7 ವರ್ಷಕ್ಕೇ ಇತಿಹಾಸದ ಪುಟ ಸೇರಿದ ಗುಲಾಬಿ ನೋಟಿನ ಕತೆ ಇದು!
ಭಾರೀ ಸದ್ದುಗದ್ದಲದೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ 2000 ರು. ಮುಖಬೆಲೆಯ ಗುಲಾಬಿ ಬಣ್ಣದ ನೋಟುಗಳು, ಬಿಡುಗಡೆಯಾದ ಕೇವಲ 7 ವರ್ಷದಲ್ಲಿ ಅಂತ್ಯದ ಹಾದಿ ಹಿಡಿದಿದೆ.
ನವದೆಹಲಿ: ಭಾರೀ ಸದ್ದುಗದ್ದಲದೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ 2000 ರು. ಮುಖಬೆಲೆಯ ಗುಲಾಬಿ ಬಣ್ಣದ ನೋಟುಗಳು, ಬಿಡುಗಡೆಯಾದ ಕೇವಲ 7 ವರ್ಷದಲ್ಲಿ ಅಂತ್ಯದ ಹಾದಿ ಹಿಡಿದಿದೆ. ದೇಶಾದ್ಯಂತ ಕಪ್ಪುಹಣ ಹೆಚ್ಚಾಗಿತ್ತು. ಜೊತೆಗೆ ಶತ್ರು ದೇಶಗಳು ಭಾರೀ ಪ್ರಮಾಣದ ನಕಲಿ ನೋಟುಗಳನ್ನು ಮುದ್ರಿಸಿ ದೇಶದಲ್ಲಿ ಚಲಾವಣೆಗೆ ಬಿಡುತ್ತಿದ್ದವು. ಆರ್ಥಿಕತೆ ಚೇತರಿಕೆ ಹಾದಿಯಲ್ಲಿದ್ದ ಕಾರಣ, ಹೆಚ್ಚಿನ ಪ್ರಮಾಣದ ನಗದಿನ ಅವಶ್ಯಕತೆ ಕಂಡುಬಂದಿತ್ತು. ಈ ಎಲ್ಲಾ ಕಾರಣಕ್ಕಾಗಿ ಕೇಂದ್ರ ಸರ್ಕಾರ 7 ವರ್ಷಗಳ ಹಿಂದೆ 500 ರು.ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ, 2000 ರು. ಮುಖಬೆಲೆಯ ಹೊಸ ನೋಟುಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಹೀಗೆ ಉದ್ದೇಶಿಸಿ ಗುರಿ ಸಾಧನೆ ಬಳಿಕ ಇದೀಗ ಕೇಂದ್ರ ಸರ್ಕಾರ, ಗುಲಾಬಿ ಬಣ್ಣದ ನೋಟುಗಳನ್ನು ಹಿಂದಕ್ಕೆ ಪಡೆಯಲು ಮುಂದಾಗಿದೆ.
ಅಂತ್ಯಕ್ಕೆ 5 ವರ್ಷದ ಹಿಂದೆಯೇ ಮುನ್ನುಡಿ
2000 ರು. ನೋಟುಗಳನ್ನು ಹಿಂಪಡೆಯುವ ನಿರ್ಧಾರ ಇದೀಗ ಪ್ರಕಟಗೊಂಡಿದ್ದರೂ, ಇದರ ಪ್ರಕ್ರಿಯೆ 5 ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಈ ನೋಟಿನ ಮುದ್ರಣವನ್ನು 2018ರಲ್ಲೇ ಆರ್‌ಬಿಐ (RBI) ಸ್ಥಗಿತಗೊಳಿಸಿತ್ತು. 2018ರಲ್ಲಿ ಈ ನೋಟುಗಳ ಚಲಾವಣೆ ಮೌಲ್ಯ 6.73 ಲಕ್ಷ ಕೋಟಿ ರು.ನಷ್ಟಿತ್ತು. ಇದಾದ ಬಳಿಕ ಈ ನೋಟಿನ ಚಲಾವಣೆ ಕುಸಿತದತ್ತ ಸಾಗಿದ್ದು, 2023ರ ಮಾ.31ರ ವೇಳೆಗೆ ಶೇ.10ರಷ್ಟು ನೋಟು ಮಾತ್ರ ಚಲಾವಣೆಯಲ್ಲಿತ್ತು. ಪ್ರತಿ ವರ್ಷವೂ, ಬ್ಯಾಂಕುಗಳು ತಮ್ಮಲ್ಲಿ ಠೇವಣಿ ಇಡಲ್ಪಟ್ಟ2000 ರು. ಮುಖಬೆಲೆಯ ನೋಟುಗಳನ್ನು ತಮ್ಮಲ್ಲೇ ಇರಿಸಿಕೊಳ್ಳತೊಡಗಿದವು.
'ಚಿಪ್ ಕೂಡ ವಾಪಾಸ್ ಕೊಡ್ಬೇಕಾ?..' ಇತಿಹಾಸದ ಪುಟ ಸೇರಿದ 2 ಸಾವಿರ ರೂಪಾಯಿ ನೋಟು ಫುಲ್ ಟ್ರೋಲ್!
ಅಂದು ರಾತ್ರಿ 8 ಗಂಟೆಗೆ ಶಾಕ್ ನೀಡಿದ್ದ ಪ್ರಧಾನಿ ಮೋದಿ
ನವದೆಹಲಿ: 2016ರ ನ.8ರಂದು ದಿಢೀರನೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ, 500 ಮತ್ತು 1000 ರು. ಮುಖಬೆಲೆಯ ನೋಟುಗಳ ಅಪನಗದಿಕರಣ ಘೋಷಿಸಿದ್ದರು. ಜೊತೆಗೆ 2000 ರು. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಹಿಂದಿನ ನೋಟುಗಳಿಗೆ ಹೋಲಿಸಿದರೆ ಇದು ಗರಿಷ್ಠ ಪ್ರಮಾಣದ ಭದ್ರತಾ ವೈಶಿಷ್ಟ್ಯ ಹೊಂದಿತ್ತು. ಇದು ಜನರಲ್ಲಿ ಭಾರೀ ಆತಂಕ ಹುಟ್ಟಿಸಿತ್ತು. ಜೊತೆಗೆ ಬ್ಯಾಂಕ್‌ಗಳಲ್ಲಿ ನಿಗದಿತ ಪ್ರಮಾಣದಲ್ಲಿ ಮಾತ್ರವೇ ಹಣ ವಿನಿಮಯಕ್ಕೆ ಅವಕಾಶ ನೀಡಿದ್ದ ಮತ್ತು ಭಾರೀ ಸರದಿ ನಿಲ್ಲಬೇಕಾಗಿ ಬಂದ ಕಾರಣ ಜನತೆ ಸಾಕಷ್ಟು ತೊಂದರೆ ಅನುಭವಿಸಿದ್ದರು. 2023ರ ಮಾ.31ರ ವೇಳೆಗೆ ಒಟ್ಟು ನೋಟಿನಲ್ಲಿ ಕೇವಲ ಶೇ.10ರಷ್ಟು ಮಾತ್ರ ಚಲಾವಣೆಯಲ್ಲಿತ್ತು.
ಚಿದಂಬರಂ ಪ್ರತಿಕ್ರಿಯೆ
ಅಂದುಕೊಂಡಂತೆ 2000 ರು. ಮುಖಬೆಲೆಯ ನೋಟ್‌ಗಳನ್ನು ಹಿಂಪಡೆಯಲಾಗಿದೆ. ನೋಟ್ ಬ್ಯಾನ್ ಮಾಡಿದ ಮೂರ್ಖ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಈ ನೋಟನ್ನು ಜಾರಿ ಮಾಡಲಾಗಿತ್ತು. ಈ ನೋಟು ಚಲಾವಣೆಯಲ್ಲಿ ಇರುವುದಿಲ್ಲ ಎಂದು ನಾನು ಆಗಲೇ ಹೇಳಿದ್ದೆ. ಇದೀಗ ನೋಟ್‌ಬ್ಯಾನ್ ಒಂದು ಪೂರ್ಣವೃತ್ತವನ್ನು ತಲುಪಿದೆ- ಪಿ.ಚಿದಂಬರಂ, ಹಿರಿಯ ಕಾಂಗ್ರೆಸ್ ನಾಯಕ
ತನ್ನ ನೀತಿಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆಯಿಲ್ಲ, 2 ಸಾವಿರ ನೋಟು ಹಿಂಪಡೆದ ಕೇಂದ್ರಕ್ಕೆ ಸಿದ್ಧರಾಮಯ್ಯ ಚಾಟಿ!
ನೋಟಿನ ಕುರಿತ ಪ್ರಶ್ನೆಗೆ ಇಲ್ಲಿದೆ ಉತ್ತರ: ಮಾನ್ಯತೆ, ಬಳಕೆ, ಕಾಲಮಿತಿ, ಖಾತೆ ಅನುಮಾನಕ್ಕೆ ಇದು ಪರಿಹಾರ
2000 ರು.ಗೆ ಕಾನೂನಿನ ಮಾನ್ಯತೆ ಇದೆಯೇ?
ಸೆ.30ರ ಬಳಿಕವೂ ಈ ನೋಟುಗಳು ಕಾನೂನು ಮಾನ್ಯತೆ ಹೊಂದಿರಲಿವೆ
ಸಾಮಾನ್ಯ ವ್ಯವಹಾರಗಳಿಗೆ ಬಳಕೆ ಮಾಡಬಹುದೇ?
ಪಾವತಿ ಮಾಡಲು, ಸ್ವೀಕರಿಸಲು ಈ ನೋಟು ಬಳಸಬಹುದು.
ನೋಟು ಇರುವವರು ಏನು ಮಾಡಬೇಕು?
1 ದಿನಕ್ಕೆ ಗರಿಷ್ಠ 20 ಸಾವಿರ ರು.ನಂತೆ ಬ್ಯಾಂಕಲ್ಲಿ ಬದಲಾಯಿಸಬಹುದು.
ನೋಟು ಬದಲಾವಣೆಗೆ ಕಾಲಮಿತಿ ಇದೆಯೇ?
ಸದ್ಯಕ್ಕೆ ಆರ್‌ಬಿಐ ಸೆ.30ರವರೆಗೆ ಸಮಯಾವಕಾಶವನ್ನು ನೀಡಿದೆ.
ಯಾವಾಗಿನಿಂದ ನೋಟು ಬದಲಾವಣೆ ಮಾಡಬಹುದು?
ಮೇ 23ರಿಂದ ಎಲ್ಲಾ ಬ್ಯಾಂಕು, ಆರ್‌ಬಿಐ ಶಾಖೆಗಳಲ್ಲಿ ಬದಲಾವಣೆ ಮಾಡಬಹುದು
ನೋಟು ಬದಲಾವಣೆಗೆ ಬ್ಯಾಂಕ್‌ನಲ್ಲಿ ಅಕೌಂಟ್ ಇರಬೇಕೆ?
ಇಲ್ಲ. ಖಾತೆ ಇಲ್ಲದಿದ್ದರೂ ನೋಟು ಬದಲಾವಣೆ ಮಾಡಿಕೊಳ್ಳಬಹುದು.
20 ಸಾವಿರಕ್ಕಿಂತ ಹೆಚ್ಚು ಹಣ ಬೇಕಿದ್ದರೆ ಏನು ಮಾಡಬೇಕು?
ಜಮೆಗೆ ಮಿತಿ ಹೇರಿಲ್ಲ. ಹೀಗಾಗಿ ಜಮೆ ಮಾಡಿ ವಿತ್‌ಡ್ರಾ ಮಾಡಬಹುದು.
ಬದಲಾವಣೆಗೆ ಶುಲ್ಕ ಪಾವತಿಸಬೇಕೇ?
ಬದಲಾವಣೆಗೆ ಶುಲ್ಕ ಇಲ್ಲ. ಉಚಿತವಾಗಿ ಸೌಲಭ್ಯ ಪಡೆದುಕೊಳ್ಳಬಹುದು.
ಬ್ಯಾಂಕುಗಳು ತಿರಸ್ಕರಿಸಿದರೆ ಏನು ಮಾಡುವುದು?
ಬದಲಾವಣೆ ಮಾಡಿಕೊಡುವುದು ಕಡ್ಡಾಯ. ತಿರಸ್ಕರಿಸಿದರೆ ಆರ್‌ಬಿಐಗೆ ದೂರು ನೀಡಬಹುದು