* ದೇಶದಲ್ಲಿ ಕೊರೋನಾ ಮೂರನೇ ಅಲೆ ದಾಳಿ ಇಡುವ ಆತಂಕ* ಕೊರೋನಾ ಮೂರನೇ ಅಲೆ ಆತಂಕದ ಮಧ್ಯೆ ಗುಡ್‌ ನ್ಯೂಸ್‌ ಕೊಟ್ಟ ವಿಜ್ಞಾನಿಗಳು* ಮೂರನೇ ಅಲೆ ದಾಳಿ ಇಟ್ಟರೂ ಎರಡನೇ ಅಲೆಯಷ್ಟು ಗಂಭೀರವಾಗಿರುವುದಿಲ್ಲ 

ನವದೆಹಲಿ(ಜೂ.26): ನವದೆಹಲಿ: ದೇಶದಲ್ಲೀಗ ಕೊರೋನಾ 2ನೇ ಅಲೆ ಇಳಿಕೆಯ ಹಾದಿಯಲ್ಲಿದ್ದು, 3-4 ತಿಂಗಳ ಅಂತರದಲ್ಲೇ 3ನೇ ಅಲೆ ಅಪ್ಪಳಿಸುವ ಭೀತಿ ಎದುರಾಗಿದೆ. ಆದರೆ, ಸಮಾಧಾನಕರ ಸಂಗತಿಯೆಂದರೆ 2ನೇ ಅಲೆಗೆ ಹೋಲಿಸಿದರೆ 3ನೇ ಅಲೆ ಹೆಚ್ಚು ವಿನಾಶಕಾರಿ ಆಗುವ ಸಾಧ್ಯತೆ ಇಲ್ಲ. ಜನರ ಸಾವು ಮತ್ತು ಆಸ್ಪತ್ರೆಗೆ ದಾಖಲಾಗುವಿಕೆ ಕಡಿಮೆ ಪ್ರಮಾಣದಲ್ಲಿರುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮತ್ತು ಲಂಡನ್‌ನ ಇಂಪೀರಿಯಲ್‌ ಕಾಲೇಜ್‌ ನಡೆಸಿದ ಮಾದರಿ ಅಧ್ಯಯನವೊಂದು ತಿಳಿಸಿದೆ.

ICMR ನೇಮಕಾತಿಗೆ ಅರ್ಹರಿಂದ ಅರ್ಜಿ ಅಹ್ವಾನ; ಆರಂಭಿಕ ವೇತನ 64 ಸಾವಿರ ರೂ!

ಪ್ರಸ್ತುತ ಕೊರೋನಾ 2ನೇ ಅಲೆಯನ್ನು ತಗ್ಗಿಸಲು ಮತ್ತು ಮತ್ತೊಂದು ಅಲೆಯನ್ನು ಹತೋಟಿಗೆ ತರುವಲ್ಲಿ ಲಸಿಕೆ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಎಂಬುದಾಗಿಯೂ ಅಧ್ಯಯನ ವರದಿಯಲ್ಲಿ ತಿಳಿಸಿದೆ.

ಭಾರತದಲ್ಲಿ ಜನವರಿ ಕೊನೆಯಲ್ಲಿ ಆರಂಭವಾದ ಮೊದಲ ಅಲೆ ಸೆಪ್ಟೆಂಬರ್‌ ಮಧ್ಯ ಅವಧಿಯಲ್ಲಿ ತುತ್ತತುದಿ ತಲುಪಿ ಇಳಿಕೆ ಆಗಿತ್ತು. ಬಳಿಕ ಅಲ್ಫಾ ಮತ್ತು ಡೆಲ್ಟಾಪ್ರಭೇದಗಳು 2021ರ ಫೆಬ್ರವರಿ ಮಧ್ಯ ಭಾಗದಲ್ಲಿ ಕೊರೋನಾ 2ನೇ ಅಲೆಗೆ ಕಾರಣವಾಗಿದ್ದವು. ವಿವಿಧ ಕಾರಣದಿಂದಾಗಿ ಬ್ರಿಟನ್‌ ಮತ್ತು ಅಮೆರಿಕ ಮುಂತಾದ ದೇಶಗಳಲ್ಲಿ ಕೊರೋನಾ 3ನೇ ಅಲೆ ಕಾಣಿಸಿಕೊಂಡಿದೆ. ಒಂದು ವೇಳೆ ಭಾರತದಲ್ಲಿಯೂ 3ನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ, 2ನೇ ಅಲೆಯಷ್ಟುಭೀಕರ ಅನಾಹುತವನ್ನು ಸೃಷ್ಟಿಸುವ ಸಾಧ್ಯತೆ ಕಡಿಮೆ. ಏಕೆಂದರೆ ದೇಶದಲ್ಲಿ 2ನೇ ಅಲೆ ವ್ಯಾಪಕವಾಗಿ ಹಬ್ಬಿರುವ ಕಾರಣಕ್ಕೆ ಜನರಲ್ಲಿ ಈಗಾಗಲೇ ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿ ಆಗಿದೆ ಎಂದು ಅಧ್ಯಯನ ವಿವರಿಸಿದೆ.

ಅಧ್ಯಯನದ ತರ್ಕಗಳು:

ಒಂದು ವೇಳೆ ಕೊರೋನಾ 3ನೇ ಅಲೆ ವಿನಾಶಕಾರಿ ಆಗಬೇಕಾದರೆ, ಈ ಮುನ್ನ ಸೋಂಕಿಗೆ ತುತ್ತಾದವರಲ್ಲಿ ಶೇ.30ರಷ್ಟುಜನ ತಮ್ಮ ರೋಗನಿರೋಧಕ ಶಕ್ತಿ ಸಂಪೂರ್ಣವಾಗಿ ಕಳೆದುಕೊಳ್ಳಬೇಕು ಅಥವಾ ರೂಪಾಂತರಿ ವೈರಸ್‌ ವೃದ್ಧಿಸುವ ದರ 4.5ಕ್ಕಿಂತ ಹೆಚ್ಚಿರಬೇಕು. ಅಂದರೆ ಪ್ರತಿ ಸೋಂಕಿತ ವ್ಯಕ್ತಿ 4ರಿಂದ 5 ಜನರಿಗೆ ಸೋಂಕು ಹರಡಬೇಕು. ಕೊರೋನಾ 2ನೇ ಅಲೆ ಮುಗಿಯುತ್ತಿದ್ದಂತೆ ಈ ವಿದ್ಯಮಾನ ಸಂಭವಿಸಿದರೆ ಮಾತ್ರ ಇದು ಸಾಧ್ಯ. ಆದರೆ, ಈಗಿನ ದತ್ತಾಂಶಗಳು ಈಗಿನ ರೂಪಾಂತರಿ ಕೊರೋನಾ ಪ್ರಭೇದವು ಅಷ್ಟುತೀವ್ರವಾಗಿ ಹರಡುತ್ತದೆ ಎಂಬುದನ್ನು ಬೆಂಬಲಿಸುತ್ತಿಲ್ಲ. ಹೀಗಾಗಿ 3ನೇ ಅಲೆಯ ವೇಳೆ ಜನರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಸಾವಿನ ಪ್ರಮಾಣ ಅಧಿಕವಾಗಿರಲಿದೆ ಎಂದು ಹೇಳಲಾಗದು ಎಂದು ವರದಿ ತಿಳಿಸಿದೆ.

5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್, ಸ್ಟೀರಾಯ್ಡ್ಸ್ ಬೇಡ; ಕೋವಿಡ್ ಮಾರ್ಗಸೂಚಿ ಪ್ರಕಟಿಸಿದ DGH!

3ನೇ ಅಲೆಗೆ ಲಸಿಕೆಯೇ ಬ್ರಹ್ಮಾಸ್ತ್ರ:

ಅಲ್ಲದೇ ದೇಶದಲ್ಲಿ ಲಸಿಕೆ ಅಭಿಯಾನ ವ್ಯಾಪಕವಾಗಿ ನಡೆಯುತ್ತಿರುವುದರಿಂದ 3ನೇ ಅಲೆ ಏಳುವಿಕೆಯನ್ನು ತಗ್ಗಿಸಲಿದೆ. ಜೊತೆಗೆ ಮುಂದಿನ ಮೂರು ತಿಂಗಳಿನಲ್ಲಿ ದೇಶದ ಶೇ.40ಕ್ಕೂ ಹೆಚ್ಚು ಜನಸಂಖ್ಯೆಗೆ 2 ಡೋಸ್‌ ಲಸಿಕೆ ನೀಡುವ ಅಗತ್ಯವಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ಇದೇ ವೇಳೆ ಜನಸಂದಣಿ ಸೇರುವಿಕೆ, ಮಾಸ್ಕ್‌, ಸಾಮಾಜಿಕ ಅಂತರ ಪಾಲನೆ ಕೊರೋನಾ ಹರಡುವಿಕೆಯ ದರ ಮತ್ತು ಸಮುದಾಯ ಮಟ್ಟದಲ್ಲಿ ಕೊರೋನಾ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಲಾಕ್‌ಡೌನ್‌ ಸಡಿಲಿಕೆ ವ್ಯವಸ್ಥೆಗಳು ಕೂಡ 3ನೇ ಅಲೆಯ ಮೇಲೆ ಪರಿಣಾಮ ಬೀರಲಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

3ನೇ ಅಲೆ ಭೀಕರ ಅಲ್ಲ ಏಕೆ?

- 2ನೇ ಅಲೆಯಿಂದ ರೋಗನಿರೋಧಕ ಶಕ್ತಿ ವೃದ್ಧಿ

- ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಲಾಗುತ್ತಿದೆ

- 30% ಜನರ ರೋಗನಿರೋಧಕತೆ ಕುಗ್ಗಿದರೆ ಮಾತ್ರ 3ನೇ ಅಲೆ ತೀವ್ರ

- ಈಗಿನ ಅಂಕಿಅಂಶ ನೋಡಿದರೆ ಈ ಸಾಧ್ಯತೆ ಕಡಿಮೆ