ಮಣಿಪುರ ಪೊಲೀಸರಿಗೆ ಸುಪ್ರೀಂ ಹಿಗ್ಗಾಮುಗ್ಗಾ ಚಾಟಿ: ತನಿಖೆಗೆ ಎಸ್‌ಐಟಿ/ಜಡ್ಜ್ ಸಮಿತಿ ನೇಮಕದ ಸುಳಿವು
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿದ ಘಟನೆ ಅತ್ಯಂತ ‘ಭಯಾನಕ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ರಾಜ್ಯದ ಪೊಲೀಸರು ಈ ಪ್ರಕರಣದಲ್ಲಿ ನಡೆದುಕೊಂಡಿರುವ ರೀತಿಯನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದೆ.
ನವದೆಹಲಿ : ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿದ ಘಟನೆ ಅತ್ಯಂತ ‘ಭಯಾನಕ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ರಾಜ್ಯದ ಪೊಲೀಸರು ಈ ಪ್ರಕರಣದಲ್ಲಿ ನಡೆದುಕೊಂಡಿರುವ ರೀತಿಯನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದೆ. ಅಲ್ಲದೆ ಮಣಿಪುರದ ಹಿಂಸಾಚಾರದ ತನಿಖೆಯನ್ನು ರಾಜ್ಯದ ಪೊಲೀಸರ ಕೈಯಿಂದ ಹಿಂಪಡೆದು ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ಅಥವಾ ನಿವೃತ್ತ ಜಡ್ಜ್‌ಗಳ ಸಮಿತಿ ನೇಮಕ ಮಾಡುವ ಸುಳಿವು ನೀಡಿದೆ.
ಮಣಿಪುರದ ಹಿಂಸಾಚಾರದ ವಿರುದ್ಧ ಸಲ್ಲಿಕೆಯಾದ ಹಲವು ಅರ್ಜಿಗಳು ಹಾಗೂ ಸ್ವತಃ ನಗ್ನ ಪರೇಡ್‌ಗೊಳಗಾದ ಇಬ್ಬರು ಮಹಿಳೆಯರು ಸಲ್ಲಿಸಿದ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (DY chandrachud) ಅವರ ತ್ರಿಸದಸ್ಯ ಪೀಠ, ಮೇ 4ರಂದು ನಡೆದ ಘಟನೆಯ ಬಗ್ಗೆ ಎಫ್‌ಐಆರ್ ದಾಖಲಿಸಲು ಮಣಿಪುರದ ಪೊಲೀಸರು 14 ದಿನ ತೆಗೆದುಕೊಂಡಿದ್ದೇಕೆ? ಪೊಲೀಸರು ಮೇ 18ರವರೆಗೆ ಏನು ಮಾಡುತ್ತಿದ್ದರು? ಎಫ್‌ಐಆರ್ ಹಾಗೂ ವಿಡಿಯೋ ಸಾಕ್ಷ್ಯವನ್ನು ಮ್ಯಾಜಿಸ್ಪ್ರೇಟ್ ಕೋರ್ಟ್‌ಗೆ ಜೂ.24ರಂದು ವರ್ಗಾವಣೆ ಮಾಡಿದ್ದೇಕೆ? ಅಂದರೆ ಘಟನೆ ನಡೆದ ಹೆಚ್ಚುಕಮ್ಮಿ ಒಂದು ತಿಂಗಳ ಬಳಿಕ ಇದನ್ನು ಕೋರ್ಟ್‌ನ ಗಮನಕ್ಕೆ ತರಲಾಗಿದೆ. ಪೊಲೀಸರೇ ಇಬ್ಬರು ಮಹಿಳೆಯರನ್ನು ಉದ್ರಿಕ್ತ ಗುಂಪಿನ ಕೈಗೆ ಒಪ್ಪಿಸಿದರು ಎಂದು ಮಾಧ್ಯಮ ವರದಿಗಳು ಹೇಳಿವೆ. ಅದಂತೂ ಇನ್ನೂ ಭಯಾನಕ ಎಂದು ತೀಕ್ಷ್ಣವಾಗಿ ಹೇಳಿತು.
ಮಣಿಪುರ ಹಿಂಸೆಗೆ ಮತ್ತೆ ಕಲಾಪ ಭಂಗ: ಚರ್ಚೆಗೆ ಸಿದ್ಧ ಎಂಬ ಶಾ ಮನವಿಗೂ ಓಗೊಡದ ವಿಪಕ್ಷ
ತನಿಖಾ ಸಮಿತಿ ನೇಮಕ ಸಾಧ್ಯತೆ:
ಪೊಲೀಸರು ಈ ಪ್ರಕರಣದ ತನಿಖೆ ನಡೆಸುವುದು ಬೇಡ. ಮಂಗಳವಾರ ಎಸ್‌ಐಟಿ (SIT) ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತನಿಖಾ ಸಮಿತಿ ರಚಿಸುವ ಬಗ್ಗೆ ಆದೇಶ ನೀಡುತ್ತೇವೆ ಎಂದೂ ಕೋರ್ಟ್ ತಿಳಿಸಿತು. ಅಟಾರ್ನಿ ಜನರಲ್ ಈ ಕುರಿತು ಪ್ರತಿಕ್ರಿಯಿಸಲು ಸಮಯ ಕೇಳಿದಾಗ, ‘ಸಮಯ ಕೈಮೀರಿ ಹೋಗುತ್ತಿದೆ. ರಾಜ್ಯಕ್ಕಾದ ಗಾಯವನ್ನು ಗುಣಪಡಿಸಲು ನೆರವಿನ ಹಸ್ತ ಚಾಚುವ ತುರ್ತು ಅಗತ್ಯವಿದೆ’ ಎಂದು ಕೋರ್ಟ್ ಹೇಳಿತು. ಇದೇ ವೇಳೆ, ಹಿಂಸಾಚಾರದ ಬಗ್ಗೆ ರಾಜ್ಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ದಾಖಲಾದ ‘ಶೂನ್ಯ ಎಫ್‌ಐಆರ್’ಗಳ ಬಗ್ಗೆ ಹಾಗೂ ಇಲ್ಲಿಯವರೆಗೆ ಬಂಧಿಸಲ್ಪಟ್ಟವರ ಬಗ್ಗೆ ವಿವರ ನೀಡಬೇಕು. ಸಂತ್ರಸ್ತರ ಪುನರ್ವಸತಿಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದೂ ನ್ಯಾಯಪೀಠ ಸೂಚಿಸಿತು.
ಠಾಣೆಯ ವ್ಯಾಪ್ತಿ ಪರಿಗಣಿಸದೆ ಅಪರಾಧ ಕೃತ್ಯದ ಬಗ್ಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಗಳಲ್ಲಿ ದಾಖಲಿಸುವ ಎಫ್‌ಐಆರ್‌ಗಳನ್ನು ಶೂನ್ಯ ಎಫ್‌ಐಆರ್ ಎನ್ನಲಾಗುತ್ತದೆ.
ಮಣಿಪುರ ಕ್ರೌರ್ಯದ ಮತ್ತಷ್ಟು ಕತೆ ವ್ಯಥೆ: ಯುವ ಪೀಳಿಗೆಗೆ ಪಾರಾಗುವಂತೆ ಹೇಳಿ ಪ್ರಾಣ ಬಿಟ್ಟ ಯೋಧನ ಪತ್ನಿ
ಸಿಬಿಐ ತನಿಖೆಗೆ ವಿರೋಧ:
ಈ ನಡುವೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬಾರದು ಮತ್ತು ವಿಚಾರಣೆಯನ್ನು ಅಸ್ಸಾಂನಲ್ಲಿ ನಡೆಸಬಾರದು ಎಂದು ಇಬ್ಬರು ಸಂತ್ರಸ್ರ ಮಹಿಳೆಯರ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು. ಈ ವೇಳೆ ಕೋರ್ಟ್ ಕಣ್ಗಾವಲಿನ ತನಿಖೆಗೆ ತನ್ನದೇನೂ ಅಭ್ಯಂತರ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಪಪಡಿಸಿತು.