ಟಾಟಾ ಸಮೂಹವನ್ನು ಕ್ರಿಮಿನಲ್ ರೀತಿಯಲ್ಲಿ ನಾಶ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದಿದ್ದಾರೆ.
ನವದೆಹಲಿ: ದೇಶದ ಅತ್ಯಂತ ದೊಡ್ಡ ಉದ್ಯಮ ಸಮೂಹವಾದ ಟಾಟಾ ಗ್ರೂಪ್ ಅನ್ನು ಕ್ರಿಮಿನಲ್ ರೀತಿಯಲ್ಲಿ ನಾಶ ಮಾಡಲಾಗುತ್ತಿದೆ. ಈ ಕುರಿತು ಒಬ್ಬನೇ ಒಬ್ಬ ಉದ್ಯಮಪತಿ ಕೂಡ ಬಹಿರಂಗವಾಗಿ ಮಾತನಾಡುವ ಧೈರ್ಯ ತೋರುತ್ತಿಲ್ಲ. ಈ ವಿಚಾರದಲ್ಲಿ ನಾವು ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಟಾಟಾ ಸಮೂಹದಲ್ಲಿ ನಾಯಕತ್ವ ಕುರಿತ ಗೊಂದಲಗಳ ನಡುವೆ ಈ ಬಗ್ಗೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್, ಉದ್ಯಮಪತಿಗಳು ಎಲ್ಲಿಯವರಿಗೆ ಮೌನವಾಗಿರಲು ಸಾಧ್ಯ? ಭಾರತೀಯ ಉದ್ಯಮವು ಪ್ರಧಾನಿ ಮೋದಿ ಮತ್ತು ಗೃಹ ಸಚಿವರ ಆಟದ ಸಾಮಾನು ಅಲ್ಲ. ನಿಮಗೆ ಧೈರ್ಯ ಇಲ್ಲದೇ ಇರಬಹುದು. ಆದರೆ, ನಾವು ಆ ರೀತಿ ಅಲ್ಲ, ಈ ಅಪರಾಧದ ವಿಚಾರದಲ್ಲಿ ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ಎಲ್ಲದರಲ್ಲೂ ರಾಜಕೀಯ ಬೇಡ: ನಿರ್ಮಲಾ ತಿರುಗೇಟು
ರಾಹುಲ್ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘ಇಂಥ ಹೇಳಿಕೆ ಮೂಲಕ ಉದ್ಯಮಿಗಳು ಕೂಡಾ ಅಪನಂಬಿಕೆ ಪಸರಿಸುವ ತಮ್ಮ ಕೆಲಸದಲ್ಲಿ ಜೈಜೋಡಿಸುವಂತೆ ಪ್ರಚೋದಿಸುತ್ತಿದ್ದಾರೆ. ಹೀಗೆ ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
ರಾಹುಲ್ ನೇತೃತ್ವದಲ್ಲಿ ಕೈ ಕೊನೆಯುಸಿರು: ಬಿಜೆಪಿ
‘ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ಅಂತಿಮ ಉಸಿರೆಳೆಯುತ್ತಿರುವ ಹೊತ್ತಿನಲ್ಲೇ, 2029ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ನರೇಂದ್ರ ಮೋದಿ ಪ್ರಧಾನಿಯಾಗಿ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯ ಪ್ರಾಕಾರಕ್ಕೆ ಮರಳಲಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಬುಧವಾರ ಹೇಳಿದ್ದಾರೆ.
ಕೈ ರ್ಯಾಲಿಗೆ ಪ್ರತಿಯಾಗಿ ಪ್ರಜಾಪ್ರಭುತ್ವ ಉಳಿಸಿ
ವಿಪಕ್ಷಗಳ ಹೋರಾಟಕ್ಕೆ ಪ್ರತ್ಯುತ್ತರವಾಗಿ ನಡೆದ ‘ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ’ (ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆಯನ್ನು ತೊಡೆದುಹಾಕಿ) ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ‘ಮತಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶ ಹೊಂದಿರುವ ಎಸ್ಐಆರ್ ಪ್ರಕ್ರಿಯೆಯು ಕಾಂಗ್ರೆಸ್ ನಾಯಕರಿಗೆ ಅಸಮಾಧಾನ ಉಂಟುಮಾಡಿದೆ. ಆದರೆ, ಮತಪಟ್ಟಿಯಿಂದ ಒಳನುಸುಳುಕೋರರನ್ನು ಹೊರಹಾಕಲು ಬಿಜೆಪಿ ಬದ್ಧವಾಗಿದೆ’ ಎಂದು ತಿಳಿಸಿದರು.
2029ರಲ್ಲೂ ಮೋದಿ ಪ್ರಧಾನಿ: ನವೀನ್ ವಿಶ್ವಾಸ
‘ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ತನ್ನ ಅಂತಿಮ ಉಸಿರನ್ನು ಎಳೆಯುತ್ತಿದೆ. ಅವರು ಸಾಗುತ್ತಿರುವ ರೀತಿಯನ್ನು ನೋಡಿದರೆ, ಶೀಘ್ರದಲ್ಲೇ ಪಕ್ಷದಲ್ಲಿ ಉಳಿಯುವ ಏಕೈಕ ಕಾರ್ಯಕರ್ತ ಅವರೊಬ್ಬರೇ ಆಗಲಿದ್ದಾರೆ’ ಎಂದು ವ್ಯಂಗ್ಯವಾಡಿದರು.






