'ಟೈಮ್' ನಿಯತಕಾಲಿಕೆಯು 2026ರ AI ಕ್ಷೇತ್ರದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 9 ಭಾರತೀಯ ಮೂಲದ ಸಾಧಕರು ಸ್ಥಾನ ಪಡೆದಿದ್ದಾರೆ. ಈ ಲೇಖನವು ಕಾರ್ಪೊರೇಟ್, ಆರೋಗ್ಯ, ನ್ಯಾಯಾಂಗ ಮತ್ತು ಪ್ರಾದೇಶಿಕ ಭಾಷಾ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಕ್ರಾಂತಿಯನ್ನುಂಟುಮಾಡುತ್ತಿರುವ ಈ ಪ್ರಮುಖರ ಕೊಡುಗೆಗಳನ್ನು ವಿವರಿಸುತ್ತದೆ.

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಕೇವಲ ಸಂಶೋಧನಾ ವಲಯಗಳಿಗೆ ಸೀಮಿತವಾಗುಳಿಯದೆ ಕಾರ್ಪೊರೇಟ್ ಕೊಠಡಿಗಳು, ಆಸ್ಪತ್ರೆಗಳು, ನ್ಯಾಯಾಲಯಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ತಂತ್ರಜ್ಞಾನ ಮತ್ತು ಸಮಾಜದಲ್ಲಿ ಧನಾತ್ಮಕ ಪರಿಣಾಮ ಬೀರುತ್ತಿರುವ ಗಣ್ಯರನ್ನು ಗುರುತಿಸಿ ‘ಟೈಮ್’ (TIME) ನಿಯತಕಾಲಿಕೆಯು ಪ್ರಕಟಿಸಿರುವ 2026 ರ AI ಕ್ಷೇತ್ರದಲ್ಲಿ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತೀಯ ಮೂಲದ 9 ಸಾಧಕರು ಸ್ಥಾನ ಪಡೆದುಕೊಂಡಿದ್ದಾರೆ.

ಈ ಪ್ರಭಾವಿ ಪಟ್ಟಿಯನ್ನು ಲೀಡರ್ಸ್, ಇನೋವೇಟರ್ಸ್, ಶೇಪರ್ಸ್, ಮತ್ತು ಚಿಂತಕರು ಎಂಬ ನಾಲ್ಕು ಪ್ರಮುಖ ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಓಪನ್‌ಎಐನ ಸ್ಯಾಮ್ ಆಲ್ಟ್‌ಮನ್, ಎಲಾನ್ ಮಸ್ಕ್ ಹಾಗೂ ಆಂಥ್ರೊಪಿಕ್‌ನ ಅಮೋಡೆ ಸಹೋದರರಂತಹ ಬಿಗ್ ಟೆಕ್ ದಿಗ್ಗಜರ ಹೊರತಾಗಿಯೂ, ನೈಜ ಜಗತ್ತಿನಲ್ಲಿ AI ಅನ್ನು ಸಮಾಜಮುಖಿಯಾಗಿ ಬಳಸುತ್ತಿರುವವರನ್ನು ಟೈಮ್ಸ್ ವಿಶೇಷವಾಗಿ ಗುರುತಿಸಿದೆ.

ಪಟ್ಟಿಯಲ್ಲಿರುವ ಭಾರತೀಯ ಮೂಲದ 9 ಪ್ರಮುಖ ವ್ಯಕ್ತಿಗಳು ಮತ್ತು ಕೊಡುಗೆ

1. ಅರವಿಂದ್ ಕೃಷ್ಣ (ಅಧ್ಯಕ್ಷರು ಮತ್ತು ಸಿಇಒ, IBM)

ತಂತ್ರಜ್ಞಾನ ಕ್ಷೇತ್ರದ ಮಹತ್ವದ ಬದಲಾವಣೆಯ ಅವಧಿಯಲ್ಲಿ ಐಬಿಎಂ (IBM) ಸಂಸ್ಥೆಯ ಚುಕ್ಕಾಣಿ ಹಿಡಿದಿರುವ ಅರವಿಂದ್ ಕೃಷ್ಣ, ಇತರ ಬೃಹತ್ AI ಕಂಪನಿಗಳೊಂದಿಗೆ ನೇರ ಸ್ಪರ್ಧೆಗೆ ಇಳಿಯದೆ 'ಉದ್ಯಮಗಳ ಅಳವಡಿಕೆ' (Enterprise Adoption) ಮೇಲೆ ಗಮನ ಹರಿಸಿದ್ದಾರೆ. ಐಬಿಎಂ ಸಣ್ಣ ಮತ್ತು ಪರಿಣಾಮಕಾರಿ ಮಾದರಿಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ, ಅಗತ್ಯವಿದ್ದಾಗ ಗೂಗಲ್, ಓಪನ್‌ಎಐ ಮತ್ತು ಆಂಥ್ರೊಪಿಕ್ ಮಾದರಿಗಳನ್ನು ಬಳಸಿಕೊಳ್ಳಲು ಗ್ರಾಹಕರಿಗೆ ಅವಕಾಶ ನೀಡಿದೆ. AI ಅಪ್ಲಿಕೇಶನ್‌ಗಳು ಮತ್ತು ಡೇಟಾ ಸುರಕ್ಷತೆಗೆ ಐಬಿಎಂ ನೀಡುತ್ತಿರುವ ಆದ್ಯತೆಯು ಕಂಪನಿಗೆ ಹೊಸ ಶಕ್ತಿ ತಂದಿದೆ.

2. ಮೀರಾ ಮುರಾಟಿ (ಸಹ-ಸ್ಥಾಪಕಿ, ಥಿಂಕಿಂಗ್ ಮೆಷಿನ್ಸ್ ಲ್ಯಾಬ್)

ಮಾಜಿ ಓಪನ್‌ಎಐ ಕಾರ್ಯನಿರ್ವಾಹಕಿಯಾದ ಮೀರಾ ಮುರಾಟಿ, 2025 ರಲ್ಲಿ 'ಥಿಂಕಿಂಗ್ ಮೆಷಿನ್ಸ್ ಲ್ಯಾಬ್' ನವೋದ್ಯಮವನ್ನು ಪ್ರಾರಂಭಿಸಿದರು. ಕೇವಲ ಪ್ರಮಾಣೀಕೃತ AI ಮಾದರಿಗಳನ್ನು ನೆಚ್ಚಿಕೊಳ್ಳದೆ, ಗ್ರಾಹಕರ ಅಗತ್ಯ ಮತ್ತು ಡೇಟಾಗೆ ತಕ್ಕಂತೆ ಕಸ್ಟಮೈಸ್ ಮಾಡಬಹುದಾದ AI ವ್ಯವಸ್ಥೆಯನ್ನು ಇವರು ರೂಪಿಸುತ್ತಿದ್ದಾರೆ. ಪ್ರಾರಂಬಿಕ ಹಂತದಲ್ಲೇ $2 ಬಿಲಿಯನ್ ನಷ್ಟು ಬೃಹತ್ ಬಂಡವಾಳ ಸಂಗ್ರಹಿಸಿರುವ ಈ ಸಂಸ್ಥೆಯು, ಎನ್‌ವಿಡಿಯಾ (Nvidia) ಜೊತೆ ಪಾಲುದಾರಿಕೆ ಹೊಂದಿದ್ದು, 'ಟಿಂಕರ್' (Tinker) ಮತ್ತು 'ಇಂಕ್ಲಿಂಗ್' (Inkling) ನಂತಹ ಸುಧಾರಿತ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದೆ.

3. ರವಿ ಕುಮಾರ್ ಎಸ್ (ಸಿಇಒ, ಕಾಗ್ನಿಜೆಂಟ್)

ಸುಮಾರು 3.56 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಕಾಗ್ನಿಜೆಂಟ್‌ನ ಮುಖ್ಯಸ್ಥರಾದ ರವಿ ಕುಮಾರ್ ಎಸ್, AI ನಿಂದ ಮಾನವ ಉದ್ಯೋಗಗಳಿಗೆ ಎದುರಾಗುವ ಸವಾಲುಗಳು ಎಂಬ ಪ್ರಮುಖ ಆರ್ಥಿಕ ಪ್ರಶ್ನೆಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಮಾಜಿ ಪರಮಾಣು ವಿಜ್ಞಾನಿಯಾಗಿರುವ ಇವರು, ಕಂಪನಿಗಳು ಯಾಂತ್ರೀಕರಣದ ಜೊತೆಗೆ ಮಾನವ ಸಂಪನ್ಮೂಲವನ್ನು ಬೆಂಬಲಿಸುವಂತೆ ತೆರಿಗೆ ನೀತಿಗಳಲ್ಲಿ ಸೂಕ್ತ ಪ್ರೋತ್ಸಾಹಕಗಳನ್ನು ನೀಡಬೇಕೆಂದು ವಾದಿಸುತ್ತಾರೆ. AI ತಂತ್ರಜ್ಞಾನದಿಂದ ಉದ್ಯೋಗಗಳು ನಶಿಸುವುದಿಲ್ಲ, ಬದಲಾಗಿ ಕೆಲಸದ ಸ್ವರೂಪ ಬದಲಾಗಲಿದೆ ಎಂಬುದು ಇವರ ನಿಲುವು.

4. ವಿವೇಕ್ ರಾಘವನ್ (ಸಹ-ಸ್ಥಾಪಕರು, ಸರ್ವಂ AI)

ಆಧಾರ್ ಯೋಜನೆ ಹಾಗೂ ಐಐಟಿ ಮದ್ರಾಸ್‌ನ 'AI4Bhārat' ನಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ವಿವೇಕ್ ರಾಘವನ್, ಭಾರತದ ಪ್ರಾದೇಶಿಕ ಭಾಷೆಗಳಿಗೆ ಸೂಕ್ತವಾದ AI ಮೂಲಸೌಕರ್ಯವನ್ನು 'ಸರ್ವಂ AI' (Sarvam AI) ಮೂಲಕ ನಿರ್ಮಿಸುತ್ತಿದ್ದಾರೆ. 22 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್‌ನಲ್ಲಿ ದಾಖಲೆಗಳನ್ನು ಸಂಸ್ಕರಿಸಬಲ್ಲ 'ಸರ್ವಂ 30B' ಮತ್ತು '105B' ನಂತಹ ಬಹುಭಾಷಾ ಮಾದರಿಗಳನ್ನು ಇವರು ರೂಪಿಸಿದ್ದಾರೆ. ವಿದೇಶಿ AI ತಂತ್ರಜ್ಞಾನದ ಮೇಲಿನ ಅವಲಂಬನೆ ತಗ್ಗಿಸಿ 'AI ಸಾರ್ವಭೌಮತ್ವ' ಸಾಧಿಸುವುದು ಇವರ ಮುಖ್ಯ ಗುರಿಯಾಗಿದೆ.

5. ಉತ್ಕರ್ಷ್ ಸಕ್ಸೇನಾ (ಸ್ಥಾಪಕರು, ಅದಾಲತ್ AI)

ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಮಾಜಿ ಗುಮಾಸ್ತರಾಗಿದ್ದ ಉತ್ಕರ್ಷ್ ಸಕ್ಸೇನಾ, ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿನ ಲಕ್ಷಾಂತರ ಬಾಕಿ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲು 2023 ರಲ್ಲಿ 'ಅದಾಲತ್ AI' (Adalat AI) ಸ್ಥಾಪಿಸಿದರು. ಇವರ ಧ್ವನಿ-ಗುರುತಿಸುವಿಕೆ (Speech-recognition) ತಂತ್ರಜ್ಞಾನವು ಪ್ರಸ್ತುತ 11 ರಾಜ್ಯಗಳ 5,500 ಕ್ಕೂ ಹೆಚ್ಚು ನ್ಯಾಯಾಲಯ ಕೊಠಡಿಗಳಲ್ಲಿ ಬಳಕೆಯಾಗುತ್ತಿದೆ. ಕೇರಳ, ಸಿಕ್ಕಿಂ ಮತ್ತು ಆಂಧ್ರಪ್ರದೇಶ ರಾಜ್ಯಗಳು ಕಾಗದರಹಿತ ನ್ಯಾಯಾಲಯ ಪ್ರಕ್ರಿಯೆಗೆ ಈ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿವೆ.

6. ಸುಚಿ ಸರಿಯಾ (ಸ್ಥಾಪಕಿ ಮತ್ತು ಸಿಇಒ, ಬೇಸಿಯನ್ ಹೆಲ್ತ್)

ಆರೋಗ್ಯ ರಕ್ಷಣೆಯಲ್ಲಿ AI ನ ಪಾತ್ರವನ್ನು ವಿಸ್ತರಿಸಿರುವ ಸುಚಿ ಸರಿಯಾ, ಸೆಪ್ಸಿಸ್ (Sepsis) ನಂತಹ ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚುವ AI ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇವರ ತಂತ್ರಜ್ಞಾನಕ್ಕೆ ಅಮೆರಿಕದ FDA ಅನುಮೋದನೆ ದೊರೆತಿದ್ದು, ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ರೋಗಿಗಳ ಜೀವ ಉಳಿಸಲು ಇದು ನೆರವಾಗುತ್ತಿದೆ.

7. ಮೀತಾಲಿ ಜೈನ್ (ಕಾರ್ಯನಿರ್ವಾಹಕ ನಿರ್ದೇಶಕಿ, ಟೆಕ್ ಜಸ್ಟೀಸ್ ಲಾ)

AI ತಂತ್ರಜ್ಞಾನದಿಂದ ಸಮಾಜ ಮತ್ತು ವ್ಯಕ್ತಿಗಳ ಮೇಲಾಗುವ ಹಾನಿಗಳನ್ನು ತಡೆಯಲು ಮೀತಾಲಿ ಜೈನ್ ಶ್ರಮಿಸುತ್ತಿದ್ದಾರೆ. AI ಚಾಟ್‌ಬಾಟ್‌ಗಳಿಂದ ಉಂಟಾದ ಮಾನಸಿಕ ತೊಂದರೆ ಹಾಗೂ ಅನಾಹುತಗಳ ವಿರುದ್ಧ ಐತಿಹಾಸಿಕ ಕಾನೂನು ಹೋರಾಟಗಳನ್ನು ಇವರ 'ಟೆಕ್ ಜಸ್ಟೀಸ್ ಲಾ' ಸಂಸ್ಥೆಯು ನಡೆಸುತ್ತಿದ್ದು, AI ಕಂಪನಿಗಳು ನೈತಿಕ ಹೊಣೆಗಾರಿಕೆ ಹೊರಬೇಕೆಂದು ಪ್ರತಿಪಾದಿಸುತ್ತಿದೆ.

8. ಅರವಿಂದ್ ರಾಮನ್ (ಹಂಗಾಮಿ ಮುಖ್ಯಸ್ಥರು, US NIST)

ಅಮೆರಿಕದ AI ಮಾನದಂಡಗಳು ಮತ್ತು ನಾವೀನ್ಯತಾ ಕೇಂದ್ರದ (NIST) ಹಂಗಾಮಿ ಮುಖ್ಯಸ್ಥರಾಗಿರುವ ಅರವಿಂದ್ ರಾಮನ್, ಸುಧಾರಿತ AI ವ್ಯವಸ್ಥೆಗಳ ಸಾಮರ್ಥ್ಯ ಮತ್ತು ಸಂಭಾವ್ಯ ಅಪಾಯಗಳನ್ನು ಮೌಲ್ಯಮಾಪನ ಮಾಡುವ ಪರೀಕ್ಷಾ ವಿಧಾನಗಳನ್ನು ರೂಪಿಸುತ್ತಿದ್ದಾರೆ.

9. ಸನ್ನಿ ಗಾಂಧಿ (ಸಹ-ಕಾರ್ಯನಿರ್ವಾಹಕ ನಿರ್ದೇಶಕರು, ENCODE)

'ಎನ್‌ಕೋಡ್' ಸಂಸ್ಥೆಯ ಮೂಲಕ ಸನ್ನಿ ಗಾಂಧಿ AI ಸುರಕ್ಷತಾ ನಿಯಮಗಳು ಮತ್ತು ಪಾರದರ್ಶಕತೆಗಾಗಿ ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ಪರಮಾಣು ಶಸ್ತ್ರಾಸ್ತ್ರಗಳಂತಹ ಸೂಕ್ಷ್ಮ ಕ್ಷೇತ್ರಗಳಿಗೆ ಬೆಸೆದುಕೊಂಡಿರುವ AI ವ್ಯವಸ್ಥೆಗಳ ಮೇಲೆ ಕಡ್ಡಾಯವಾಗಿ 'ಮಾನವ ಮೇಲ್ವಿಚಾರಣೆ' (Human Oversight) ಇರಬೇಕೆಂದು ಇವರು ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

'ಟೈಮ್' ನಿಯತಕಾಲಿಕೆಯ ಈ ಪಟ್ಟಿಯು, AI ಸ್ಪರ್ಧೆಯು ಕೇವಲ ತಂತ್ರಜ್ಞಾನ ಮಾದರಿಗಳನ್ನು ನಿರ್ಮಿಸುವವರ ನಡುವಷ್ಟೇ ಅಲ್ಲ, ಅದನ್ನು ಸಮಾಜಕ್ಕೆ ಉಪಯುಕ್ತವಾಗುವಂತೆ ನಿಯೋಜಿಸುವ, ನಿಯಂತ್ರಿಸುವ ಮತ್ತು ಸುರಕ್ಷಿತವಾಗಿರಿಸುವ ಪರಿಸರ ವ್ಯವಸ್ಥೆಯನ್ನೊಳಗೊಂಡಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಜಾಗತಿಕ AI ಕ್ರಾಂತಿಯಲ್ಲಿ ಭಾರತೀಯ ಮೂಲದ ಈ 9 ಸಾಧಕರ ಕೊಡುಗೆ ಅತ್ಯಂತ ಪ್ರಮುಖವಾಗಿದೆ.