ದೇಶದಲ್ಲೇ ಮೊದಲ ಬಾರಿಗೆ ಕೊರೋನಾ ವೈರಸ್‌ ಕಾಣಿಸಿಕೊಂಡಿದ್ದು ಕೇರಳದಲ್ಲಿ. ಅಂದು ಜ.30. ವಿದೇಶದಿಂದ ಬಂದ ವಿದ್ಯಾರ್ಥಿನಿಯೊಬ್ಬಳಲ್ಲಿ ಸೋಂಕು ಪತ್ತೆಯಾಗಿತ್ತು. ನೋಡನೋಡುತ್ತಿದ್ದಂತೆ ಒಬ್ಬರು, ಇಬ್ಬರಾದರು. ದಿನೇದಿನೇ ಸೋಂಕಿತರು ಹೆಚ್ಚಾದರು. ಕೇರಳ ‘ಭಾರತದ ಕೊರೋನಾ ಹಾಟ್‌ಸ್ಪಾಟ್‌’ ಆಗುತ್ತಿದೆ ಎನ್ನುವಷ್ಟರ ಮಟ್ಟಿಗೆ ಭೀತಿ ಆವರಿಸಿತು.

ಆದರೆ ಅದೇ ಇಂದು ಕೇರಳದ ಪರಿಸ್ಥಿತಿ ನಂಬಲು ಆಗದಷ್ಟುಪ್ರಮಾಣದಲ್ಲಿ ಸುಧಾರಿಸಿದೆ. ಕೇರಳದ ನಂತರ ಸೋಂಕು ಕಾಣಿಸಿಕೊಂಡ ದೊಡ್ಡದೊಡ್ಡ ರಾಜ್ಯಗಳು ಕೊರೋನಾ ನಿಯಂತ್ರಿಸಲು ಕಷ್ಟಪಡುತ್ತಿದ್ದರೆ, ದೇವರ ನಾಡಿನಲ್ಲಿ ಪವಾಡದ ರೀತಿ ಪ್ರಕರಣ ಕಡಿಮೆಯಾಗಿವೆ. ಹೊಸ ಸೋಂಕಿತರ ಸಂಖ್ಯೆ ಎರಡಂಕಿಯಿಂದ ಈಗ ಒಂದಂಕಿಗೆ ಇಳಿದು ವಾರವೇ ಕಳೆದಿದೆ.

ಈವರೆಗೆ ಕೇರಳದಲ್ಲಿ ಕೊರೋನಾಗೆ ಕೇವಲ ಮೂವರು ಮೃತಪಟ್ಟಿದ್ದಾರೆ. ಬಹುತೇಕ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ ದೇಶ- ವಿದೇಶಗಳಲ್ಲಿ ಕೊರೋನಾ ನಿಗ್ರಹಕ್ಕೆ ಕೇರಳ ಅನುಸರಿಸಿದ ಮಾದರಿ ಬಗ್ಗೆ ಚರ್ಚೆಯಾಗುತ್ತಿದೆ. ಅದೇ ರೀತಿ ರಾಜಸ್ಥಾನದ ಜವಳಿ ನಗರ ‘ಭಿಲ್ವಾರಾ ಮಾದರಿ’ಯೂ ಸದ್ದು ಮಾಡುತ್ತಿದೆ. ಇದರ ಜತೆಗೆ ತಮಿಳುನಾಡಿನಲ್ಲೂ ಕೊರೋನಾ ತಹಬದಿಗೆ ಬರುತ್ತಿದೆ.

ರಾಷ್ಟ್ರವ್ಯಾಪಿ ‘ವಿಶಿಷ್ಟ ಟ್ರೆಂಡ್‌’: ಪ್ರತಿ ರಾಜ್ಯದ 3 ಜಿಲ್ಲೆಗಳಲ್ಲೇ ಶೇ.69 ಕೇಸು!

28 ದಿನ ಕ್ವಾರಂಟೈನ್‌: ಕೇರಳದ ಈ ಮಾದರಿ ದೇಶಕ್ಕೇ ಹೊಸತು

ವಿದೇಶದಿಂದ ಬಂದವರನ್ನು ರೋಗ ಲಕ್ಷಣ ಇರಲಿ, ಬಿಡಲಿ 14 ದಿನ ಕ್ವಾರಂಟೈನ್‌ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಆದರೆ ಚೀನಾದ ಕೊರೋನಾ ಕೇಂದ್ರ ವುಹಾನ್‌ನಲ್ಲಿ ರೋಗ ಲಕ್ಷಣವಿಲ್ಲದ ವ್ಯಕ್ತಿಯಲ್ಲಿ 27ನೇ ದಿನವೂ ಸೋಂಕು ಕಾಣಿಸಿಕೊಂಡಿತ್ತು. ಅದರಿಂದ ಎಚ್ಚೆತ್ತ ಕೇರಳ, 14 ದಿನಗಳ ಕ್ವಾರಂಟೈನ್‌ ಅನ್ನು 28 ದಿನಕ್ಕೆ ವಿಸ್ತರಣೆ ಮಾಡಿತು. ಅದು ಫಲ ನೀಡಿತು.

ಆರೋಗ್ಯ ಕಾರ್ಯಕರ್ತರನ್ನು ಕರೆಸಿ ಮನೆಮನೆ ತಪಾಸಣೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸುವ ಮೊದಲೇ ಅಂದರೆ ಮಾ.15ರ ಹೊತ್ತಿಗೆ ಕೇರಳ ಸರ್ಕಾರ ‘ಬ್ರೇಕ್‌ ದ ಚೈನ್‌’ ಅಭಿಯಾನ ಘೋಷಿಸಿತು.

ಬೀದಿಗಳಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ನೀರಿನ ಕ್ಯಾನ್‌ ಇರಿಸಿ, ಕೈತೊಳೆದುಕೊಳ್ಳುವಂತೆ ಜನರನ್ನು ಪ್ರೇರೇಪಿಸಿತು. ಸಾಮಾಜಿಕ ಅಂತರಕ್ಕೆ ಒತ್ತು ನೀಡಿತು. ಸುಶಿಕ್ಷಿತರು ಹೆಚ್ಚಿರುವ ಕೇರಳ ಜನರು ಮಾತು ಕೇಳಿದರು.

ಕೊಡಗಿನಲ್ಲಿ ಚೈನ್‌ಬ್ರೇಕ್‌: ಸತತ 26 ದಿನಗಳಿಂದ ಹೊಸ ಸೋಂಕು ಇಲ್ಲ!

ವೃದ್ಧರಿಗೆ ರಿವರ್ಸ್‌ ಕ್ವಾರಂಟೈನ್‌

ಕೊರೋನಾ ವೈರಸ್‌ ಜತೆಜತೆಗೇ ಕ್ವಾರಂಟೈನ್‌ ಎಂಬ ಪದವೂ ವಿಶ್ವವಿಖ್ಯಾತವಾಗಿಬಿಟ್ಟಿದೆ. ಆದರೆ ಕೇರಳದಲ್ಲಿ ರಿವರ್ಸ್‌ ಕ್ವಾರಂಟೈನ್‌ ಎಂಬ ಪದ್ಧತಿಯನ್ನೂ ಅನುಸರಿಸಲಾಗುತ್ತಿದೆ. ರೋಗ ಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ ಇರುವ ವ್ಯಕ್ತಿಗಳನ್ನು ಏಕಾಂತ ವಾಸದಲ್ಲಿಡುವುದನ್ನು ಕ್ವಾರಂಟೈನ್‌ ಎಂದು ಕರೆದರೆ, ಸೋಂಕು ತಗುಲುವ ಅಧಿಕ ಸಾಧ್ಯತೆ ಹೊಂದಿರುವ ವೃದ್ಧರನ್ನು ಗುರುತಿಸಿ, ಅವರನ್ನು ಪ್ರತ್ಯೇಕ ಸ್ಥಳದಲ್ಲಿಟ್ಟು ಅವರಿಗೆ ಬೇಕಾದ ಅವಶ್ಯ ವಸ್ತು, ಔಷಧ ಎಲ್ಲವನ್ನೂ ಒದಗಿಸುವುದು ರಿವರ್ಸ್‌ ಕ್ವಾರಂಟೈನ್‌. ಇದರಿಂದಲೂ ಸೋಂಕು ಹರಡುವುದು ತಪ್ಪಿದೆ ಎಂದು ಹೇಳಲಾಗಿದೆ.

ಕೇರಳ ಗ್ರಾಫ್‌ ಇಳಿದಿದೆ, ವೈರಸ್‌ನಿಂದ ಪಾರಾಗಿದೆಯಾ?

ಸ್ಥಳೀಯ ಸಂಸ್ಥೆಗಳ ಸದೃಢ ಸಹಕಾರ, ಆರೋಗ್ಯ ವ್ಯವಸ್ಥೆಯಲ್ಲಿ ಹೆಚ್ಚಿನ ಹೂಡಿಕೆ, ವಿನೂತನ ಕ್ರಮಗಳಿಂದಾಗಿ ಕೊರೋನಾ ವೈರಸ್‌ ಅನ್ನು ಸದ್ಯದ ಮಟ್ಟಿಗೆ ನಿಗ್ರಹಿಸುವಲ್ಲಿ ಕೇರಳ ಸಫಲವಾಗಿದೆ. ಕೊರೋನಾ ಗ್ರಾಫ್‌ ಕೂಡ ಇಳಿದಿದೆ. ಆದರೆ ಲಾಕ್‌ಡೌನ್‌ ತೆರವಾದ ಬಳಿಕವೂ ಪರಿಸ್ಥಿತಿ ಇದೇ ರೀತಿ ಇರುತ್ತಾ ಎಂಬುದು ಯಕ್ಷಪ್ರಶ್ನೆ. ಜೂನ್‌ನಿಂದ ಕೇರಳ ಮೂಲಕವೇ ಭಾರತಕ್ಕೆ ಮುಂಗಾರು ಪ್ರವೇಶವಾಗಲಿದೆ. ಮಳೆಗಾಲದಲ್ಲಿ ಕೇರಳದಲ್ಲಿ ಜ್ವರಪೀಡಿತರ ಸಂಖ್ಯೆ ಹೆಚ್ಚು. ಆಗ ಆ ಜ್ವರವನ್ನು ಕೊರೋನಾ ಎಂದು ಜನರು ಭಾವಿಸಿದರೆ ತಪಾಸಣೆಗೆ ತಕ್ಕ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ವಿದೇಶದಲ್ಲಿ ನೆಲೆಸಿರುವ ಕೇರಳಿಗರು ತವರೂರಿಗೆ ಬರುವಾಗ ವೈರಸ್‌ ಹೊತ್ತು ತಂದರೆ ಕಷ್ಟವಾಗಲಿದೆ.

ದಂಡಂ ದಶಗುಣಂ: ಇದು ಭಿಲ್ವಾರಾದ ಹೊಸ ಮಾಡೆಲ್‌

ರಾಜಸ್ಥಾನದಲ್ಲಿ ಭಿಲ್ವಾರಾ ನಗರ ಇದೆ. ಅಲ್ಲಿ ಕೊರೋನಾ ನಿಗ್ರಹಕ್ಕೆ ಕೈಗೊಂಡ ಕ್ರಮಗಳು ದೇಶಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿವೆ. ಅಲ್ಲಿ ಈಗ ಕೊರೋನಾ ಸೋಂಕಿನ ಹೊಸ ಪ್ರಕರಣಗಳು ನಿಂತುಹೋಗಿವೆ. 28 ದಿನಗಳ ಕಾಲ ಇದೇ ಟ್ರೆಂಡ್‌ ಮುಂದುವರಿದರೆ ಭಿಲ್ವಾರಾವನ್ನು ಕೊರೋನಾ ಮುಕ್ತ ಎಂದು ಘೋಷಣೆ ಮಾಡಲಾಗುತ್ತದೆ. ಭಿಲ್ವಾರಾ ಜಿಲ್ಲೆಯ ಒಟ್ಟು ಜನಸಂಖ್ಯೆ 27 ಲಕ್ಷ. ಅಲ್ಲಿ ಮಾ.19ರಂದು 6 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಯಿತು.

ಬಾಂಗರ್‌ ಸ್ಮಾರಕ ಆಸ್ಪತ್ರೆಯ ವೈದ್ಯರೂ ಸೋಂಕಿತರಲ್ಲಿದ್ದರು. ಆ ವೈದ್ಯರುಗಳಿಂದ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಭಿಲ್ವಾರಾದಲ್ಲಿ ಯಾರಿಗೆ ಸೋಂಕು ಬಂದಿದೆ ಎಂಬುದೇ ಅರಿಯದಾಯಿತು. ರಾಜಸ್ಥಾನದ ‘ವುಹಾನ್‌’ ಆಗುವ ಅಪಾಯ ಕಾಡಿತು. ಕೂಡಲೇ ಜಿಲ್ಲಾಡಳಿತ ಕಫ್ರ್ಯೂ ಹೇರಿತು. ಜಿಲ್ಲೆಯ ಗಡಿಗಳನ್ನು ಮುಚ್ಚಿ ಜನರು ಬೀದಿಗೆ ಬರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಬಲ ಪ್ರಯೋಗದ ಜತೆ ಕೈಗೊಳ್ಳಲಾಯಿತು.

ಬಸ್‌ ಸೇರಿದಂತೆ ಎಲ್ಲ ವಾಹನಗಳ ಸಂಚಾರ ನಿರ್ಬಂಧಿಸಲಾಯಿತು. ರೈಲುಗಳು ಭಿಲ್ವಾರಾದಲ್ಲಿ ನಿಲ್ಲದಂತೆ ನೋಡಿಕೊಳ್ಳಲಾಯಿತು. ಮನೆಮನೆಗೇ ರೇಷನ್‌, ಅಗತ್ಯ ವಸ್ತು ಪೂರೈಸಲಾಯಿತು. ಸುಮಾರು 22 ಲಕ್ಷ ಜನರನ್ನು 3000 ತಂಡಗಳು ಭೇಟಿ ಮಾಡಿ, ವಿವರ ಸಂಗ್ರಹಿಸಿದವು. ಸುಮಾರು 6000 ಸ್ಯಾಂಪಲ್‌ ಸಂಗ್ರಹಿಸಲಾಯಿತು. 28 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು, ಇಬ್ಬರು ಮೃತಪಟ್ಟರು. ಉಳಿದ 26 ಮಂದಿ ಡಿಸ್ಚಾಜ್‌ರ್‍ ಆಗಿದ್ದಾರೆ. ಮೇ 6ರವರೆಗೂ ಒಂದು ಪ್ರಕರಣ ಪತ್ತೆಯಾಗಿದ್ದರೆ ಭಿಲ್ವಾರಾವನ್ನು ಕೊರೋನಾ ಮುಕ್ತ ಎಂದು ಘೋಷಿಸಲಾಗುತ್ತದೆ.

ತಬ್ಲೀಘಿಗಳಿಂದ ಸಂಕಷ್ಟಕ್ಕೆಸಿಲುಕಿದ್ದ ತ.ನಾಡು ಚೇತರಿಕೆ

 ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅಷ್ಟೇನೂ ಇರಲಿಲ್ಲ. ಆದರೆ ಯಾವಾಗ ತಬ್ಲೀಘಿಗಳ ಪ್ರಕರಣ ಪತ್ತೆಯಾದವೋ ತಮಿಳುನಾಡು ದಿಢೀರನೇ ಕೊರೋನಾ ಸೋಂಕಿನ ಹಾಟ್‌ಸ್ಪಾಟ್‌ ಆಗಿ ದೇಶದಲ್ಲಿ ಎರಡನೇ ಸ್ಥಾನಕ್ಕೆ ಜಿಗಿಯಿತು. ಇವತ್ತಿಗೂ ಒಟ್ಟು ಕೊರೋನಾಪೀಡಿತರಲ್ಲಿ ಶೇ.80ಕ್ಕಿಂತ ಹೆಚ್ಚು ಮಂದಿ ತಬ್ಲೀಘಿ ಜಮಾತ್‌ ನಂಟು ಹೊಂದಿದವರು. ಆದರೆ ಈಗ ಅಲ್ಲಿ ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೋಗ ಪತ್ತೆ ಪರೀಕ್ಷೆ ನಡೆಯುತ್ತಿವೆ.

ಹೊಸ ಸೋಂಕು ಪತ್ತೆಯಾದವರ ಸಂಖ್ಯೆಗಿಂತ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆಯೇ ಅಧಿಕವಾಗುತ್ತಿರುವುದರಿಂದ ತಮಿಳುನಾಡಿನ ಗ್ರಾಫ್‌ ಇಳಿಯುತ್ತಿದೆ. ಇದು ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸುತ್ತಿದ್ದಾರೆ. ಕೊರೋನಾ ಪತ್ತೆಯಾಗುತ್ತಿದ್ದಂತೆ ಸೋಂಕಿತರು, ಸೋಂಕಿತರ ಜತೆ ಸಂಪರ್ಕ ಹೊಂದಿದವರನ್ನು ತಮಿಳುನಾಡು ಯಶಸ್ವಿಯಾಗಿ ಪತ್ತೆ ಮಾಡಿ ಕ್ವಾರಂಟೈನ್‌ ಮಾಡಿತು. ರೋಗ ತಗುಲುವ ಸಂಭಾವ್ಯತೆ ಹೊಂದಿದವರನ್ನು ಪತ್ತೆ ಹಚ್ಚಿ, ಅವರನ್ನು ರಕ್ಷಿಸುವ ಕೆಲಸ ಮಾಡಿತು. ಇದು ಫಲ ನೀಡಿತು ಎನ್ನಲಾಗಿದೆ.