ನವದೆಹಲಿ(ಜು.29): ತನ್ನ ಬತ್ತಳಿಕೆಗೆ ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನವಾದ ರಫೇಲ್‌ ಹೊಂದುವ ಭಾರತೀಯ ವಾಯುಪಡೆಯ ಕನಸು ಕೊನೆಗೂ ನನಸಾಗಿದೆ. ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ನಿರ್ಮಿತ ಒಂದು ಸೀಟಿನ 3 ಮತ್ತು 2 ಸೀಟಿನ 3 ವಿಮಾನಗಳು ಬುಧವಾರ ಹರ್ಯಾಣದ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದು, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ಆರ್‌ಕೆಎಸ್ ಭದೌರಿಯ ಬಹು ನಿರೀಕ್ಷಿತ ರಫೇಲ್ ವಿಮಾನಗಳನ್ನು ಬರಮಾಡಿಕೊಂಡಿದ್ದಾರೆ. 

"

ರಫೇಲ್ ಭಾರತವನ್ನು ತಲುಪಿದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಐದು ರಫೇಲ್ ಯುದ್ಧ ವಿಮಾನಗಳು ಹರಿಯಾಣಕ್ಕೆ ತಲುಪಿವೆ. ಈ ಮೂಲಕ ಭಾರತೀಯ ಸೇನೆಯ ಇತಿಹಾಸದಲ್ಲೇ ಹೊಸ ಶಕೆ ಆರಂಭವಾಗಲಿದೆ ಎಂದು ರಾಜನಾಥ ಸಿಂಗ್ ಟ್ವೀಟ್ ಮಾಡಿದ್ದಾರೆ.

4 ವರ್ಷಗಳ ಹಿಂದೆ ಭಾರತ ಸರ್ಕಾರ 59000 ಕೋಟಿ ರು. ವೆಚ್ಚದಲ್ಲಿ 36 ರಫೇಲ್‌ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ ಮೊದಲ 5 ವಿಮಾನ ಇದೀಗ ಹಸ್ತಾಂತರವಾಗಿದೆ. ಉಳಿದ ಎಲ್ಲಾ ವಿಮಾನಗಳು 2021ರ ಅಂತ್ಯದೊಳಗೆ ಭಾರತಕ್ಕೆ ಬರಲಿವೆ.

"


ರಫೇಲ್‌ ವಿಶೇಷಗಳು

- ಜಗತ್ತಿನ ಅತ್ಯಾಧುನಿಕ ಯುದ್ಧವಿಮಾನಗಳ ಪೈಕಿ ಫ್ರಾನ್ಸ್‌ನ ರಫೇಲ್‌ ಕೂಡ ಒಂದಾಗಿದ್ದು, ಸಾಕಷ್ಟುವಿಧದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ.

- ಯುರೋಪ್‌ನಲ್ಲಿ ಏರ್‌-ಟು-ಏರ್‌ ಮತ್ತು ಸ್ಕಾಲ್ಪ್‌ ಕ್ರೂಸ್‌ ಮಿಸೈಲ್‌ಗಳನ್ನು ಈ ವಿಮಾನಗಳಿಗೆ ಅಳವಡಿಸಿ ಬಳಕೆ ಮಾಡಲಾಗುತ್ತದೆ.

- ಈಗ ಭಾರತಕ್ಕೆ ಬರುತ್ತಿರುವ 5 ರಫೇಲ್‌ಗಳ ಪೈಕಿ ಮೂರು ಸಿಂಗಲ್‌ ಸೀಟರ್‌ ಮತ್ತು ಎರಡು ಡಬಲ್‌ ಸೀಟರ್‌ ವಿಮಾನಗಳಾಗಿವೆ.

- ಭಾರತಕ್ಕಾಗಿ ಡಸಾಲ್ಟ್‌ ತಯಾರಿಸಿರುವ ರಫೇಲ್‌ನಲ್ಲಿ ಸಾಕಷ್ಟುಬದಲಾವಣೆ ಮಾಡಲಾಗಿದ್ದು, ಇಸ್ರೇಲಿ ಹೆಲ್ಮೆಟ್‌ ಮೌಂಟೆಡ್‌ ಡಿಸ್‌ಪ್ಲೇ, ರಾಡಾರ್‌ ವಾರ್ನಿಂಗ್‌, ಲೋ ಬ್ಯಾಂಡ್‌ ಜಾಮರ್‌, 10 ತಾಸುಗಳ ವಿಮಾನ ಹಾರಾಟ ಡೇಟಾ ಮುದ್ರಣ, ಇನ್‌ಫ್ರಾರೆಡ್‌ ಸರ್ಚಿಂಗ್‌ ಮತ್ತು ಟ್ರಾಕಿಂಗ್‌ ಸಿಸ್ಟಮ್‌ಗಳಿವೆ.

- ಹರ್ಯಾಣದ ಅಂಬಾಲಾದ ಜೊತೆಗೆ ಪಶ್ಚಿಮ ಬಂಗಾಳದ ಹಾಸಿಮಾರಾದಲ್ಲೂ ರಫೇಲ್‌ಗಳನ್ನು ನಿಯೋಜಿಸಲಾಗುತ್ತದೆ. ಈ ವಿಮಾನಗಳನ್ನು ನಿಲ್ಲಿಸುವ ಶೆಲ್ಟರ್‌, ಹ್ಯಾಂಗರ್‌ ಮತ್ತು ನಿರ್ವಹಣೆ ಸೌಕರ್ಯಗಳಿಗಾಗಿ ಭಾರತೀಯ ವಾಯುಪಡೆ ಸುಮಾರು 400 ಕೋಟಿ ರು. ಖರ್ಚು ಮಾಡಿದೆ.

- ಭಾರತ ಖರೀದಿಸಿರುವ 36 ರಫೇಲ್‌ಗಳ ಪೈಕಿ 30 ವಿಮಾನಗಳು ಫೈಟರ್‌ ಜೆಟ್‌ಗಳಾಗಿದ್ದು, 6 ತರಬೇತಿ ವಿಮಾನಗಳಾಗಿವೆ. ತರಬೇತಿ ವಿಮಾನಗಳು 2 ಸೀಟರ್‌ ಮತ್ತು ಯುದ್ಧ ವಿಮಾನಗಳು 1 ಸೀಟರ್‌ ಆಗಿರುತ್ತವೆ.