ವ್ಯಾಕ್ಸಿನ್ ಬಂದಿಲ್ಲ ಎಂದ ರಾಹುಲ್: ಅಜ್ಞಾನಕ್ಕೆ ವ್ಯಾಕ್ಸಿನ್ ಇಲ್ಲ ಎಂದ ಆರೋಗ್ಯ ಸಚಿವ!
* ದೇಶದಲ್ಲಿ ಕೊರೋನಾತಂಕ ನಡುವೆ ಮುಂದುವರೆದ ಲಸಿಕಾ ಅಭಿಯಾನ
* ಜುಲೈ ಬಂತು, ಲಸಿಕೆ ಬಂದಿಲ್ಲ ಎಂದು ಸರ್ಕಾರದ ಕಾಲೆಳೆದ ರಾಹುಲ್ ಗಾಂಧಿ
* ಅಹಂಕಾರ ಹಾಗೂ ಅಜ್ಞಾನವೆಂಬ ವೈರಸ್‌ಗೆ ನಮ್ಮಲ್ಲಿ ಲಸಿಕೆ ಇಲ್ಲ ಎಂದ ಆರೋಗ್ಯ ಸಚಿವರು
ನವದೆಹಲಿ(ಜು.02): ಕೊರೋನಾ ಸಂಕಟ ಇಡೀ ವಿಶ್ವವನ್ನೇ ಬಾಧಿಸುತ್ತಿದೆ. ದೇಶದಲ್ಲೂ ಈ ಕೊರೋನಾ ಹಾವಳಿ ಜನರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದೆ. ಹೀಗಿರುವಾಗ ಕೊರೋನಾಗೆ ಮೂಗುದಾರ ಹಾಕಲು ಸರ್ಕಾರ ಲಸಿಕೆ ಅಭಿಯಾನ ಆರಂಭಿಸಿದೆ. ಮೊದಲ ಅಲೆ ಸಂದರ್ಭದಲ್ಲಿ ಕೊಂಚ ನಿಧಾನವಾಗಿ ನಡೆಯುತ್ತಿದ್ದ ಈ ಅಭಿಯಾನ, ಎರಡನೇ ಅಲೆ ಬಳಿಕ ಬಹಳ ವೇಗವಾಗಿ ಸಾಗುತ್ತಿದೆ. ಹೀಗಿದ್ದರೂ ಈ ಲಸಿಕಾ ಅಭಿಯಾನದ ಬಗ್ಗೆ ರಾಜಕೀಯ ಪಕ್ಷಗಳ ಪರ ವಿರೋಧಗಳ ಮಾತು ಎಗ್ಗಿಲ್ಲದೆ ಮುಂದುವರೆದಿದೆ.
'ಕೇಂದ್ರ ಲಸಿಕೆ ಕೊಟ್ಟ ಬಳಿಕ ಅಭಿಯಾನಕ್ಕೆ ವೇಗ, ರಾಜ್ಯಗಳ ಬಳಿ ಯೋಜನೆ ಕೊರತೆ'!
ಹೌದು ಸರ್ಕಾರ ಡಿಸೆಂಬರ್‌ನೊಳಗೆ ಈ ಲಸಿಕಾ ಅಭಿಯಾನ ಪೂರ್ಣಗೊಳಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಿ ಲಸಿಕರೆ ನೀಡಲಾಗುತ್ತಿದೆ. ಈ ನಡುವೆ ಕಾಂಗ್ರೆಸ್ ನಾಯಕ ಲಸಿಕೆ ವಿಚಾರವಾಗಿ ಪದೇ ಪದೇ ಸರ್ಕಾರದ ಕಾಲೆಳೆಯುತ್ತಿದೆ. ಸದ್ಯ ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ 'ಜುಲೈ ಬಂತು, ಆದ್ರೆ ಲಸಿಕೆಯೇ ಬಂದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಹೀಗಿರುವಾಗ ಕಾಂಗ್ರೆಸ್ ನಾಯಕನಿಗೆ ಉತ್ತರಿಸಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ 'ಜುಲೈ ತಿಂಗಳಲ್ಲಿ ಲಸಿಕೆ ಲಭ್ಯತೆ ಎಷ್ಟಿರುತ್ತದೆ ಎಂಬ ಬಗ್ಗೆ ನಿನ್ನೆಯಷ್ಟೇ ದಾಖಲೆ ಹಂಚಿಕೊಂಡಿದ್ದೆ. ರಾಹುಲ್ ಗಾಂಧಿ ಸಮಸ್ಯೆ ಏನು? ಅವರು ಆ ಟ್ವೀಟ್ ಓದಿಲ್ಲವೋ? ಅಥವಾ ಅವರಿಗೆ ಅರ್ಥವಾಗಿಲ್ಲವೋ? ಅಹಂಕಾರ ಹಾಗೂ ಅಜ್ಞಾನವೆಂಬ ವೈರಸ್‌ಗೆ ನಮ್ಮಲ್ಲಿ ಲಸಿಕೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ನಾಯಕನನ್ನಾಗಿ ಮಾಡುವ ನಿರ್ಧಾರವನ್ನು ಪುನರ್ ವಿಮರ್ಶೆ ಮಾಡಬೇಕು' ಎಂದು ಖಾರವಾಗೇ ಪ್ರತಿಕ್ರಿಯಿಸಿದ್ದಾರೆ.
ಭಾರತಕ್ಕೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್!
ಲಸಿಕಾ ಅಭಿಯಾನ ಆರಂಭವಾದಾಗಿನಿಂದಲೂ ಸರ್ಕಾರ ಅಂಕಿ ಅಂಶಗಳನ್ನು ಬಹಿರಂಗಪಡಿಸುತ್ತಿದೆಯಾದರೂ, ಕಾಂಗ್ರೆಸ್ ನಾಯಕರು ಈ ವಿಚಾರವಾಗಿ ಸರ್ಕಾರದ ಕಾಲೆಳೆಯುತ್ತಾ ಬಂದಿದ್ದಾರೆ ಎಂಬುವುದು ಉಲ್ಲೇಖನೀಯ.