ಸಾಧ್ಯವಿಲ್ಲ. ನಿಮ್ಮ ಕಷ್ಟಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನನ್ನನ್ನು ಕ್ಷಮಿಸಿ ಅಪ್ಪ, ಎಲ್ಲವೂ ಮುಗಿಯಿತು. ನಾನು ಹೋಗುತ್ತಿದ್ದೇನೆ' ಎಂದು ಕೊನೆಯದಾಗಿ ಆಡಿಯೋ ಸಂದೇಶ ಕಳುಹಿಸಿದ್ದಾಳೆ.

ರಿಧನ್ಯಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ನವ ವಿವಾಹಿತೆಯ ಗಂಡ ಕವಿನ್ ಕುಮಾರ್, ಮಾವ ಈಶ್ವರಮೂರ್ತಿ, ಅತ್ತೆ ಚಿತ್ರಾದೇವಿ ಅವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.