ಬೆಂಗಳೂರು[ಫೆ.12]: ಕೊರೋನಾ ವೈರಸ್‌ಗೆ ಯಾವುದೇ ಹೋಮಿಯೋಪತಿ ಔಷಧ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಇಲಾಖೆಯು, ಇತ್ತೀಚೆಗೆ ಮಾರುಕಟ್ಟೆಯಲ್ಲಿ ‘ಅರ್ಸೇನಿಕಂ ಆಲ್ಬಂ 30 ಸಿಎಚ್‌’ ಎಂಬ ಹೋಮಿಯೋಪತಿ ಔಷಧ ದೊರೆಯುತ್ತಿದ್ದು, ಇದು ಕೊರೋನಾ ಗುಣಪಡಿಸುತ್ತದೆ ಎಂದು ಸುದ್ದಿ ಹಬ್ಬಿಸಲಾಗಿದೆ. ಆದರೆ, ಇದು ಸುಳ್ಳು. ಹೋಮಿಯೋಪತಿಯಲ್ಲಿ ಕೊರೋನಾಗೆ ಯಾವುದೇ ಔಷಧ ಇದುವರೆಗೂ ಲಭ್ಯವಾಗಿಲ್ಲ. ಕೇಂದ್ರ ಸರ್ಕಾರ ಕೊರೋನಾ ಔಷಧ ವಿಚಾರವಾಗಿ ಯಾವುದೇ ಮಾರ್ಗಸೂಚಿಗಳನ್ನು ಸೂಚಿಸಿಲ್ಲ. ಕೆಲವು ಕಂಪನಿಗಳು, ಮಾರಾಟಗಾರರು ಈ ಸಮಯವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ಮೋಸ ಮಾಡಲು ಯತ್ನಿಸುತ್ತಿದ್ದಾರೆ. ಜನರು ವದಂತಿಗಳಿಗೆ ಕಿವಿಗೊಡದೆ ಎಚ್ಚರ ವಹಿಸಬೇಕು ಎಂದು ಇಲಾಖೆ ಹೇಳಿದೆ.

ಒಂದೇ ದಿನ 108 ಜನರ ಸಾವು, 1000 ದಾಟಿತು ಕೊರೋನಾ ಬಲಿ!

ರಾಜ್ಯದಲ್ಲಿ ಕೊರೋನಾ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ಮಂಗಳವಾರ ಚೀನಾದಿಂದ ಬಂದ ಇನ್ನೂ 30 ಜನರನ್ನು ಮುಂಜಾಗ್ರತಾ ಕ್ರಮವಾಗಿ ತಪಾಸಣೆಗೊಳಪಡಿಸಲಾಗಿದೆ. ರಾಜ್ಯದಲ್ಲಿ ಈವರೆಗೆ ಯಾವುದೇ ವ್ಯಕ್ತಿಗೆ ಕೊರೋನಾ ವೈರಸ್‌ ಲಕ್ಷಣಗಳು ಕಂಡುಬಂದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.