ತಿರುಪತಿ ಲಾಡು ತಯಾರಿಸಲು ದನದ ಕೊಬ್ಬು, ಮೀನೆಣ್ಣೆ ಬಳಕೆ, ಟೆಸ್ಟ್ ರಿಪೋರ್ಟ್‌ನಿಂದ ದೃಢ!
ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುಗಳಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಮತ್ತು ತಾಳೆ ಎಣ್ಣೆಯನ್ನು ಬಳಸಲಾಗುತ್ತಿತ್ತು ಎಂದು ಪರೀಕ್ಷಾ ವರದಿಗಳು ಬಹಿರಂಗಪಡಿಸಿವೆ. ಈ ಆರೋಪವನ್ನು ವೈಎಸ್‌ಆರ್‌ಸಿಪಿ ಪಕ್ಷ ತೀವ್ರವಾಗಿ ಖಂಡಿಸಿದೆ.
ತಿರುಪತಿ (ಸೆ.19): ಆಘಾತಕಾರಿ ಬೆಳವಣಿಗೆಯಲ್ಲಿ, ಇತ್ತೀಚಿನ ಪರೀಕ್ಷಾ ವರದಿಗಳ ಪ್ರಕಾರ, ತಿರುಪತಿಯ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡುಗಳನ್ನು ಪ್ರಸಾದವಾಗಿ ವಿತರಿಸಲು ದನದ ಕೊಬ್ಬು, ಮೀನಿನ ಎಣ್ಣೆ ಮತ್ತು ತಾಳೆ ಎಣ್ಣೆಯನ್ನು ಬಳಸಲಾಗುತ್ತಿತ್ತು ಎನ್ನುವುದು ದೃಢವಾಗಿದೆ. ಲ್ಯಾಬ್ ರಿಪೋರ್ಟ್‌ನಲ್ಲೂ ಈ ಅಂಶ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತಾದ ದಾಖಲೆಯನ್ನೂ ಕೂಡ ಬಹಿರಂಗ ಮಾಡಿದೆ. ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಬುಧವಾರ ಆರೋಪ ಮಾಡಿದ್ದರು. ಇದರ ನಡುವೆಯೇ ಆಘಾತಕಾರಿ ಟೆಸ್ಟ್ ರಿಪೋರ್ಟ್ ಸಂಚಲನ ಸೃಷ್ಟಿಸಿದೆ. ಆದರೆ, ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿ ಪಕ್ಷ ಆರೋಪವನ್ನು ನಿರಾಕರಿಸಿದೆ. ತಿರುಪತಿ ಲಡ್ಡು ಪ್ರಸಾದವನ್ನು ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೀಡಲಾಗುತ್ತದೆ, ಇದನ್ನು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ತಯಾರಿಸುತ್ತದೆ.
"ತಿರುಮಲ ಲಡ್ಡು ಕೂಡ ಗುಣಮಟ್ಟವಿಲ್ಲದ ಪದಾರ್ಥಗಳಿಂದ ತಯಾರಿಸಲ್ಪಟ್ಟಿದೆ ... ಅವರು ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬನ್ನು ಬಳಸಿದ್ದಾರೆ" ಎಂದು ನಾಯ್ಡು ಬುಧವಾರ ಇಲ್ಲಿ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದರು. ಈಗ ಶುದ್ಧ ತುಪ್ಪವನ್ನು ಲಡ್ಡು ತಯಾರಿಸಲು ಬಳಸಲಾಗುತ್ತಿದೆ ಮತ್ತು ದೇವಸ್ಥಾನದಲ್ಲಿ ಎಲ್ಲವನ್ನೂ ಶುದ್ಧೀಕರಿಸಲಾಗಿದೆ, ಇದು ಸುಧಾರಿತ ಗುಣಮಟ್ಟಕ್ಕೆ ಕಾರಣವಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ.
ಹಿರಿಯ ವೈಎಸ್‌ಆರ್‌ಸಿಪಿ ನಾಯಕ ಮತ್ತು ಮಾಜಿ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ನಾಯ್ಡು ಸಿಎಂ ಚಂದ್ರಬಾಬು ನಾಯ್ಡು ಆರೋಪವನ್ನು "ದುರುದ್ದೇಶಪೂರಿತ" ಎಂದು ಬಣ್ಣಿಸಿದ್ದಾರೆ ಮತ್ತು ಟಿಡಿಪಿ ವರಿಷ್ಠರು "ರಾಜಕೀಯ ಲಾಭಕ್ಕಾಗಿ ಯಾವುದೇ ಹಂತಕ್ಕೆ ಇಳಿಯುತ್ತಾರೆ" ಎಂದು ಹೇಳಿದರು. ಈ ನಡುವೆ ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್, ಈ ವಿಚಾರದಲ್ಲಿ ಜಗನ್ ಮೋಹನ್ ರಡ್ಡಿ ವಿರುದ್ಧ ಕಿಡಿಕಾರಿದ್ದಾರೆ.
“ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯವು ನಮ್ಮ ಅತ್ಯಂತ ಪವಿತ್ರವಾದ ದೇವಾಲಯವಾಗಿದೆ. ವೈಎಸ್ ಜಗನ್ ಮೋಹನ್ ರೆಡ್ಡಿ ಆಡಳಿತವು ತಿರುಪತಿ ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ತಿಳಿದು ನನಗೆ ಆಘಾತವಾಗಿದೆ ಎಂದು ಅವರು ಹೇಳಿದರು. ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವನ್ನು ಟಾರ್ಗೆಟ್ ಮಾಡಿದ ಲೋಕೇಶ್, ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳನ್ನು ಹಿಂದಿನ ಸರ್ಕಾರಕ್ಕೆ ಗೌರವಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.
ತಿರುಪತಿ ಲಡ್ಡುನಲ್ಲಿ ಪ್ರಾಣಿ ಕೊಬ್ಬಿಗೂ, ಕೆಎಂಫ್‌ನ ನಂದಿನಿ ತುಪ್ಪಕ್ಕೂ ಸಂಬಂಧವೇ ಇಲ್ಲ!
ಎರಡು ಅವಧಿಗೆ ಟಿಟಿಡಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ವೈಎಸ್‌ಆರ್‌ಸಿಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ಬಾ ರೆಡ್ಡಿ ಅವರು, ನಾಯ್ಡು ಅವರು ತಮ್ಮ ಹೇಳಿಕೆಗಳಿಂದ ಪವಿತ್ರ ತಿರುಮಲದ ಪಾವಿತ್ರ್ಯತೆ ಮತ್ತು ಕೋಟ್ಯಂತರ ಹಿಂದೂಗಳ ನಂಬಿಕೆಗೆ ತೀವ್ರ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. “ತಿರುಮಲ ಪ್ರಸಾದದ ಬಗ್ಗೆ ಅವರ ಕಾಮೆಂಟ್‌ಗಳು ಅತ್ಯಂತ ದುರುದ್ದೇಶಪೂರಿತವಾಗಿವೆ. ಯಾವುದೇ ವ್ಯಕ್ತಿ ಇಂತಹ ಮಾತುಗಳನ್ನು ಮಾತನಾಡುವುದಿಲ್ಲ ಅಥವಾ ಅಂತಹ ಆರೋಪಗಳನ್ನು ಮಾಡುವುದಿಲ್ಲ ಎಂದು ಸುಬ್ಬಾ ರೆಡ್ಡಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉದ್ಭವವಾಯ್ತು ತಿಮ್ಮಪ್ಪನ ಪ್ರಸಾದದ ಪಾವಿತ್ರ್ಯತೆಯ ಪ್ರಶ್ನೆ? ಲಡ್ಡುವಿನಲ್ಲಿ ಬಳಸುವ ಪದಾರ್ಥಗಳೇನು?