ತಿರುಪತಿ(ಜೂ.03): ಕೊರೋನಾ ವೈರಸ್‌ ಲಾಕ್‌ಡೌನ್‌ ಕಾರಣ ಮಾ.20ರಿಂದ ಭಕ್ತರ ಪಾಲಿಗೆ ಬಂದ್‌ ಆಗಿರುವ ತಿರುಮಲದ ವೆಂಕಟೇಶ್ವರ ದೇವಾಲಯ ಜೂನ್‌ 8ರಂದು ಬಾಗಿಲು ತೆರೆಯಲಿದೆ. ಮೊದಲಿನ 3 ದಿನ ಪ್ರಾಯೋಗಿಕವಾಗಿ ಕೇವಲ ಸಿಬ್ಬಂದಿಗೆ ವೆಂಕಟೇಶನ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

‘ಕೊರೋನಾ ವೈರಸ್‌ ಹರಡುವಿಕೆ ತೆಗಾಗಿ ಮುನ್ನೆಚ್ಚರಿಕೆ ಕ್ರಮ ಜರುಗಿಸಲಾಗಿದೆ. ಪ್ರತಿ ಭಕ್ತರ ನಡುವೆ 6 ಅಡಿ ಅಂತರ ಇರುವಂತೆ ಸರದಿ ಸಾಲನ್ನು ನಿಯೋಜಿಸಲಾಗುತ್ತದೆ. ಜೂನ್‌ 8ರಿಂದ 2-3 ದಿನ ಕೇವಲ ದೇಗುಲ ಸಿಬ್ಬಂದಿಗೆ ಈ ಮಾದರಿಯಲ್ಲಿ ಸರದಿ ಸಾಲಿನಲ್ಲಿ ಆಗಮಿಸುವಂತೆ ಅವಕಾಶ ನೀಡಿ ದರ್ಶನ ಮಾಡಿಸಲಾಗುತ್ತದೆ’ ಎಂದು ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಮಂಗಳವಾರ ತಿಳಿಸಿದ್ದಾರೆ.

‘ಈ ರಿಹರ್ಸಲ್‌ ದರ್ಶನಕ್ಕೆ ದೇವಾಲಯದ ಅಧಿಕಾರಿಗಳು ತೃಪ್ತರಾದಲ್ಲಿ, ಎಲ್ಲ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಅಂದಿನಿಂದಲೇ ದರ್ಶನ ಆನ್‌ಲೈನ್‌ ಟಿಕೆಟ್‌ ಬಿಡುಗಡೆ ಮಾಡಲಾಗುತ್ತದೆ. ಆನ್‌ಲೈನ್‌ ಟಿಕೆಟ್‌ ಇಲ್ಲದವರು ತಿರುಮಲದ ಪ್ರವೇಶ ದ್ವಾರದಲ್ಲಿ ವೈಯಕ್ತಿಕ ವಿವರ ನೀಡಿ ನೋಂದಣಿ ಮಾಡಿಸಿ ಟಿಕೆಟ್‌ ಪಡೆಯಬಹುದು’ ಎಂದು ರೆಡ್ಡಿ ಹೇಳಿದ್ದಾರೆ.

ಲಾಕ್‌ಡೌನ್‌ ವೇಳೆ ಭಕ್ತರಿಗೆ ದೇವಾಲಯ ನಿರ್ಬಂಧವಿದ್ದರೂ ಪೂಜೆ ಪುನಸ್ಕಾರಗಳು ಯಥಾರೀತಿ ನಡೆದಿವೆ ಎಂದು ಅವರು ತಿಳಿಸಿದ್ದಾರೆ.