History Of Tirupati Laddu: 308 ವರ್ಷಗಳ ಇತಿಹಾಸದ ತಿರುಪತಿ ಲಡ್ಡುವಿಗೆ ಇದೆಂಥಾ ಅಪಚಾರ!
ವೈಎಸ್‌ಆರ್ ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ತಿರುಪತಿಯಲ್ಲಿ ನೀಡಲಾಗುತ್ತಿದ್ದ ಲಡ್ಡುವಿನಲ್ಲಿ ದನದ ಕೊಬ್ಬು, ಮೀನೆಣ್ಣೆಯನ್ನು ಬಳಸಲಾಗುತ್ತಿತ್ತು ಎನ್ನುವ ಅಧಿಕೃತ ಲ್ಯಾಬ್ ರಿಪೋರ್ಟ್ ಬಂದಿದೆ. ಇದರ ಬೆನ್ನಲ್ಲಿಯೇ ಭಕ್ತಾದಿಗಳ ಜಗನ್ ಮೋಹನ್ ರೆಡ್ಡಿಗೆ ಹಿಡಿಶಾಪ ಹಾಕಲು ಆರಂಭಿಸಿದ್ದಾರೆ. ತಿರುಪತಿ ಲಡ್ಡುವಿನದ್ದು ಇಂದು, ನಿನ್ನೆಯ ಇತಿಹಾಸವಲ್ಲ, ಬರೋಬ್ಬರಿ 308 ವರ್ಷಗಳ ಇತಿಹಾಸ ಈ ಲಡ್ಡುವಿಗೆ ಇದೆ.
ಬೆಂಗಳೂರು (ಸೆ.19): ತಿರುಮಲ ಬೆಟ್ಟವನ್ನೇರಿ ತಿರುಪತಿಯಲ್ಲಿ ಶ್ರೀನಿವಾಸನ ಭವ್ಯ ರೂಪವನ್ನು ಕಂಡ ಭಕ್ತಾದಿಗಳು, 'ನಮೋ ವೆಂಕಟೇಶ..' ಎಂದು ಧನ್ಯತಾ ಭಾವ ಎದುರಿಸಿದಾಗ, ದೇವಸ್ಥಾನದ ಆವರಣದಲ್ಲಿಯೇ ಅವರ ಕೈಗೆ ಲಡ್ಡು ಪ್ರಸಾದವನ್ನು ನೀಡಲಾಗುತ್ತದೆ. ವಿಶ್ವದ ಶ್ರೀಮಂತ ದೇವಸ್ಥಾನ ಎನಿಸಿಕೊಳ್ಳುವ ತಿರುಪತಿ ಎಂದಾಗ ಮೊದಲು ನೆನಪಾಗೋದು ಬೆಟ್ಟದ ಮೇಲಿರುವ ವೆಂಕಟೇಶ ಮಾತ್ರವಲ್ಲ, ಅಲ್ಲಿನ ಘಮಘಮಿಸುವ ಲಡ್ಡು. ಇದನ್ನು ಶ್ರೀವಾರಿ ಲಡ್ಡು ಪ್ರಸಾದ ಎಂದೂ ಕರೆಯುತ್ತಾರೆ. ಚಿಕ್ಕವರಿಂದ ಹಿಡಿದ ವೃದ್ಧರವರೆಗೂ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ಅಚ್ಚುಮೆಚ್ಚು. ಸಕ್ಕರೆ ಕಾಯಿಲೆ ಇದ್ದವರೂ ಕೂಡ ಒಂಚೂರು ಈ ಪ್ರಸಾದವನ್ನು ಸವಿಯುವ ಆಸೆ ಪಡುತ್ತಾರೆ. ಆದರೆ, ಇಂಥ ತಿರುಪತಿ ಲಡ್ಡುವಿನ ವಿಚಾರದಲ್ಲಿಯೇ ಆಂಧ್ರದ ಕಳೆದ ವೈಎಸ್‌ಎರ್ ಕಾಂಗ್ರೆಸ್ ಸರ್ಕಾರ ಅತ್ಯಂತ ನಿರ್ಲಕ್ಷ್ಯ ತೋರಿತ್ತು ಅನ್ನೋದು ಬಹಿರಂಗವಾಗಿದೆ. ತಿರುಪತಿ ಲಡ್ಡು ತಯಾರಿಕೆಗೆ ಬಳಸುತ್ತಿದ್ದ ತುಪ್ಪದಲ್ಲಿ ದನದ ಕೊಬ್ಬು, ಮೀನಿನ ಎಣ್ಣೆಯ ಅಂಶಗಳು ಕಂಡು ಬಂದಿವೆ ಎಂದು ಲ್ಯಾಬ್ ರಿಪೋರ್ಟ್ ತಿಳಿಸಿದೆ. ಗುಜರಾತ್‌ನ ಲ್ಯಾಬ್‌ಗೆ ನೀಡಿದ ತುಪ್ಪದ ಮಾದರಿಯಲ್ಲ ಈ ಅಂಶ ಬಹಿರಂಗವಾಗಿದೆ. ಇದರ ಬೆನ್ನಲ್ಲಿಯೇ ಭಕ್ತಾದಿಗಳ ವಲಯದಲ್ಲಿ ಲಡ್ಡುವಿನ ವಿಚಾರವಾಗಿಯೇ ಸಂಚಲನ ಸೃಷ್ಟಿಯಾಗಿದೆ.
ತಿರುಪತಿ ಲಡ್ಡುವಿನ ಮೊಟ್ಟ ಮೊದಲ ನೈವೇದ್ಯವನ್ನು ಭಗವಂತನಿಗೆ ಅರ್ಪಿಸಿದ್ದು 1715ರ ಆಗಸ್ಟ್ 2 ರಂದು. ದೇವಾಲಯದ ಅಧಿಕಾರಿಗಳು ವೆಂಕಟೇಶ್ವರನ ಬೆಟ್ಟದ ದೇವಾಲಯದಲ್ಲಿಯೇ ಇದನ್ನು ಸಿದ್ಧಪಡಿಸಿದ್ದರು. ಇಂದು ನಾವು ನೋಡುತ್ತಿರುವ ಲಡ್ಡು ಸುಮಾರು 6 ಬದಲಾವಣೆಗಳ ಬಳಿಕ 1940 ರ ಮದ್ರಾಸ್ ಸರ್ಕಾರದ ಅಡಿಯಲ್ಲಿ ಅದರ ಅಸ್ತಿತ್ವ ಮತ್ತು ಆಕಾರವನ್ನು ಪಡೆದುಕೊಂಡಿದೆ. ಈ ಲಡ್ಡುವನ್ನು ಟಿಟಿಡಿ ಹೊರತಾಗಿ ಬೇರೆ ಯಾರೂ ತಯಾರಿಕೆ ಮಾಡೋದಿಲ್ಲ. ತಿರುಪತಿ ಲಡ್ಡುವಿನ ಕುರಿತಾದ ವಿಶೇಷ ಮಾಹಿತಿ ಇಲ್ಲಿದೆ.
ಮೊದಲ ಬಾರಿಗೆ ಲಡ್ಡುವನ್ನು 1715ರಲ್ಲಿ ತಯಾರಿಸಿದಾಗ ಕಡಲೆಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ, ಏಲಕ್ಕಿ ಮತ್ತು ಡ್ರೈ ಫ್ರೂಟ್ಸ್ ಬಳಸಲಾಗಿತ್ತು. ವಿಶ್ವದ ಶ್ರೀಮಂತ ಹಿಂದೂ ದೇವಾಲಯದ ಭಾಗವಾಗಿರುವ ಈ ಲಡ್ಡು ಅತ್ಯಂತ ಬೇಡಿಕೆಯ ಪ್ರಸಾದ ಎಂದರೂ ತಪ್ಪಲ್ಲ. ದೇವರ ದರ್ಶನ ಮಾಡಿದ ಪ್ರತಿಯೊಬ್ಬರಿಗೂ ಉಚಿತವಾಗಿ 1 ಲಡ್ಡು ನೀಡಲಾಗುತ್ತದೆ. ಇನ್ನು 50 ರೂಪಾಯಿ ಹಣ ನೀಡಿದರೆ, 1 ಲಡ್ಡು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಒಬ್ಬ ವ್ಯಕ್ತಿ ಹೀಗೆ 6 ಲಡ್ಡುವನ್ನು ಪಡೆದುಕೊಳ್ಳಬಹುದು. ಅದರೊಂದಿಗೆ 200 ರೂಪಾಯಿಗೆ ದೊಡ್ಡ ಗಾತ್ರದ ಲಡ್ಡುವನ್ನು ಕೂಡ ಟಿಟಿಡಿ ಮಾರುತ್ತದೆ. ತಿಮ್ಮಪ್ಪನ ದರ್ಶನದ ಬಳಿಕ ಪ್ರಸಾದ ರೂಪದಲ್ಲಿ ಸಿಗುವ ಲಡ್ಡುಗೆ ಭಕ್ತಾಧಿಗಳು ಕ್ಯೂ ನಿಲ್ಲುತ್ತಾರೆ. ಈ ಲಡ್ಡು ವಿತರಿಸಲು ಸುಮಾರು 29ಕ್ಕೂ ಹೆಚ್ಚು ಕೌಂಟರ್ಗಳಿದ್ದು, ಪ್ರತಿ ದಿನವೂ ಇಲ್ಲಿ ಭಕ್ತರ ಕ್ಯೂ ಇರುತ್ತದೆ.
ತಿರುಪತಿಗೆ ಹೋಗಿ ಲಡ್ಡು ತರದೇ ಇದ್ದಲ್ಲಿ ದರ್ಶನ ಅಪೂರ್ಣ ಎನ್ನುವ ಭಾವ ಭಕ್ತರಲ್ಲಿದೆ. ಇನ್ನು ದಿನವೊಂದಕ್ಕೆ ತಿರುಪತಿಯಲ್ಲಿ ಕನಿಷ್ಠ 1.5 ರಿಂದ 2 ಲಕ್ಷದವರೆಗೆ ಲಡ್ಡು ತಯಾರಿಸಲಾಗುತ್ತದೆ. ಬಂದ ಭಕ್ತರು ಕನಿಷ್ಠ 2 ಲಡ್ಡುವನ್ನಾದರೂ ತೆಗೆದುಕೊಂಡು ಹೋಗುತ್ತಾರೆ. ಅದರಲ್ಲೂ ಬ್ರಹ್ಮೋತ್ಸವ ಸಮಯದಲ್ಲಿ ದಿನಕ್ಕೆ ಕೋಟಿ ಕೋಟಿ ಲಡ್ಡು ಮಾರಾಟವಾಗಿದ್ದ ಇತಿಹಾಸವೂ ಇದೆ ಎಂದು ಟಿಟಿಡಿ ಹೇಳಿದೆ. 2014ರಲ್ಲಿ ಇದಕ್ಕೆ ಜಿಐ ಟ್ಯಾಗ್ ಕೂಡ ಸಿಕ್ಕಿದೆ.
ತಿರುಪತಿ ಲಾಡು ತಯಾರಿಸಲು ದನದ ಕೊಬ್ಬು, ಮೀನೆಣ್ಣೆ ಬಳಕೆ, ಟೆಸ್ಟ್ ರಿಪೋರ್ಟ್‌ನಿಂದ ದೃಢ!
ತಿರುಪತಿಯಲ್ಲಿ ಮೂರು ರೀತಿಯ ಲಡ್ಡುಗಳಿವೆ. 175ರಿಂದ 200 ಗ್ರಾಂ ಇರುವ ಲಡ್ಡುವಿಗೆ 50 ರೂಪಾಯಿ. ಹೆಚ್ಚಿನ ಭಕ್ತರ ಫೇವರಿಟ್ ಸೈಜ್ ಲಡ್ಡು ಇದು. ಇನ್ನು ಕಲ್ಯಾಣ ಲಡ್ಡು ಅರ್ಧ ಕೆಜಿ ಇರುತ್ತದೆ. ಇದನ್ನು ವಿಶೇಷ ದಿನಗಳಲ್ಲಿ ಮಾತ್ರವೇ ತಯಾರಿಸುತ್ತಾರೆ. ಇದಕ್ಕೆ 100 ರೂಪಾಯಿ. ಕೊನೆಯದು ಬೃಹತ್ ಲಡ್ಡು. ಇದರ ತೂಕ ಬರೋಬ್ಬರಿ 32 ಕೆಜಿ ಇರುತ್ತದೆ. ಬ್ರಹ್ಮೋತ್ಸವ ಸೇರಿದಂತೆ ಬಹಳ ಪ್ರಮುಖ ಸಮಯದಲ್ಲಿ ಮಾತ್ರವೇ ಇದನ್ನು ತಯಾರಿಸುತ್ತಾರೆ. ವರ್ಷಕ್ಕೆ 2-3 ಬಾರಿ ಮಾತ್ರವೇ ಈ ಮಾದರಿಯ ಲಡ್ಡು ತಯಾರಾಗುತ್ತದೆ.
ತಿರುಪತಿ ಲಡ್ಡುನಲ್ಲಿ ಪ್ರಾಣಿ ಕೊಬ್ಬಿಗೂ, ಕೆಎಂಫ್‌ನ ನಂದಿನಿ ತುಪ್ಪಕ್ಕೂ ಸಂಬಂಧವೇ ಇಲ್ಲ!