ನವದೆಹಲಿ(ಅ.20):  ದೇಶದಲ್ಲಿ ಕೊರೋನಾ ವೈರಸ್ ಸಂಖ್ಯೆ ಕಡಿಮೆಯಾಗುತ್ತಿದೆ. ಇತ್ತ ಚೇತರಿಸಿಕೊಳ್ಳುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಂತ ಜನರು ಮುಂಜಾಗ್ರತೆವಹಿಸಿವುದು ಅತೀ ಅಗತ್ಯ ಎಂದು ಪ್ರದಾನಿ ಮೋದಿ ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.ಕೊರೋನಾ ವಕ್ಕರಿಸಿದ ಬಳಿ ಪ್ರಧಾನಿ ಮೋದಿ ದೇಶವನ್ನುದ್ದೇಶಿ ಮಾಡುತ್ತಿರುವ 7ನೇ ಭಾಷಣ ಇದಾಗಿದೆ.

ಕೊರೋನಾ ಸಮರ: ಭಾರತದ ಪರಿಶ್ರಮ ಶ್ಲಾಘನೀಯ ಎಂದ ಬಿಲ್‌ ಗೇಟ್ಸ್!..

ಜನತಾ ಕರ್ಫ್ಯೂಯಿಂದ ಹಿಡಿದು, ಲಾಕ್‌ಡೌನ್, ಅನ್‌ಲಾಕ್ ಸೇರಿದಂತೆ ಹಲವು ಮಜಲುಗಳಲ್ಲಿ ದೇಶದ ಜನತೆ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೊರೋನಾ ವೈರಸ್‌ನಿಂದ ಇಡೀ ಜಗತ್ತೆ ಸ್ತಬ್ಧವಾಗಿತ್ತು. ಇದೀಗ ದೇಶದಲ್ಲಿ ಚಟುವಟಿಕೆಗಳು ಮತ್ತೆ ಆರಂಭಗೊಂಡಿದೆ. ಕೊರೋನಾ ವಕ್ಕರಿಸಿದ ಬಳಿಕ ಇದೀಗ ಆರ್ಥಿಕ ಚಟುವಟಿಕೆಯ ವೇಗ ಹೆಚ್ಚಾಗಿದೆ. ದೈನಂದಿನ ಚಟುವಟಿಕೆ, ಜೀವನ ರೂಪಿಸಿಕೊಳ್ಳುವ ಹೋರಾಟ, ವ್ಯವಹಾರಕ್ಕಾಗಿ ಪ್ರತಿದಿನ ಹೊರಬಲೇಬೇಕಾದ ಅನಿವಾರ್ಯತೆ ಇದೆ. ಆದರೆ ಕೊರೋನಾ ವೈರಸ್ ಸಂಕಷ್ಟದ ಸಮಯದಲ್ಲಿ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ಮೋದಿ ಎಚ್ಚರಿಸಿದ್ದಾರೆ.

 

ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಶುಚಿತ್ವ ಅಗತ್ಯಗತ್ಯವಾಗಿದೆ. ಕೊರೋನಾ ಲಸಿಕೆ ಲಭ್ಯವಾಗುವ ವರೆಗೂ ಅತ್ಯಂತ ಎಚ್ಚರ ಅತೀ ಅವಶ್ಯಕ ಎಂದು ಮೋದಿ ಹೇಳಿದ್ದಾರೆ. ಅಜಾಗರೂಕತೆಯಿಂದ ನೀವು ನಿಮ್ಮ ಕುಟಂಬವನ್ನೂ ಸಂಕಷ್ಟಕ್ಕೆ ತಳ್ಳುತ್ತೀರಿ ಎಂದು ಮೋದಿ ಎಚ್ಚರಿಸಿದ್ದಾರೆ.

ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕೊರೋನಾ ಸೋಂಕಿತರ ಚೇತರಿಕೆ ಪ್ರಮಾಣ ಉತ್ತಮವಾಗಿದೆ.  ಸಾವಿನ ಪ್ರಮಾಣ ಕಡಿಮೆಯಾಗಿದೆ. ವಿಶ್ವದ ಸಂಪನ್ಮೂಲ ಸಮೃದ್ಧ ರಾಷ್ಟ್ರಗಳಿಗಿಂತ ಭಾರತ ತನ್ನ ಹೆಚ್ಚಿನ ನಾಗರಿಕರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದೆ. ಕೊರೋನಾ ವೈರಸ್  ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ದಿಟ್ಟ ಹೋರಾಟ ನಡೆಸುತ್ತಿದೆ.  ಹೆಚ್ಚು ಹೆಚ್ಚು ಪರೀಕ್ಷೆಗಳು, ಸೂಕ್ತ ರೀತಿಯ ಆರೈಕೆಗಳಿಂದ ಕೊರೋನಾವನ್ನು ಒಂದು ಹಂತಕ್ಕೆ ನಿಯಂತ್ರಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಭಾರತದಲ್ಲಿ ಇಲ್ಲೀವರೆಗೆ 10 ಕೋಟಿಗೂ ಅಧಿಕ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಈಗಾಗಲೇ 2,000 ಕ್ಕೂ ಹೆಚ್ಚು ಟೆಸ್ಟ್ ಲ್ಯಾಬ್‌ಗಳು ಕಾರ್ಯನಿರ್ವಹಿಸುತ್ತಿದೆ. ಇನ್ನು 90 ಲಕ್ಷ ಆಸ್ಪತ್ರೆ ಬೆಡ್‌ ಲಭ್ಯವಿದೆ. ಇನ್ನು ಬರೋಬ್ಬರಿ 12,000 ಕ್ವಾರಂಟೈನ್ ಕೇಂದ್ರಗಳು ಸಕ್ರೀಯವಾಗಿದೆ ಎಂದು ಮೋದಿ ಹೇಳಿದ್ದಾರೆ.