ಅಂಬಾಲದಲ್ಲೇ ಯಾಕೆ ರಫೇಲ್ ಇಳಿಯಿತು? ಇಲ್ಲಿದೆ ಕಾರಣ
ಭಾರತಕ್ಕೆ ಈಗ ರಫೇಲ್ ಶಕ್ತಿ| ಫ್ರಾನ್ಸ್‌ನಿಂದ ಅಂಬಾಲಾಕ್ಕೆ ಬಂದಿಳಿದ 5 ರಫೇಲ್ ಜೆಟ್| ಚೀನಾ ಸಂಘರ್ಷದ ಬೆನ್ನಲ್ಲೇ ವಾಯುಪಡೆಗೆ ಆನೆಬಲ
ಅಂಬಾಲಾ(ಜು.30): ಜಗತ್ತಿನ ಅತ್ಯಂತ ಶಕ್ತಿಶಾಲಿ ಯುದ್ಧವಿಮಾನಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಗಳಿಸಿರುವ ಫ್ರಾನ್ಸ್‌ನ ಬಹುನಿರೀಕ್ಷಿತ ರಫೇಲ್ ಯುದ್ಧವಿಮಾನಗಳು ಕೊನೆಗೂ ಭಾರತಕ್ಕೆ ಬಂದು ತಲುಪಿವೆ. ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಕಂಪನಿಯಿಂದ ಭಾರತೀಯ ವಾಯುಪಡೆ 59,000 ಕೋಟಿ ರು. ವೆಚ್ಚದಲ್ಲಿ ಖರೀದಿಸಿರುವ 36 ರಫೇಲ್ ಯುದ್ಧವಿಮಾನಗಳ ಪೈಕಿ ಮೊದಲ ಕಂತಿನ ಐದು ವಿಮಾನಗಳು ಬುಧವಾರ ಮಧ್ಯಾಹ್ನ 3.10ಕ್ಕೆ ಹರ್ಯಾಣದ ಅಂಬಾಲಾ ವಾಯುನೆಲೆಯಲ್ಲಿ ಭೂಸ್ಪರ್ಶ ಮಾಡಿದವು.
ದಕ್ಷಿಣ ಫ್ರಾನ್ಸ್‌ನ ಮೆರಿನಿಯಾಕ್ ವಾಯುನೆಲೆಯಿಂದ ಎರಡು ದಿನಗಳ ಹಿಂದೆ ಹೊರಟಿದ್ದ ಈ ಯುದ್ಧವಿಮಾನಗಳು 7000 ಕಿ.ಮೀ. ಕ್ರಮಿಸಿ ಭಾರತಕ್ಕೆ ಆಗಮಿಸಿವೆ. ಬುಧವಾರ ಇವು ಭಾರತದ ವಾಯುನೆಲೆ ಪ್ರವೇಶಿಸುತ್ತಿದ್ದಂತೆ ಎರಡು ಸುಖೋಯ್-30 ಯುದ್ಧವಿಮಾನಗಳು ಆಗಸಕ್ಕೆ ತೆರಳಿ ಇವುಗಳನ್ನು ಕರೆದುಕೊಂಡು ಬಂದವು. ನಂತರ ಇವು ಲ್ಯಾಂಡ್ ಆಗುತ್ತಿದ್ದಂತೆ ವಾಟರ್ ಸೆಲ್ಯೂಟ್ ನೀಡಿ ಸ್ವಾಗತಿಸಲಾಯಿತು. ರಫೇಲ್ ಆಗಮನದೊಂದಿಗೆ ಭಾರತದ ಜತೆ ಸದಾ ತೆಗೆವ ದೇಶಗಳಿಗೆ ಕಠಿಣ ಎಚ್ಚರಿಕೆ ಸಿಕ್ಕಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚೀನಾ ಮೇಲೆ ಕಣ್ಣಿಡಿ, ಮಾರಿಷಸ್ ಸುಪ್ರೀಂ ಕೋರ್ಟ್ ಉದ್ಘಾಟನೆಯಲ್ಲಿ ಮೋದಿ ಎಚ್ಚರಿಕೆ!
ರಫೇಲ್‌ಗಳು ಭಾರತಕ್ಕೆ ಆಗಮಿಸುತ್ತಿದ್ದಂತೆಯೇ ಅವುಗಳನ್ನು ವಾಯುಪಡೆಯ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಂಬಾಲಾ ವಾಯುನೆಲೆಯು ಚೀನಾ ಗಡಿ ಮತ್ತು ಪಾಕಿಸ್ತಾನದ ಗಡಿಯೆರಡಕ್ಕೂ ಹತ್ತಿರವಿರುವುದರಿಂದ ನಂ.17 ಸ್ಕಾ ್ವಡ್ರನ್ ಅಥವಾ ‘ಗೋಲ್ಡನ್ ಆ್ಯರೋ’ ಎಂದು ಕರೆಸಿಕೊಳ್ಳುವ ಈ ವಾಯುನೆಲೆಯಲ್ಲೇ ಇವುಗಳ ಮೊದಲ ಬ್ಯಾಚನ್ನು ನಿಯೋಜಿಸಲಾಗಿದೆ. ಈಗಿನಿಂದಲೇ ಇವು ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿ ಇರಲಿದ್ದು, ಆಗಸ್ಟ್ ಮಧ್ಯದಲ್ಲಿ ಅಧಿಕೃತ ಸಮಾರಂಭ ನಡೆಸಿ ವಾಯುಪಡೆಗೆ ಸೇರ್ಪಡೆ ಮಾಡಲಾಗುತ್ತದೆ. ರಷ್ಯಾದಿಂದ 23 ವರ್ಷಗಳ ಹಿಂದೆ ಸುಖೋಯ್ ಯುದ್ಧವಿಮಾನಗಳನ್ನು ಖರೀದಿಸಿದ್ದೇ ಭಾರತೀಯ ವಾಯುಪಡೆಗೆ ಕೊನೆಯ ಯುದ್ಧವಿಮಾನದ ಸೇರ್ಪಡೆಯಾಗಿತ್ತು. ಈಗ ಎರಡು ದಶಕದ ನಂತರ ರಫೇಲ್‌ಗಳ ಸೇರ್ಪಡೆಯಾಗಿದೆ.
ಒಟ್ಟು 36 ರಫೇಲ್‌ಗಳ ಡೀಲ್
ಯುಪಿಎ ಸರ್ಕಾರದ ಅವಧಿಯಲ್ಲಿ ಫ್ರಾನ್ಸ್‌ನಿಂದ 126 ರಫೇಲ್ ಯುದ್ಧವಿಮಾನ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಅದು ಏಳು ವರ್ಷ ವಿಳಂಬವಾಗಿ ಕೊನೆಗೂ ಅಂತಿಮವಾಗಿರಲಿಲ್ಲ. ನಂತರ ನರೇಂದ್ರ ಮೋದಿ ಸರ್ಕಾರ 36 ರಫೇಲ್ ಯುದ್ಧವಿಮಾನ ಖರೀದಿಗೆ 2016ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಅವುಗಳ ಪೈಕಿ ತರಬೇತಿಗೆ ಬಳಸುವ ಐದು ರಫೇಲ್ ಜೆಟ್‌ಗಳನ್ನು ಡಸಾಲ್ಟ್ ಕಂಪನಿ ಕಳೆದ ವರ್ಷವೇ ನೀಡಿದ್ದು, ಅವು ಫ್ರಾನ್ಸ್‌ನಲ್ಲೇ ಉಳಿದು ಭಾರತೀಯ ವಾಯುಪಡೆಯ ಪೈಲಟ್‌ಗಳ ತರಬೇತಿಗೆ ಬಳಕೆಯಾಗುತ್ತಿದ್ದವು. ಈಗ ಭಾರತಕ್ಕೆ ಆಗಮಿಸಿರುವ ಐದು ಜೆಟ್‌ಗಳ ಪೈಕಿ ಮೂರು ಯುದ್ಧವಿಮಾನಗಳಾಗಿದ್ದು, ಎರಡು ತರಬೇತಿ ವಿಮಾನಗಳಾಗಿವೆ. ತರಬೇತಿ ವಿಮಾನಗಳು ಎರಡು ಆಸನ ಹೊಂದಿದ್ದರೆ, ಯುದ್ಧವಿಮಾನಗಳು ಒಂದೇ ಆಸನ ಹೊಂದಿರುತ್ತವೆ. ತರಬೇತಿ ವಿಮಾನದಲ್ಲೂ ಯುದ್ಧವಿಮಾನದಲ್ಲಿರುವ ಬಹುತೇಕ ಎಲ್ಲಾ ಸೌಕರ್ಯಗಳಿರುತ್ತವೆ. ಮುಂದಿನ ವರ್ಷಾಂತ್ಯದೊಳಗೆ ಎಲ್ಲಾ 36 ರಫೇಲ್ ಜೆಟ್‌ಗಳನ್ನೂ ಭಾರತಕ್ಕೆ ಹಸ್ತಾಂತರಿಸುವುದಾಗಿ ಡಸಾಲ್ಟ್ ಹೇಳಿದೆ. ಇವುಗಳಲ್ಲಿ ಒಟ್ಟು ಆರು ವಿಮಾನಗಳು ತರಬೇತಿ ವಿಮಾನಗಳಾಗಿರಲಿವೆ.
ರಫೇಲ್ ಬಂದ ವೇಳೆ ಕೇಂದ್ರಕ್ಕೆ ರಾಹುಲ್ ಪ್ರಶ್ನೆಗಳ ಸುರಿಮಳೆ
ಯುಎಇಯಲ್ಲಿ ಒಂದು ಸ್ಟಾಪ್:
ಎರಡು ದಿನಗಳ ಅವಧಿಯ 7000 ಕಿ.ಮೀ. ಪ್ರಯಾಣದಲ್ಲಿ ರಫೇಲ್ ಜೆಟ್‌ಗಳು ಏಳು ತಾಸುಗಳ ಹಾರಾಟದ ನಂತರ ಯುಎಇಯಲ್ಲಿ ಒಮ್ಮೆ ಕೆಳಗಿಳಿದಿದ್ದವು. ಇನ್ನು, ಫ್ರಾನ್ಸ್‌ನ ಟ್ಯಾಂಕರ್ ವಿಮಾನಗಳು ಇವುಗಳಿಗೆ 30,000 ಅಡಿ ಎತ್ತರದ ಆಗಸದಲ್ಲೇ ಇಂಧನ ಮರುಪೂರಣ ಮಾಡಿದ್ದವು.
ನಿಲ್ದಾಣಕ್ಕೇ 400 ಕೋಟಿ ರು. ಖರ್ಚು:
ಅಂಬಾಲಾ ವಾಯುನೆಲೆಯಲ್ಲಿ ರಫೇಲ್ ಯುದ್ಧವಿಮಾನಗಳನ್ನು ನಿಲ್ಲಿಸಲು ಬೇಕಿರುವ ಶೆಲ್ಟರ್, ಹ್ಯಾಂಗರ್ ಹಾಗೂ ನಿರ್ವಹಣಾ ಸೌಕರ್ಯಗಳೂ ಸೇರಿದಂತೆ ವಿವಿಧ ವ್ಯವಸ್ಥೆಗಳಿಗಾಗಿ ಭಾರತೀಯ ವಾಯುಪಡೆ ಸುಮಾರು 400 ಕೋಟಿ ರು. ಖರ್ಚು ಮಾಡಿದೆ. ರಫೇಲ್ ಜೆಟ್‌ಗಳು ಅಂಬಾಲಾಕ್ಕೆ ಬಂದಿಳಿಯುವಾಗ ಈ ಪ್ರದೇಶದಲ್ಲಿ ಅಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಜನರು ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿತ್ತು. ಮೂರು ಕಿ.ಮೀ. ಸುತ್ತಳತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ರಫೇಲ್ ಜೆಟ್ ವಿಶೇಷತೆಯೇನು?
ಫ್ರಾನ್ಸ್‌ನ ರಫೇಲ್ ಯುದ್ಧವಿಮಾನಗಳು ಜಗತ್ತಿನ ವಿವಿಧ ದೇಶಗಳ ವಾಯುಪಡೆಯಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ ಹಾಗೂ ಅತ್ಯಂತ ಶಕ್ತಿಶಾಲಿ ಯುದ್ಧವಿಮಾನಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಹೊಂದಿವೆ. ಇವುಗಳನ್ನು ಕರಾರುವಾಕ್ಕು ಕ್ಷಿಪಣಿ ಹಾಗೂ ಬಾಂಬ್ ದಾಳಿ ನಡೆಸಲು ಬಳಸಲಾಗುತ್ತದೆ. ಹಲವಾರು ರೀತಿಯ ಶಸ್ತಾ್ರಸ್ತ್ರಗಳನ್ನು ಬಳಸಿ ದಾಳಿ ನಡೆಸುವ ಸಾಮರ್ಥ್ಯವನ್ನು ಇವು ಹೊಂದಿವೆ. ಜೊತೆಗೆ ಶತ್ರು ರಾಷ್ಟ್ರಗಳ ಕ್ಷಿಪಣಿಯನ್ನು ದೂರದಲ್ಲೇ ಪತ್ತೆಹಚ್ಚಿ ನಿಷ್ಕಿ್ರಯಗೊಳಿಸುವ ಮತ್ತು ಗುರಿ ತಪ್ಪಿಸುವ ಸಾಮರ್ಥ್ಯವನ್ನೂ ಹೊಂದಿವೆ. ಅತ್ಯಾಧುನಿಕ ರಾಡಾರ್ ಹಾಗೂ ವಿಚಕ್ಷಣಾ ವ್ಯವಸ್ಥೆ ಇವುಗಳಲ್ಲಿದೆ. ಗಂಟೆಗೆ 1389 ಕಿ.ಮೀ. ವೇಗದಲ್ಲಿ ಹಾರಬಲ್ಲ ಈ ಟ್ವಿನ್ ಎಂಜಿನ್ ವಿಮಾನಗಳು ಒಂದು ಸಲ ಇಂಧನ ತುಂಬಿಸಿದರೆ 3700 ಕಿ.ಮೀ. ಕ್ರಮಿಸಬಲ್ಲವು.
ಭಾರತಕ್ಕೆ ಬಂದಿಳಿದ 'ರಫೇಲ್' ಲೋಹದ ಹಕ್ಕಿಗಳು: ಸೇನಾ ಇತಿಹಾಸದಲ್ಲಿ ಹೊಸ ಶಕೆ ಆರಂಭ!
ಶತ್ರುಗಳು ಹೆದರಬೇಕು - ರಾಜನಾಥ್:
ರಫೇಲ್ ಯುದ್ಧವಿಮಾನಗಳು ಭಾರತದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಸ್ವಾಗತಿಸಿ ಟ್ವೀಟ್ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ಹಕ್ಕಿಗಳು ಅಂಬಾಲಾದಲ್ಲಿ ಸುರಕ್ಷಿತವಾಗಿ ಇಳಿದಿವೆ. ಭಾರತೀಯ ವಾಯುಪಡೆಯ ಹೊಸ ಸಾಮರ್ಥ್ಯ ನೋಡಿ ಯಾರಾದರೂ ಹೆದರುವುದಿದ್ದರೆ ನಮ್ಮ ಭೌಗೋಳಿಕ ಸಾರ್ವಭೌಮತೆಗೆ ಬೆದರಿಕೆ ಒಡ್ಡುತ್ತಿರುವವರು ಹೆದರಬೇಕು’ ಎಂದು ಹೇಳಿದರು. ಚೀನಾವನ್ನು ಗುರಿಯಾಗಿಸಿ ರಾಜನಾಥ್ ಈ ಕಠಿಣ ಸಂದೇಶ ನೀಡಿದ್ದಾರೆಂದು ಹೇಳಲಾಗಿದೆ.
‘ನಮ್ಮ ದೇಶದ ಸೇನಾ ಇತಿಹಾಸದಲ್ಲಿ ರಫೇಲ್ ಯುದ್ಧವಿಮಾನಗಳ ಆಗಮನ ಹೊಸ ಶಕೆ ಆರಂಭಿಸಿದೆ. ಬಹುಸಾಮರ್ಥ್ಯದ ಈ ಯುದ್ಧವಿಮಾನಗಳು ವಾಯುಪಡೆಯ ಸಾಮರ್ಥ್ಯವನ್ನು ಕ್ರಾಂತಿಕಾರಿ ರೀತಿಯಲ್ಲಿ ಹೆಚ್ಚಿಸಲಿವೆ’ ಎಂದೂ ರಾಜನಾಥ್ ಹೇಳಿದರು.
ಏಕೆ ತರಾತುರಿಯಲ್ಲಿ ಸೇರ್ಪಡೆ?
ಭಾರತೀಯ ವಾಯುಪಡೆ 42 ಸ್ಕಾ ್ವಡ್ರನ್ ಯುದ್ಧವಿಮಾನಗಳ ಸಾಮರ್ಥ್ಯ ಹೊಂದಿವೆ. ಒಂದು ಸ್ಕಾ ್ವಡ್ರನ್ ಅಂದರೆ 18 ಯುದ್ಧವಿಮಾನಗಳು. ಆದರೆ, ಸದ್ಯ ವಾಯುಪಡೆಯ ಬಳಿ ಕೇವಲ 31 ಸ್ಕಾ ್ವಡ್ರನ್ ಮಾತ್ರ ಇದೆ. ಚೀನಾ ಜೊತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಇದು ಆತಂಕದ ವಿಚಾರವಾಗಿತ್ತು. ಹೀಗಾಗಿ ತುರ್ತಾಗಿ ವಾಯುಪಡೆಗೆ ಬಲ ತುಂಬಲು ರಫೇಲ್‌ಗಳನ್ನು ಸೇರ್ಪಡೆ ಮಾಡಲಾಗಿದೆ.
ಅಂಬಾಲಾದಲ್ಲೇ ಏಕೆ ಇಳಿಯಿತು ರಫೇಲ್?
ಭಾರತದ ವೈರಿ ದೇಶಗಳೆನ್ನಿಸಿಕೊಂಡಿರುವ ಚೀನಾ ಹಾಗೂ ಪಾಕಿಸ್ತಾನ ಗಡಿಗೆ ಅತ್ಯಂತ ಸನಿಹದಲ್ಲಿದೆ. ಚೀನಾ ಹಾಗೂ ಪಾಕ್‌ನ ಗೂಢಚರ್ಯ ಯತ್ನಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಈ ವಾಯುನೆಲೆಗೆ ಇದೆ. ಹೀಗಾಗಿ ಅಂಬಾಲಾವನ್ನೇ ರಫೇಲ್ ವಾಯುನೆಲೆ ಆಗಿಸಿಕೊಳ್ಳಲಾಗಿದೆ. ಈ ಹಿಂದೆ ಜಾಗ್ವಾರ್, ಮಿಗ್- 21 ವಿಮಾನಗಳು ಭಾರತಕ್ಕೆ ಮೊದಲು ಬಂದಿಳಿದಿದ್ದು ಇದೇ ನೆಲೆಯಲ್ಲಿ.
ರಫೇಲ್ ವಿಮಾನ ಪೈಲಟ್ ಅರುಣ್ ವಿಜಯಪುರ ಸೈನಿಕ ಶಾಲೆ ವಿದ್ಯಾರ್ಥಿ!
9.5 ಟನ್ ಬಾಂಬ್ ಒಯ್ಯಬಲ್ಲುದು
ರಫೇಲ್ ಯುದ್ಧ ವಿಮಾನ ಸರಿಸುಮಾರು 10 ಸಾವಿರ ಟನ್ ತೂಕವಿದೆ. ಈ ವಿಮಾನ 9.5 ಟನ್ ತೂಕದ ಬಾಂಬ್, ಶಸ್ತ್ರಾಸ್ತ್ರಗಳನ್ನು ಒಯ್ಯಬಲ್ಲದು. 8000 ಕೇಜಿ ತೂಕದ ಬಾಂಬ್ ಒಯ್ಯುವ ಸುಖೋಯ್ ಸಾಮರ್ಥ್ಯಕ್ಕಿಂತ ಇದು ಅಧಿಕ.