Covid 19 in Bengaluru: ಆರು ತಿಂಗಳ ನಂತರ ಗರಿಷ್ಠ ಕೇಸ್: 656 ಮಂದಿಗೆ ಸೋಂಕು, ಐದು ಸಾವು!

*656 ಮಂದಿಗೆ ಸೋಂಕು: ಐದು ಮಂದಿ ಸೋಂಕಿನಿಂದ ಸಾವು
*10 ವಾರ್ಡಲ್ಲಿ ನಿತ್ಯ 5+ ಕೇಸ್‌ ಪತ್ತೆ: ಪಾಸಿಟಿವಿಟಿ ದರವೂ ಏರಿಕೆ
*9 ವಿದೇಶಿ ಪ್ರಯಾಣಿಕರಲ್ಲಿ ಸೋಂಕು: ಒನಿಕ್ರೋನ್ ಸಂಖ್ಯೆ 96ಕ್ಕೆ ಏರಿಕೆ‌

656 Covid 19 Positive Cases and 5 Deaths in Bengaluru on Friday Highest in 6 months mnj

ಬೆಂಗಳೂರು (ಜ. 1): ನಗರದಲ್ಲಿ ಆರು ತಿಂಗಳ ನಂತರ ಗರಿಷ್ಠ ಸೋಂಕಿತ ಪ್ರಕರಣಗಳು (Covid 19 Cases) ಪತ್ತೆಯಾಗಿದ್ದು, ಶುಕ್ರವಾರ 353 ಪುರುಷರು, 303 ಮಹಿಳೆಯರು ಸೇರಿದಂತೆ 656 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಒಂದೇ ದಿನ ಐವರು ಮೃತರಾಗಿದ್ದು, 211 ಮಂದಿ ಚೇತರಿಸಿಕೊಂಡಿದ್ದಾರೆ. ಜುಲೈ 1ರಂದು 676 ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿತ್ತು. ಜು.7ರಂದು 611 ಪ್ರಕರಣ ಪತ್ತೆಯಾಗಿದ್ದು, ಈ ಆರು ತಿಂಗಳಲ್ಲಿನ ದಾಖಲಾಗಿದ್ದ ಅತ್ಯಧಿಕ ಸೋಂಕಿತ ಪ್ರಕರಣವಾಗಿದ್ದವು. ಇದಾದ ನಂತರ ಇಳಿಕೆಯಾಗಿದ್ದ ಪ್ರಕರಣಗಳ ಸಂಖ್ಯೆ ಶುಕ್ರವಾರ ಏರಿಕೆಯಾಗಿದ್ದು, ಪಾಸಿಟಿವಿಟಿ ದರ ಶೇ.74 ದಾಖಲಾಗಿದೆ. ಈವರೆಗೆ 0.56ರಷ್ಟಿತ್ತು.

ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,63,618ಕ್ಕೆ ಏರಿಕೆಯಾಗಿದೆ. 211 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,39,931ಕ್ಕೆ ಏರಿಕೆಯಾಗಿದೆ. ಐವರ ಸಾವಿನಿಂದ ರಾಜ್ಯದಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 16,400ಕ್ಕೆ ಹೆಚ್ಚಳವಾಗಿದೆ. ನಗರದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 7,286ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.

ಕಳೆದ ಹತ್ತು ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ 5ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಳ್ಳಂದೂರು ವಾರ್ಡ್‌ನಲ್ಲಿ 18, ದೊಡ್ಡನೆಕ್ಕುಂದಿ 8, ಅರಕೆರೆ, ಎಚ್‌ಎಸ್‌ಆರ್‌ ಲೇಔಟ್‌ ತಲಾ 7, ಹಗದೂರು, ವರ್ತೂರು ವಾರ್ಡ್‌ಗಳಲ್ಲಿ ತಲಾ 6 ಮತ್ತು ಶಾಂತಲ ನಗರ, ಕೋರಮಂಗಲ, ಬೇಗೂರು ಮತ್ತು ಬ್ಯಾಟರಾಯನಪುರ ವಾರ್ಡ್‌ನಲ್ಲಿ ತಲಾ 5 ಪ್ರಕರಣಗಳು ಪತ್ತೆಯಾಗುತ್ತಿವೆ.

ಮೈಕ್ರೋ ಕಂಟೈನ್ಮೆಂಟ್‌ 108ಕ್ಕೆ ಏರಿಕೆ

ಪಾಲಿಕೆ ವ್ಯಾಪ್ತಿಯಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ (Micro Containment) ಸಂಖ್ಯೆ 108ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿ 32, ಮಹದೇವಪುರ 24, ದಕ್ಷಿಣ 17, ಪೂರ್ವ 12, ಯಲಹಂಕ 11, ಪಶ್ಚಿಮ 8, ದಾಸರಹಳ್ಳಿ 3, ಆರ್‌ಆರ್‌ ನಗರ 1 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

9 ವಿದೇಶಿ ಪ್ರಯಾಣಿಕರಲ್ಲಿ ಸೋಂಕು

ಒಮಿಕ್ರೋನ್‌ ಸೋಂಕು (Omicron Variant) ಹೆಚ್ಚಿರುವ ದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIAB) ಶುಕ್ರವಾರ ಬಂದಿಳಿದ ಒಂಬತ್ತು ಪ್ರಯಾಣಿಕರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ವಿದೇಶಗಳಿಂದ ರಾಜ್ಯಕ್ಕೆ ಆಗಮಿಸಿದವರ ಪೈಕಿ ಸೋಂಕು ದೃಢಪಟ್ಟವರ ಸಂಖ್ಯೆ 96ಕ್ಕೆ ಏರಿಕೆಯಾಗಿದೆ.

ಬುಧವಾರ ವಿದೇಶದಿಂದ ಬಂದ 20 ಪ್ರಯಾಣಿಕರಿಗೆ, ಗುರುವಾರ ಒಂಬತ್ತು ಪ್ರಯಾಣಿಕರಿಗೆ ಸೋಂಕು ದೃಢಪಟ್ಟಿತ್ತು. ಶುಕ್ರವಾರ ಬೆಳಿಗ್ಗೆ ಇಂಗ್ಲೆಂಡ್‌ನಿಂದ ಬಂದ ಐದು ಪ್ರಯಾಣಿಕರು, ಅಮೆರಿಕದಿಂದ ಬಂದ ಇಬ್ಬರು, ಘಾನ ಮತ್ತು ಸ್ಕಾಟ್‌ಲೆಂಡ್‌ನಿಂದ ಬಂದ ತಲಾ ಒಬ್ಬರು ಪ್ರಯಾಣಿಕರನ್ನು ಸೇರಿ ಒಂಬತ್ತು ಪ್ರಯಾಣಿಕರಿಗೆ ಕೊರೋನಾ ತಗಲಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ.

ಸೋಂಕಿತರ ಗಂಟಲು ದ್ರವ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಿ, ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಒಂಬತ್ತು ಮಂದಿಗೂ ಸೋಂಕಿನ ಲಕ್ಷಣಗಳಿರಲಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

100ರ ಗಡಿಯತ್ತ ಒಮಿಕ್ರೋನ್‌

ಡಿ.1ರಿಂದೀಚೆಗೆ ಒಮಿಕ್ರೋನ್‌ ಹೆಚ್ಚಿರುವ ಹೈರಿಸ್ಕ್‌ ದೇಶಗಳಿಂದ ಬಂದವರ ಸೋಂಕು ಪರೀಕ್ಷೆ ನಡೆಸಲಾಗುತ್ತಿದ್ದು, ಒಟ್ಟಾರೆ ಈವರೆಗೂ 96 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲೂ ಕಳೆದ ಮೂರು ದಿನಗಳಲ್ಲಿಯೇ 38 ಪ್ರಯಾಣಿಕರಿಗೆ ಸೋಂಕು ದೃಢಪಟ್ಟಿದ್ದು, ಒಮಿಕ್ರೋನ್‌ ಆತಂಕವನ್ನು ಮತ್ತಷ್ಟುಹೆಚ್ಚಿಸಿದೆ.

ಇದನ್ನೂ ಓದಿ:

1) Covid 19 Variant: ಮಹಾರಾಷ್ಟ್ರದಲ್ಲಿ ಒಮಿಕ್ರೋನ್‌ ಸೋಂಕಿತ ಸಾವು: ದೇಶದಲ್ಲೇ ಮೊದಲು!

2) Omicron slowly replacing Delta: ಡೆಲ್ಟಾ ಮೀರಿಸ್ತಿದೆ ಒಮಿಕ್ರೋನ್‌

Latest Videos
Follow Us:
Download App:
  • android
  • ios