ವಾಷಿಂಗ್ಟನ್(ಅ.20): ವರ್ಲ್ಡ್‌ ಫೇಮಸ್ ಉದ್ಯಮಿ ಹಾಗೂ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಮತ್ತೊಂದು ಬಾರಿ ಕೊರೋನಾ ವಿರುದ್ಧದ ಸಮರದಲ್ಲಿ ಭಾರತದ ಪಾತ್ರವನ್ನು ಹಾಡಿ ಹೊಗಳಿದ್ದಾರೆ. ಭಾರತ ನಡೆಸಿದ ಅಧ್ಯಯನ ಹಾಗೂ ಉತ್ಪಾದನಾ ಕ್ಷಮತೆ ಕೊರೋನಾ ವಿರುದ್ಧದ ಈ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ.

ಗ್ರ್ಯಾಂಡ್ ಚಾಲೆಂಜಸ್ ವಾರ್ಷಿಕ ಸಭೆ 2020ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದ ಭಾಷಣವನ್ನು ಉಲ್ಲೇಖಿಸಿ ಬಿಲ್ ಗೇಟ್ಸ್ ಈ ಮಾತುಗಳನ್ನಾಡಿದ್ದಾರೆ. ಅಲ್ಲದೇ ಪ್ರಧಾನ ಮಂತ್ರ ನರೇಂದ್ರ ಮೋದಿ ಟ್ವೀಟ್‌ನ್ನು ರೀಟ್ವೀಟ್ ಮಾಡಿರುವ ಬಿಲ್‌ ಗೇಟ್ಸ್ ಉತ್ತರಿಸಿದ್ದಾರೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾದ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ಇದಕ್ಕೂ ಮೊದಲು ಅನೇಕ ಸಂದರ್ಭದಲ್ಲಿ ಬಿಲ್‌ ಗೇಟ್ಸ್‌ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಪರಿಶ್ರಮವನ್ನು ಹಾಡಿ ಹೊಗಳಿದ್ದಾರೆ. ಅಲ್ಲದೇ ಜಾಗತಿಕ ಮಟ್ಟದಲ್ಲಿ ಭಾರತದ ಶ್ರಮ ಪಗ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ. ಅಲ್ಲದೇ ಭಾರತದ ಹೆಸರು ವಿಶ್ವ ಅತಿ ದೊಡ್ಡ ಔಷಧ ಉತ್ಪಾದನಾ ದೇಶಗಳ ಪಟ್ಟಿಯಲ್ಲಿದೆ, ಹೀಗಿರುವಾಗ ಲಸಿಕೆ ತಯಾರಿಸುವ ಅತಿ ಹೆಚ್ಚಿನ ಕ್ಷಮತೆ ಭಾರತಕ್ಕಿದೆ.

ಇದೇ ಕಾರಣದಿಂದಾಗಿ ಭಾರತದಲ್ಲಿ ಇಲ್ಲೇ ತಯಾರಿಸಲಾಗುತ್ತಿರುವ ಲಸಿಕೆಯೊಂದಿಗೆ ಆಕ್ಸ್‌ಫರ್ಡ್‌ ಹಾಗೂ ರಷ್ಯಾದ ಲಸಿಕೆಯ ಪ್ರಯೋಗ ನಡೆಯುತ್ತಿದೆ. ಈ ಮೂಲಕ ಲಸಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಭಾರತದಲ್ಲಿ ಅದನ್ನು ಉತ್ಪಾದಿಸುವುದೇ ಇದರ ಹಿಂದಿನ ಉದ್ದೇಶವಾಗಿದೆ.