'ಕೇಂದ್ರ ಲಸಿಕೆ ಕೊಟ್ಟ ಬಳಿಕ ಅಭಿಯಾನಕ್ಕೆ ವೇಗ, ರಾಜ್ಯಗಳ ಬಳಿ ಯೋಜನೆ ಕೊರತೆ'!
* ದೇಶದಲ್ಲಿ ಕೊರೋನಾ ಎರಡನೇ ಅಲೆ ಮಧ್ಯೆ ಲಸಿಕೆ ಅಭಿಯಾನ
* ಕೇಂದ್ರ ಸರ್ಕಾರ ಲಸಿಕೆ ಅಭಿಯಾಣ ಮತ್ತೆ ಆರಂಭಿಸಿದ ಬಳಿಕ ವೇಗ
* ಕೇಂದ್ರ ಲಸಿಕೆ ಕೊಟ್ಟ ಬಳಿಕ ಅಭಿಯಾನಕ್ಕೆ ವೇಗ, ರಾಜ್ಯಗಳ ಬಳಿ ಯೋಜನೆ ಕೊರತೆ
ನವದೆಹಲಿ(ಜು.01): ದೇಶದಲ್ಲಿ ನಡೆಯುತ್ತಿರುವ ಕೊರೋನಾ ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಪರ, ವಿರೋಧಗಳ ಮಾತು ಸದ್ದು ಮಾಡುತ್ತಲೇ ಇವೆ. ಹೀಗಿರುವಾಗ ಈ ಅಭಿಯಾನದ ವಿರುದ್ಧ ಕಿಡಿಕಾರುವ ನಾಯಕರಿಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿರುಗೇಟು ನೀಡಿದ್ದಾರೆ.
ಹೌದು ಲಸಿಕೆ ಅಭಿಯಾನದ ವಿರುದ್ಧ ಅಸಮಾಧಾನ ಹೊರಹಾಕುವ ನಾಯಕರಿಗೆ ಉತ್ತರಿಸಿರುವ ಡಾ. ಹರ್ಷವರ್ಧನ್ ಕೇಂದ್ರ ಸರ್ಕಾರ ಶೇ. 75ರಷ್ಟು ಲಸಿಕೆ ಉಚಿತವಾಗಿ ನೀಡುವ ಕಾರ್ಯ ಆರಂಭಿಸಿದಾಗಿನಿಂದ ದೇಶದಲ್ಲಿ ಈ ಲಸಿಕೆ ಅಭಿಯಾನ ವೇಗ ಪಡೆದುಕೊಂಡಿದೆ. ಕೇವಲ ಜೂನ್ ತಿಂಗಳಲ್ಲಿ 11.50 ಕೋಟಿ ಲಸಿಕೆ ಡೋಸ್ ನೀಡಲಾಗಿದೆ. ಹೀಗಿದ್ದರೂ ಕೆಲವರು ಅಪಪ್ರಚಾರ ಮಾಡುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ರಾಜ್ಯಗಳಿಗೆ ಮೊದಲೇ ಮಾಹಿತಿ ಕೊಟ್ಟಿದ್ದೆವು
ಇಷ್ಟೇ ಅಲ್ಲದೇ ರಾಜ್ಯಗಳಿಗೆ ಜುಲೈ ತಿಂಗಳಲ್ಲಿ ಮಾಡಲಾಗುವ ಲಸಿಕೆ ಪೂರೈಕೆ ಬಗ್ಗೆ ಮೊದಲೇ ಮಾಹಿತಿ ನೀಡಿದ್ದೆವು. ಯಾವಾಗ ಎಷ್ಟು ಲಸಿಕೆ ಅವರಿಗೆ ಸಿಗುತ್ತದೆ? ಎಂಬುವುದನ್ನು ತಿಳಿದ ಬಳಿಕವೂ ಪ್ರತ್ಯಾರೋಪಗಳು ಮುಂದುವರೆದಿದ್ದವು. ನಾವು ರಾಜ್ಯಗಳಿಗೆ ಪ್ರತಿಯೊಂದೂ ಮಾಹಿತಿ ನೀಡಿದ್ದೇವೆ ಎಂದೂ ಕೇಂದ್ರ ಆರೋಗ್ಯ ಸಚಿವವರು ತಿಳಿಸಿದ್ದಾರೆ.
ರಾಜ್ಯಗಳಿಗೆ ಸಮಸ್ಯೆಗಳಿದ್ದರೆ, ಉತ್ತಮ ಯೋಜನೆ ರೂಪಿಸಲಿ
ಇನ್ನು ಲಸಿಕೆ ಬಗ್ಗೆ ರಾಜ್ಯಗಳಿಗೆ ಏನಾದರೂ ಸಮಸ್ಯೆ ಇದ್ದರೆ ಅವರು ಉತ್ತಮ ಯೋಜನೆ ಮಾಡಬೇಕು ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ. ರಾಜ್ಯಗಳಲ್ಲಿ ಲಸಿಕೆ ತಲುಪಿಸುವ ಅಥವಾ ನಿರ್ವಹಿಸುವ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ರಾಜಕೀಯ ಮಾಡುವ ಬದಲು, ಅವರು ತಮ್ಮ ರಾಜ್ಯಗಳಲ್ಲಿ ಉತ್ತಮ ಯೋಜನೆ ಮಾಡಬೇಕು. ರಾಜ್ಯ ಸರ್ಕಾರಗಳು ಉತ್ತಮ ಆಡಳಿತದ ಬದಲು ರಾಜಕೀಯದಲ್ಲಿ ತೊಡಗಿಕೊಂಡಿವೆ ಎಂದೂ ಹೇಳಿದ್ದಾರೆ.