73 ವರ್ಷಗಳಿಂದ ಭಾರತದ ಈ ರೈಲಿನಲ್ಲಿ ಟಿಕೆಟ್ ಇಲ್ಲದೆ ಜನರ ಪ್ರಯಾಣ!
ಯಾವುದೇ ರೈಲಿನಲ್ಲಿ ಪ್ರಯಾಣಿಸಬೇಕಾದರೂ ಟಿಕೆಟ್ ಪಡೆಯುವುದು ಕಡ್ಡಾಯ. ಆದರೆ, ಭಾರತದಲ್ಲಿ ಒಂದು ವಿಶೇಷ ರೈಲಿದೆ. ಇದರಲ್ಲಿ ನಿಮ್ಮ ಪ್ರಯಾಣಕ್ಕೆ ಟಿಕೆಟ್ ಬೇಕಿಲ್ಲ, ಹಣ ನೀಡಬೇಕಿಲ್ಲ. ಭಕ್ರಾ ನಂಗಲ್ ಅಣೆಕಟ್ಟು ವೀಕ್ಷಿಸಲು ಬರುವ ಪ್ರವಾಸಿಗರಿಗಾಗಿ ಈ ರೈಲು ಓಡಾಡುತ್ತದೆ. 1949ರಲ್ಲಿ ಅಂದರೆ 73 ವರ್ಷಗಳ ಹಿಂದೆ ಈ ರೈಲು ಮೊದಲ ಬಾರಿಗೆ ಚಲಿಸಿತ್ತು. ಪ್ರತಿ ದಿನ 25 ಗ್ರಾಮದ 300ಕ್ಕೂ ಅಧಿಕ ಮಂದಿ ಉಚಿತವಾಗಿ ಈ ರೈಲಿನಲ್ಲಿ ಪ್ರಯಾಣಿಸುತ್ತಾರೆ.
ನವದೆಹಲಿ (ಏ. 30): ಭಾರತೀಯ ರೈಲ್ವೇಯು (Indian Railways) ಏಷ್ಯಾದಲ್ಲಿ ಎರಡನೇ ಅತಿದೊಡ್ಡ ರೈಲು ಜಾಲ ಮತ್ತು ವಿಶ್ವದಲ್ಲಿ ನಾಲ್ಕನೇ ಅತಿ ದೊಡ್ಡ ರೈಲ್ವೇ ವ್ಯವಸ್ಥೆ ಎನಿಸಿದೆ. ಇಲ್ಲಿನ ಎಲ್ಲಾ ರೈಲಿನಲ್ಲಿ ಪ್ರಯಾಣಿಸಲು ನೀವು ಶುಲ್ಕವನ್ನು ಪಾವತಿಸಬೇಕು. ಆದರೆ, ಭಾರತೀಯ ರೈಲ್ವೇಯಲ್ಲಿ ಶುಲ್ಕವನ್ನು ಪಾವತಿಸದೆ ಪ್ರಯಾಣಿಸುವ ರೈಲು ಕೂಡ ಇದೆ ಎಂದರೆ ನಿಮಗೆ ಅಚ್ಚರಿಯಾಗಬಹುದು.
ಒಂದೆಡೆ ಪ್ರಯಾಣ ದರಗಳು ಹೆಚ್ಚಳವಾಗುತ್ತಿರುವ ನಡುವೆ, ರೈಲಿನಲ್ಲಿ ಉಚಿತ ಪ್ರಯಾಣ ಹೇಗೆ ಸಾಧ್ಯ, ಇದನ್ನು ನಂಬಬಹುದೇ ಎನ್ನುವ ಪ್ರಶ್ನೆ ಸಹಜ. ಆದರೆ, ಇಂಥದ್ದೊಂದು ರೈಲು ಭಾರತದಲ್ಲಿ ಇರುವುದು ನಿಜ. ಈ ರೈಲು ಭಾಕ್ರಾ ನಂಗಲ್ ಅಣೆಕಟ್ಟಿನ (Bhakra Nangal Dam) ಪ್ರವಾಸಿಗರಿಗಾಗಿ ಚಲಿಸುತ್ತದೆ.
ಹಿಮಾಚಲ ಪ್ರದೇಶ ಹಾಗೂ ಪಂಜಾಬ್ ಗಡಿಯಲ್ಲಿರುವ ಭಕ್ರಾ ಹಾಗೂ ನಂಗಲ್ ನಡುವೆ ಈ ರೈಲು ಚಲಿಸುತ್ತದೆ. ಭಕ್ರಾ ನಂಗಲ್ ಅಣೆಕಟ್ಟನ್ನು ವೀಕ್ಷಣೆ ಮಾಡಲು ಬಯಸುವವರು ಈ ರೈಲಿನಲ್ಲಿನ ಉಚಿತ ಪ್ರಯಾಣದ (Free Ticket) ಅನುಭವವನ್ನು ಅನಂದಿಸಬಹುದು. ಈ ರೈಲಿನ ವಿಶೇಷವೇನೆಂದರೆ, ಇಡೀ ರೈಲಿನ ಕೋಚ್ ಗಳನ್ನು ನಿರ್ಮಾಣ ಮಾಡಿದ್ದು ಹೆಣ್ಣು ಮಕ್ಕಳು ಅದಲ್ಲದೆ, ಈ ರೈಲಿಯಲ್ಲಿ ಯಾವುದೇ ಟಿಕೆಟ್ ಕಲೆಕ್ಟರ್ ಕೂಡ ಇಲ್ಲ. ಡೀಸೆಲ್ ಇಂಜಿನ್ ನಲ್ಲಿ ರೈಲು ಚಲಿಸುತ್ತಿದ್ದು, ಪ್ರತಿ ದಿನ 50 ಲೀಟರ್ ಡೀಸೆಲ್ ಪ್ರಯಾಣಕ್ಕಾಗಿ ವೆಚ್ಚವಾಗಲಿದೆ. ಮೊದಲು ಈ ರೈಲಿನಲ್ಲಿ 10 ಕೋಚ್ ಗಳಿದ್ದವು. ಆದರೆ, ಈಗ ಕೇವಲ 3 ಕೋಚ್ ಗಳಿವೆ. ಇದರಲ್ಲಿ ಒಂದು ಬೋಗಿ ಪ್ರವಾಸಿಗರಿಗೆ ಮೀಸಲಾಗಿದಲಾಗಿದ್ದರೆ, ಇನ್ನೊಂದು ಬೋಗಿ ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲಾಗಿದೆ.
1949ರಲ್ಲಿ ಈ ರೈಲನ್ನು ಮೊದಲ ಬಾರಿಗೆ ಆರಂಭಿಸಲಾಗಿತ್ತು. ಕಳೆದ 73 ವರ್ಷಗಳಿಂದ ಭಕ್ರಾ ನಂಗಲ್ ಅಣೆಕಟ್ಟಿನ ಸಮೀಪದಲ್ಲಿರುವ 25 ಗ್ರಾಮಗಳ 300ಕ್ಕೂ ಅಧಿಕ ಜನ ಉಚಿತವಾಗಿ ಈ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಶಾಲೆ ಕಾಲೇಜಿಗಳಿಗೆ ಹೋಗುವ ಮಕ್ಕಳು ಈ ರೈಲಿನಿಂದ ದೊಡ್ಡ ಮಟ್ಟದ ಲಾಭ ಪಡೆದುಕೊಂಡಿದ್ದಾರೆ. ಇದರ ಮೂಲಕ ಬರ್ಮಾಳ, ಒಲಿಂದಾ, ನೆಹಲಾ ಭಾಕ್ರಾ, ಹಂಡೋಲಾ, ಸ್ವಾಮಿಪುರ, ಖೇರಾ ಬಾಗ್, ಕಲಕುಂದ, ನಂಗಲ್, ಸಾಲಂಗ್ರಿ ಗ್ರಾಮಗಳು ಸೇರಿದಂತೆ ಎಲ್ಲಾ ಸ್ಥಳಗಳ ಜನರು ಭಾಕ್ರಾ ನಂಗಲ್ ಅಣೆಕಟ್ಟಿನ ಸಮೀಪದ ಪ್ರದೇಶವನ್ನು ಸುತ್ತುತ್ತಾರೆ.
ಕಪ್ಪು ಕುದುರೆ ಎಂದು 23 ಲಕ್ಷ ಕೊಟ್ಟು ತಂದ : ಸ್ನಾನ ಮಾಡಿಸಿದಾಗ ಬಯಲಾಯ್ತು ಬಣ್ಣ
ರೈಲು ಉಚಿತವಾಗಿ ಓಡಲು ಕಾರಣವೇನು?: ಭಕ್ರಾ ನಂಗಲ್ ಅಣೆಕಟ್ಟನ್ನು ಜನರು ಉಚಿತವಾಗಿ ನೋಡಬೇಕು ಎನ್ನುವ ಕಾರಣಕ್ಕೆ ಈ ರೈಲನ್ನು ಓಡಿಸಲಾಗುತ್ತಿದೆ. 1948ರಲ್ಲಿ ಈ ಅಣೆಕಟ್ಟನ್ನು ಕಟ್ಟಲು ಆರಂಭಿಸಿದರೆ, 1963ರಲ್ಲಿ ಉದ್ಘಾಟನೆಯಾಗಿತ್ತು. ಈಗಿನ ಪೀಳಿಗೆಯ ಜನರಿಗೆ ಈ ಅಣೆಕಟ್ಟನ್ನು ಕಟ್ಟುವ ನಿಟ್ಟಿನಲ್ಲಿ ಆಗಿರುವ ಶ್ರಮದ ಬಗ್ಗೆ ಅರಿವಿಲ್ಲ. ಈ ಅಣೆಕಟ್ಟನ್ನು ಕಟ್ಟುವಲ್ಲಿ ಮಾಡಿದ ಸಾಹಸ ಹೇಗಿತ್ತು ಎನ್ನುವುದನ್ನು ತೋರಿಸುವ ಸಲುವಾಗಿಯೇ ರೈಲು ಇಲ್ಲಿ ಉಚಿತವಾಗಿ ಓಡಾಟ ನಡೆಸುತ್ತದೆ. ಭಕ್ರಾ ಬಿಯಾಸ್ ಮ್ಯಾನೇಜ್ ಮೆಂಟ್ ಬೋರ್ಡ್ (Bhakra Beas Management Board ) ವತಿಯಿಂದ ಈ ರೈಲು ನಿರ್ವಹಣೆಯಾಗುತ್ತದೆ. ಬೆಟ್ಟವನ್ನು ಕಡಿದು, ಇಲ್ಲಿ ರೈಲ್ವೇ ಟ್ರ್ಯಾಕ್ ಅನ್ನು ನಿರ್ಮಾಣ ಮಾಡಲಾಗಿದೆ ಎನ್ನುವುದು ವಿಶೇಷ.
ಮುಸ್ಲಿಂ ಪ್ರಯಾಣಿಕರಿಗೆ ಇಫ್ತಾರ್ ಟ್ರೀಟ್ ನೀಡಿದ ಭಾರತೀಯ ರೈಲ್ವೆ: ನೆಟ್ಟಿಗರಿಂದ ಶ್ಲಾಘನೆ
ಈ ಅಣೆಕಟ್ಟಿನ ವಿಶೇಷತೆ ಏನು: ಸಟ್ಲೇಜ್ ನಡಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಈ ಅಣೆಕಟ್ಟನ್ನು ಭಾರತದ ಮೊದಲ ಪ್ರಧಾನಮಂತ್ರಿ ಜವಹರಲಾಲ್ ನೆಹರು ಅವರು, ಪುನರುತ್ಥಾನದ ಭಾರತದ ಹೊಸ ದೇವಾಲಯ ಎಂದು ವರ್ಣನೆ ಮಾಡಿದ್ದರು. ಈ ಅಣೆಕಟ್ಟು ಇಡೀ ಭಾರತದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಾಮಾನ್ಯವಾಗಿ ಭಕ್ರಾ ಅಣೆಕಟ್ಟು ಎಂದು ಹೇಳಲಾಗುವ ಈ ಅಣೆಕಟ್ಟು ಪಂಜಾಬ್ ನ ನಂಗಲ್ ಪಟ್ಟಣದಿಂದ 15 ಕಿಲೋಮೀಟರ್ ಹಾಗೂ ಬಿಲಾಸ್ ಪುರದಿಂದ 106 ಕಿಲೋಮೀಟರ್ ದೂರದಲ್ಲಿದೆ.