Maharastra Corona Alert: 'ಮಹಾ'3ನೇ ಅಲೆ: 80 ಲಕ್ಷ ಕೇಸು, 80,000 ಸಾವು ಸಾಧ್ಯತೆ
- ಮಹಾರಾಷ್ಟ್ರದಲ್ಲಿ ಕೋವಿಡ್‌ನ ಮೂರನೇ ಅಲೆ ಈಗಾಗಲೇ ಆರಂಭ
- ರಾಜ್ಯದಾದ್ಯಂತ ಒಟ್ಟು 80 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗುವ ಹಾಗೂ ಸುಮಾರು 80,000 ಸಾವುಗಳು ಸಂಭವಿಸುವ ಸಾಧ್ಯತೆ
ಮುಂಬೈ(ಜ.02): ಮಹಾರಾಷ್ಟ್ರದಲ್ಲಿ(Maharastra) ಕೋವಿಡ್‌ನ ಮೂರನೇ ಅಲೆ ಈಗಾಗಲೇ ಆರಂಭವಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಒಟ್ಟು 80 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗುವ ಹಾಗೂ ಸುಮಾರು 80,000 ಸಾವುಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಸರ್ಕಾರ ಎಚ್ಚರಿಕೆ ನೀಡಿದೆ. ಒಮಿಕ್ರೋನ್(Omicron) ತೀವ್ರವಾಗಿ ಹರಡುತ್ತಿರುವ ಕಾರಣ ಮೂರನೇ ಅಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಅಗಾಧವಾಗಿರಲಿದೆ. ಒಮಿಕ್ರೋನ್ ರೂಪಾಂತರಿಯು ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಮಾರಣಾಂತಿಕವಲ್ಲ ಎಂಬ ನಿರೂಪಣೆಗಳನ್ನು ನಂಬಿ ಯಾವುದೇ ರೀತಿಯಲ್ಲಿ ಉದಾಸೀನ ಮಾಡುವಂತಿಲ್ಲ ಎಂದು ಹೆಚ್ಚುವರಿ ಮುಖ್ಯ ಆರೋಗ್ಯ ಕಾರ್ಯದರ್ಶಿ ಪ್ರದೀಪ ವ್ಯಾಸ್ ಹೇಳಿದ್ದಾರೆ. ಅಲ್ಲದೇ ಮೂರನೇ ಅಲೆಯು ರೋಗಪೀಡಿತರಿಗೆ ಹಾಗೂ ಲಸಿಕೆಯನ್ನು ಪಡೆಯದೇ ಇರುವವರಿಗೆ ಮಾರಣಾಂತಿಕವಾಗುವ ಸಾಧ್ಯತೆಯಿದೆ. ಹೀಗಾಗಿ ಪ್ರತಿಯೊಬ್ಬರೂ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
2ನೇ ಅಲೆಯಲ್ಲಿ ಅತಿ ಹೆಚ್ಚು ಅನಾಹುತ ಸಂಭವಿಸಿದ್ದ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಹೊಸ ಕೋವಿಡ್ ಕೇಸುಗಳಲ್ಲಿ ಭಾರೀ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಶನಿವಾರ 9170 ಪ್ರಕರಣ ಪತ್ತೆಯಾಗಿವೆ. ಶುಕ್ರವಾರಕ್ಕೆ ಹೋಲಿಸಿಕೊಂಡರೆ ಕೇಸಲ್ಲಿ ಶೇ.13ರಷ್ಟುಹೆಚ್ಚಾಗಿದೆ. ಜೊತೆಗೆ ಎರಡೇ ದಿನದಲ್ಲಿ ರಾಜ್ಯದಲ್ಲಿ ಹೊಸ ಕೇಸುಗಳು ದ್ವಿಗುಣವಾಗಿದೆ. ಗುರುವರ ರಾಜ್ಯದಲ್ಲಿ 5368 ಕೇಸು ದಾಖಲಾಗಿತ್ತು. ಇನ್ನು ರಾಜ್ಯದ ಒಟ್ಟಾರೆ ಸೋಂಕಿತರ ಪೈಕಿ 6347 ಕೋವಿಡ್ ಕೇಸ್‌ಗಳು ಮುಂಬೈ ನಗರವೊಂದರಲ್ಲೇ ಪತ್ತೆಯಾಗಿವೆ.
ಆರು ತಿಂಗಳ ನಂತರ ಗರಿಷ್ಠ ಕೇಸ್: 656 ಮಂದಿಗೆ ಸೋಂಕು, ಐದು ಸಾವು!
ಇನ್ನು ದೆಹಲಿಯಲ್ಲಿ ಶನಿವಾರ 2716 ಪ್ರಕರಣ ಪತ್ತೆಯಾಗಿವೆ. ಶುಕ್ರವಾರಕ್ಕೆ ಹೋಲಿಸಿಕೊಂಡರೆ ಸೋಂಕಿನ ಪ್ರಮಾಣ ಶೇ.51ರಷ್ಟುಹೆಚ್ಚಳವಾಗಿದೆ. ಶುಕ್ರವಾರ ಶೇ.2.4ರಷ್ಟಿದ್ದ ಕೋವಿಡ್ ಪಾಸಿಟಿವಿಟಿ ದರ ಶನಿವಾರ 3.64ಕ್ಕೆ ಜಿಗಿದಿದೆ. 7 ತಿಂಗಳ ನಂತರ ಇದೇ ಮೊದಲ ಸಲಹ ದಿಲ್ಲಿಯಲ್ಲಿ ದಾಖಲಾದ ಸಾರ್ವಕಾಲಿಕ ದೈನಂದಿನ ಗರಿಷ್ಠ ಸೋಂಕು ಇದು.
ದೇಶದಲ್ಲಿ ಕೊರೋನಾ ಏರಿಕೆ:
ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 22,775 ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇದು 86 ದಿನಗಳ ಗರಿಷ್ಠ ದೈನಂದಿನ ಪ್ರಕರಣಗಳ ಸಂಖ್ಯೆಯಾಗಿದೆ. ಶುಕ್ರವಾರಕ್ಕಿಂತ 6011 ಪ್ರಕರಣಗಳು ಹೆಚ್ಚು ದಾಖಲಾಗಿವೆ. ಇದೇ ಅವಧಿಯಲ್ಲಿ 406 ಸೋಂಕಿತರು ಸಾವಿಗೀಡಾಗಿದ್ದು, ಒಟ್ಟು ಪ್ರಕರಣ 3.48 ಕೋಟಿಗೆ ಮತ್ತು ಒಟ್ಟು ಸಾವು 4.81 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ವೇಳೆ ಸಕ್ರಿಯ ಪ್ರಕರಣ 1.04 ಲಕ್ಷ ದಾಟಿದೆ. ಇದರೊಂದಿಗೆ ತಿಂಗಳ ನಂತರ ಸಕ್ರಿಯ ಕೇಸು ಲಕ್ಷದ ಗಡಿ ದಾಟಿದಂತಾಗಿದೆ. ದೈನಂದಿನ ಪಾಸಿಟಿವಿಟಿ ದರವೂ 2.05ರಷ್ಟುದಾಖಲಾಗಿದೆ. ಅಲ್ಲದೇ ಕೇವಲ 2 ದಿನದಲ್ಲಿ ದೈನಂದಿನ ಪ್ರಕರಣಗಳ ಪ್ರಮಾಣ ಎರಡು ಪಟ್ಟಿಗಿಂತ ಹೆಚ್ಚಾಗಿದೆ. ಗುರುವಾರ 9195 ಕೇಸು ದಾಖಲಾಗಿದ್ದರೆ, ಶನಿವಾರ ಅದು 3 ಪಟ್ಟು ಹೆಚ್ಚಾಗಿದೆ.