ನಾಳೆ ಮತ್ತೊಮ್ಮೆ ಲಸಿಕೆ ತಾಲೀಮು| ದೇಶದ ಅತಿದೊಡ್ಡ ರಿಹರ್ಸಲ್| 700ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಣಕು ಕಾರಾರಯಚರಣೆ| ಇಂದು ರಾಜ್ಯಗಳ ಆರೋಗ್ಯ ಸಚಿವರ ಜತೆ ಕೇಂದ್ರ ಸಭೆ| ಲಸಿಕೆ ಅಭಿಯಾನಕ್ಕೆ ಅಂತಿಮ ಹಂತದಲ್ಲಿ ತಯಾರಿ
ನವದೆಹಲಿ(ಜ.07): ಕೊರೋನಾ ಲಸಿಕೆಯ ಅಧಿಕೃತ ನೀಡಿಕೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ದೇಶದ 700ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶುಕ್ರವಾರ ಮತ್ತೊಂದು ಸುತ್ತಿನ ಬೃಹತ್ ಕೊರೋನಾ ಲಸಿಕೆಯ ಡ್ರೈ ರನ್ (ತಾಲೀಮು) ನಡೆಸಲು ನಿರ್ಧರಿಸಿದೆ. ಇದು ದೇಶದ ಅತಿ ದೊಡ್ಡ ಲಸಿಕೆ ತಾಲೀಮು ಎನ್ನಿಸಿಕೊಳ್ಳಲಿದೆ.
ಇದೇ ವೇಳೆ, ಕೊರೋನಾ ಲಸಿಕೆ ಹಂಚಿಕೆಗೆ ಸಂಬಂಧಿಸಿದಂತೆ ಕಾರ್ಯತಂತ್ರ ರೂಪಿಸಲು ಕೇಂದ್ರ ಆರೋಗ್ಯ ಸಚಿವ ಡಾ
ಹರ್ಷವರ್ಧನ್ ಅವರು ಗುರುವಾರ ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಸಭೆ ಕರೆದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಜ.14ರ ಸಂಕ್ರಾತಿ ವೇಳೆಗೆ ಮೊದಲ ಲಸಿಕೆ ನೀಡಿಕೆಯಾಗಬಹುದು ಎಂಬ ಸುಳಿವಿಗೆ ಪೂರಕವಾಗಿಯೇ ಇದೆ.
ಜನವರಿ 2ರಂದು ದೇಶದ ಆಯ್ದ 125 ಜಿಲ್ಲೆಗಳಲ್ಲಿ ರಿಹರ್ಸಲ್ ನಡೆಸಲಾಗಿತ್ತು. ಆಗ ಲಸಿಕೆಗೆ ಅಂತಿಮ ಅನುಮೋದನೆ ಸಿಕ್ಕಿರಲಿಲ್ಲ. ಜನವರಿ 3ರಂದು ಅನುಮೋದನೆ ಲಭಿಸಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ದೇಶವ್ಯಾಪಿ ಲಸಿಕೆ ರಿಹರ್ಸಲ್‌ಗೆ ನಿರ್ಧರಿಸಲಾಗಿದೆ. ಬುಧವಾರ ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ‘ದೇಶದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶುಕ್ರವಾರ ಲಸಿಕೆ ನೀಡಿಕೆಯ ಪೂರ್ವತಾಲೀಮು ನಡೆಸಲಾಗುತ್ತದೆ. ಅಂದು ಫಲಾನುಭವಿಯ ನೋಂದಣಿ, ಲಸಿಕೆ ಹಂಚಿಕೆಯ ವಿಧಾನ, ಲಸಿಕಾ ಕೇಂದ್ರದಲ್ಲಿ ಕೈಗೊಳ್ಳಬೇಕಾದ ಸಿದ್ಧತೆ- ಇತ್ಯಾದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ’ ಎಂದಿದೆ.
‘ಉತ್ತರ ಪ್ರದೇಶದ ಎಲ್ಲ ಜಿಲ್ಲೆಗಳಲ್ಲಿ ಜ.5ರಂದು ರಿಹರ್ಸಲ್ ನಡೆದಿದೆ. ಹರ್ಯಾಣದ ಎಲ್ಲ ಜಿಲ್ಲೆಗಳಲ್ಲಿ ಜ.7ರಂದು ನಡೆಯಲಿದೆ. ಹೀಗಾಗಿ ಈ 2 ರಾಜ್ಯಗಳನ್ನು ಹೊರತುಪಡಿಸಿ ದೇಶದ ಮಿಕ್ಕ 700ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶುಕ್ರವಾರ ಬೃಹತ್ ಲಸಿಕೆ ರಿಹರ್ಸಲ್ ನಡೆಯಲಿದೆ. ಅಂದು ಮೊದಲ ತಾಲೀಮಿನ ರೀತಿಯಲ್ಲೇ ಜಿಲ್ಲಾ ಆಸ್ಪತ್ರೆ, ಖಾಸಗಿ ಆಸ್ಪತ್ರೆ ಹಾಗೂ ಗ್ರಾಮೀಣ ಆಸ್ಪತ್ರೆ- ಈ ರೀತಿಯ 3 ಸ್ತರಗಳಲ್ಲಿ ತಾಲೀಮು ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದೆ.
ಕೋವಿಡ್ ನಿಗ್ರಹಕ್ಕೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳಿಗೆ ಅನುಮತಿ ದೊರಕಿದ್ದು, ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ತಾಲೀಮು ಏಕೆ?
ತಾಲೀಮಿನ ವೇಳೆ ಯಾವುದಾದರೂ ಸಮಸ್ಯೆ ಕಂಡುಬಂದರೆ ಅದನ್ನು ಸರಿಪಡಿಸಿ, ಲಸಿಕೆ ನೀಡಿಕೆಯ ನೈಜ ಪ್ರಕ್ರಿಯೆಯಲ್ಲಿ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವ ಉದ್ದೇಶ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 7, 2021, 7:28 AM IST