ಮಹಾರಾಣಿ ಬಾಲಕಿಯರ ಪದವಿ ಕಾಲೇಜಿನಲ್ಲಿ ಮೂರು ಸಮಾಧಿಗಳು ಪತ್ತೆಯಾಗಿವೆ. ಈ ಸಮಾಧಿಗಳು ಯಾರದ್ದು ಮತ್ತು ಅವುಗಳನ್ನು ಯಾರು ನಿರ್ಮಿಸಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ.
ಜೈಪುರ: ಮಹಿಳಾ ಕಾಲೇಜಿನಲ್ಲಿರುವ ಮೂರು ಸಮಾಧಿಗಳ ತೆರವು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ರಾಜಸ್ಥಾನದ ಜೈಪುರ ನಗರದಲ್ಲಿರುವ ಮಹಾರಾಣಿ ಬಾಲಕಿಯರ ಪದವಿ ಕಾಲೇಜಿನಲ್ಲಿ ಮೂರು ಸಮಾಧಿಗಳಿದ್ದು, ಈ ವಿಷಯ ಕೋಲಾಹಲ ಸೃಷ್ಟಿಸಿದೆ. ಈ ಮೂರು ಸಮಾಧಿಗಳು (ಮಜಾರ್) ಯಾರದ್ದು? ಆವರಣದಲ್ಲಿ ಅಂತ್ಯಸಂಸ್ಕಾರ ಮಾಡಿದ್ಯಾರು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಮೂರು ಸಮಾಧಿ ವಿಷಯ ಮುನ್ನಲೆಗೆ ಬರುತ್ತಿದ್ದಂತೆ ಕೆಲ ಧಾರ್ಮಿಕ ಮತ್ತು ವಿದ್ಯಾರ್ಥಿ ಸಂಘಟನೆಗಳು ಆಗಮಿಸಿ ಕಾಲೇಜು ಆಡಳಿತ ಮಂಡಳಿಯನ್ನು ಭೇಟಿಯಾಗಿದ್ದಾರೆ. ಸಂಘಟನೆಗಳು ಸಮಾಧಿ ತೆರವುಗೊಳಿಸಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿವೆ.
ಮಹಾರಾಣಿ ಬಾಲಕಿಯರ ಪದವಿ ಕಾಲೇಜಿನ ಆವರಣದ ಹಿಂಭಾಗದಲ್ಲಿ ಈ ಮೂರು ಸಮಾಧಿಗಳಿವೆ. ಎಲ್ಲಾ ಮೂರು ಸಮಾಧಿಗಳು ಮೈದಾನದ ಸಮೀಪದಲ್ಲಿರೋದು ವಿವಾದಕ್ಕೆ ಕಾರಣವಾಗಿದೆ. ಮೂರು ಸಮಾಧಿಗಳು ಬಣ್ಣ ಬಳೆಯಲಾಗಿದ್ದು,ಹಸಿರು ಬಟ್ಟೆಗಳಿಂದ ಕವರ್ ಮಾಡಲಾಗಿದೆ. ಹಾಗೆಯೇ ಸಮಾಧಿ ಸಮೀಪದಲ್ಲಿರುವ ಮರಗಳ ಮೇಲೆ ಕೆಲವು ಹಾಳೆಗಳನ್ನು ಹಾಕಲಾಗಿದೆ. ಸಮಾಧಿ ಆಸುಪಾಸಿನಲ್ಲಿಯೇ ಧೂಪದ್ರವ್ಯವನ್ನು ಸುಡಲು ಪ್ರತ್ಯೇಕ ಸ್ಥಳಗಳನ್ನು ಮಾಡಲಾಗಿದೆ. ಇದನ್ನೆಲ್ಲಾ ಗಮನಿಸಿದ್ರೆ ಪ್ರತಿನಿತ್ಯ ಜನರು ಇಲ್ಲಿಗೆ ಬರುತ್ತಾರೆ ಎಂದು ತಿಳಿಯುತ್ತದೆ.
ಎರಡು ಅಕ್ಕ-ಪಕ್ಕ, ಮತ್ತೊಂದು 10 ಅಡಿ ದೂರ
ಸಮಾಧಿಯ ಅಡಿಪಾಯವನ್ನು ಕಲ್ಲು ಮತ್ತು ಕಾಂಕ್ರಿಟ್‌ಗಳನ್ನು ಬಳಸಿ ಸುಭದ್ರ ಮಾಡಲಾಗಿದೆ. ಎರಡು ಸಮಾಧಿ ಅಕ್ಕ-ಪಕ್ಕವಿದ್ರೆ, ಮತ್ತೊಂದು ಸುಮಾರು 10 ಅಡಿ ದೂರದಲ್ಲಿದೆ. ದೂರದಲ್ಲಿರೋದು ಮಗುವಿನ ಸಮಾಧಿ ಆಗಿರಬಹುದು ಎಂದು ಹೇಳಲಾಗುತ್ತಿದೆ. ಸಮಾಧಿ ಸುತ್ತಲೂ ಚಿಕ್ಕ ಪೆಟ್ಟಿಗೆ ಇರಿಸಲಾಗಿದ್ದು, ಅದನ್ನು ಲಾಕ್ ಮಾಡಲಾಗಿದೆ. ಬಹುಶಃ ಇಲ್ಲಿಗೆ ಬರುವ ಜನರು ಈ ಪೆಟ್ಟಿಗೆಯಲ್ಲಿ ಹಣ ಹಾಕುತ್ತಿರಬಹುದು. ಇಲ್ಲಿ ಬಹಳ ಸಮಯದಿಂದ ನಿಯಮಿತವಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದು ತೋರುತ್ತದೆ.
ಜೈಪುರದ ಮಹಾರಾಣಿ ಗಾಯತ್ರಿ ದೇವಿ ಅವರು ಆರಂಭಿಸಿದ ಕಾಲೇಜಿನ ಬಳಿ ಮೂರು ಸಮಾಧಿಗಳನ್ನು ಮಾಡಿದ್ಯಾರು ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ. ಸ್ಥಳೀಯರ ಪ್ರಕಾರ, ಸುಮಾರು 10 ರಿಂದ 15 ವರ್ಷದಿಂದ ಇಲ್ಲಿ ಸಮಾಧಿಗಳಿವೆ. ಒಂದು ಸಮಾಧಿ ಮಾತ್ರ ಕಾಣುತ್ತಿತ್ತು. ಇನ್ನುಳಿದ ಎರಡು ಸಮಾಧಿಗಳು ಮಣ್ಣಿನಲ್ಲಿ ಹುದುಗಿ ಹೋಗಿದ್ದವು. ಇದೀಗ ಕಲ್ಲುಗಳಿಂದ ಅಡಿಪಾಯ ಮಾಡಿ, ಬಟ್ಟೆ ಹಾಕಿರೋದರಿಂದ ಕಾಣಿಸುತ್ತಿವೆ ಎಂದು ಹೇಳುತ್ತಾರೆ.
ಪ್ರಿನ್ಸಿಪಾಲ್ ಪಾಯಲ್ ಲೋಧಾ ಹೇಳೋದೇನು?
ಮಹಾರಾಣಿ ಕಾಲೇಜಿನ ಪ್ರಾಂಶುಪಾಲರಾದ ಪಾಯಲ್ ಲೋಧಾ, ಇಲ್ಲಿಗೆ ಬಂದು ಕೇವಲ 6 ತಿಂಗಳಾಗಿದೆ. ಹಾಗಾಗಿ ಪಾಯಲ್ ಲೋಧಾ ಅವರಿಗೂ ಈ ಮೂರು ಸಮಾಧಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕಳೆದ 15 ವರ್ಷಗಳಿಂದ ಇಲ್ಲಿ ಸಮಾಧಿಗಳಿವೆ ಎಂದು ಹೇಳುತ್ತಾರೆ. ಆದರೆ ಹೊಸಬರಾಗಿರುವ ಕಾರಣ ಸಮಾಧಿ ಕುರಿತು ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಂಡು ಉತ್ತರಿಸಲಾಗುವುದು ಎಂದು ಪಾಯಲ್ ಲೋಧಾ ಹೇಳಿದ್ದಾರೆ.
ಬಾಲಕಿಯರ ಕಾಲೇಜಿನೊಳಗೆ ಪುರುಷರು ಸೇರಿದಂತೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಆದ್ರೂ ಜನರು ಹೇಗೆ ಈ ಸಮಾಧಿ ಬಳಿ ತಲುಪುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸ್ಥಳೀಯ ಆಡಳಿತಕ್ಕೂ ಇದರ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ. ಸ್ಥಳೀಯ ವಕೀಲರಾದ ಭರತ್ ಶರ್ಮಾ ಎಂಬವರು ಕಾಲೇಜಿನೊಳಗೆ ಹೋಗಿ ಸಮಾಧಿಯಿರುವ ಸ್ಥಳದಲ್ಲಿ ನಿಂತು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ವೈರಲ್ ಬಳಿಕ ಸಮಾಧಿ ವಿಷಯ ಮುನ್ನಲೆಗೆ ಬಂದಿದೆ. ಅಲ್ಲಿಯವರೆಗೆ ಇಲ್ಲಿ ಸಮಾಧಿಗಳಿರುವ ಬಹುಶಃ ಬಹುತೇಕರಿಗೆ ತಿಳಿದಿರಲಿಲ್ಲ.
ಕಚ್ಚಾ ಸಮಾಧಿ ಆಗಿತ್ತು!
ಕಾಲೇಜಿನಲ್ಲಿರುವ ಕ್ರೀಡಾ ಮೈದಾನದ ಹಿಂಭಾಗದಲ್ಲಿರುವ ಪೊದೆಗಳ ಬಳಿ ಪಂಪ್ ಹೌಸ್ ಕೂಡ ಇದೆ. ಪಂಪ್ ಹೌಸ್ ಆಪರೇಟರ್ ರವಿ ಅವರು ಕಳೆದ 50 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದಾರೆ ಎಂದು ಹೇಳುತ್ತಾರೆ. ಕೆಲವು ಸಮಯದ ಹಿಂದೆ ಇಲ್ಲಿ ಒಂದೇ ಒಂದು ಸಮಾಧಿ ಇತ್ತು ಮತ್ತು ಅದು ಕೂಡ ಒಂದು ಕಚ್ಚಾ ಸಮಾಧಿಯಾಗಿತ್ತು. ಉಳಿದ ಎರಡು ಸಮಾಧಿಗಳು ಮಣ್ಣಿನಲ್ಲಿ ಹೂತುಹೋಗಿರಬೇಕು ಮತ್ತು ನಂತರ ಅವುಗಳನ್ನು ಶಾಶ್ವತಗೊಳಿಸಿರಬೇಕು ಎಂದು ರವಿ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆ
ಕಾಲೇಜು ಬಳಿ ಸಮಾಧಿ ಇರೋದು ಒಳ್ಳೆಯದಲ್ಲ. ಈ ಸಮಾಧಿಗಳನ್ನು ಶೀಘ್ರವೇ ಇಲ್ಲಿಂದ ತೆರವುಗೊಳಿಸಬೇಕು. ಇಲ್ಲವಾದ್ರೆ ಪ್ರತಿಭಟನೆ ನಡೆಸಲಾಗುವುದು ಎಂದು ಧಾರ್ಮಿಕ ಮತ್ತು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ. ವಕೀಲ ಭರತ್ ಶರ್ಮಾ ಈ ಸಂಬಂಧ ಜೈಪುರ ಜಿಲ್ಲಾಧಿಕಾರಿಗೆ ದೂರು ನೀಡಿ ಸಮಾಧಿಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.
ಈ ಮೂರು ಸಮಾಧಿಗಳು ಕಾಲೇಜಿನ ವ್ಯಾಪ್ತಿಯ ಆವರಣದಲ್ಲಿವೆಯಾ? ಇದು ಖಾಸಗಿ ಅಥವಾ ಸರ್ಕಾರಿ ಜಮೀನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಹಾಗೆ ಈ ಮೂರು ಸಮಾಧಿಗಳು ಯಾರದ್ದು ಎಂಬುದರ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
