ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಬೆಂಗಾಲ್‌ ಈಸ್ಟರ್ನ್‌ ಫ್ರಂಟಿಯರ್‌ ರೆಗ್ಯುಲೇಶನ್‌ (ಬಿಇಎಫ್‌ಆರ್‌) 1873ರ ಕಾಯ್ದೆಯಡಿ ಇನ್ನರ್‌ ಲೈನ್‌ ಪರ್ಮಿಟ್‌ (ಆಂತರಿಕ ಪರವಾನಗಿ ವ್ಯವಸ್ಥೆ ಅಥವಾ ಒಂದು ರಾಜ್ಯದ ಗಡಿಯೊಳಗೆ ಹೋಗಲು ಪರವಾನಗಿ ಪಡೆಯಬೇಕಾದ ವ್ಯವಸ್ಥೆ) ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಅನ್ವಯವಾಗುವುದಿಲ್ಲ. ಸಮಕಾಲೀನ ಭಾರತವನ್ನು ಅರ್ಥೈಸಿಕೊಳ್ಳಲು, ಭಾರತವನ್ನು ಈಶಾನ್ಯ ರಾಜ್ಯ ಎಂದು ವಿಭಜಿಸಿದ ಬ್ರಿಟಿಷ್‌ ಮಾಂತ್ರಿಕತೆಯ ಹಿಂದಿನ ಉದ್ದೇಶವನ್ನು ನಾವು ತಿಳಿದುಕೊಳ್ಳಬೇಕು.

150 ವರ್ಷದ ಹಿಂದಿನ ಕಾನೂನು

ಇನ್ನರ್‌ ಲೈನ್‌ ಪರ್ಮಿಟ್‌ ವ್ಯವಸ್ಥೆಯ ಐತಿಹಾಸಿಕ ಮೂಲ ಇರುವುದು 19ನೇ ಶತಮಾನದ ಪೂರ್ವಾರ್ಧದಲ್ಲಿ ನಡೆದ ಆಂಗ್ಲೋ-ಬರ್ಮೀಸ್‌ ಯುದ್ಧದಲ್ಲಿ. ಬ್ರಿಟಿಷರು ಮರೆತು ಬಿಟ್ಟಿದ್ದ ಆಯಕಟ್ಟಿನ ಕ್ಷೇತ್ರಗಳ ಮೇಲೆ ಬರ್ಮಾ ಮತ್ತು ಚೀನಾ ಕಣ್ಣಿಟ್ಟಿದ್ದವು ಎನ್ನುವುದನ್ನು ಈ ಯುದ್ಧ ಬಹಿರಂಗಪಡಿಸಿತ್ತು. ಅನಂತರ ಬ್ರಿಟಿಷರು ಕಷ್ಟಪಟ್ಟು ಬಹಳಷ್ಟುಬಾರಿ ದಂಡಯಾತ್ರೆ ನಡೆÜಸಿ ಗುಡ್ಡಗಾಡು ಪ್ರದೇಶಗಳ ಮ್ಯಾಪ್‌ ಸಿದ್ಧಪಡಿಸಿದರು. ಹೀಗಾಗಿ ಬ್ರಿಟಿಷರ ಪ್ರಭಾವ ಅಸ್ಸಾಂ, ಮಣಿಪುರದಿಂದ ಇತರ ರಾಜ್ಯಗಳ ಗುಡ್ಡಗಾಡು ಪ್ರದೇಶಗಳಿಗೂ ಹಬ್ಬಿತ್ತು.

CAA ವಿರೋಧಿಸಿ ಚಿನ್ನದ ಪದಕ ತಿರಸ್ಕರಿಸಿದ ವಿದ್ಯಾರ್ಥಿನಿ ಘಟಿಕೋತ್ಸವದಿಂದ ಹೊರಕ್ಕೆ!

ಬೆಂಗಾಲ್‌ ಈಸ್ಟರ್ನ್‌ ಫ್ರಂಟಿಯರ್‌ ರೆಗ್ಯುಲೇಶನ್‌ (ಬಿಇಎಫ್‌ಆರ್‌) 1873ರ ಅನುಸಾರ ಲೆಫ್ಟಿನೆಂಟ್‌ ಗವರ್ನರ್‌ಗೆ ಆಂತರಿಕ ಗಡಿಯನ್ನು ಗುರುತು ಮಾಡಲು ನಿರ್ದೇಶಿಸಲಾಯಿತು. ಅದರಂತೆ ಕೆಲವು ವರ್ಗಗಳು ಅಥವಾ ವಿದೇಶಿಗರು ಬ್ರಿಟಿಷರಿಂದ ಪರವಾನಗಿ ಪಡೆಯದೆ ರಾಜ್ಯದಲ್ಲಿ ಪ್ರವೇಶಿಸುವಂತಿರಲಿಲ್ಲ. ಈ ನಿಯಂತ್ರಣವು ಸರ್ಕಾರದ ಕೈಗೆ ಸಂಪೂರ್ಣ ಹತೋಟಿ ನೀಡಿತು. ಈ ನಿಯಂತ್ರಣ ವ್ಯವಸ್ಥೆ ಈ ಮೂರು ರಾಜ್ಯಗಳಲ್ಲಿ ಇನ್ನೂ ಜಾರಿಯಲ್ಲಿದೆ.

ಈಗ ಅರುಣಾಚಲ ಪ್ರದೇಶ, ಮಿಜೋರಂ ಮತ್ತು ನಾಗಾಲ್ಯಾಂಡ್‌ ಈ ವ್ಯವಸ್ಥೆಯ ವ್ಯಾಪ್ತಿಗೆ ಒಳಪಡುತ್ತಿವೆ. ಮಣಿಪುರ ಸರ್ಕಾರ ನಮ್ಮ ರಾಜ್ಯವೂ ಈ ವ್ಯವಸ್ಥೆ ವ್ಯಾಪ್ತಿಗೆ ಒಳಪಡಬೇಕೆಂದು ಪಟ್ಟು ಹಿಡಿದಿದ್ದರಿಂದ ಇತ್ತೀಚೆಗಷ್ಟೇ ಅದನ್ನೂ ಸೇರ್ಪಡೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಬುಡಕಟ್ಟು ಜನಾಂಗದ ಹಿತಾಸಕ್ತಿ

ಸ್ವಾತಂತ್ರ್ಯ ಪೂರ್ವದಲ್ಲಿ ಈಶಾನ್ಯ ಭಾಗದಲ್ಲಿ ಜಾರಿಯಲ್ಲಿದ್ದ ರಾಜಪ್ರಭುತ್ವದ ಹಿತಾಸಕ್ತಿಯನ್ನು ಕಾಪಾಡಲು ಬ್ರಿಟಿಷರು ಬೆಂಗಾಲ್‌ ಈಸ್ಟರ್ನ್‌ ಫ್ರಂಟಿಯರ್‌ ರೆಗ್ಯುಲೇಷನ್‌-1873 ಎಂಬ ಕಾಯ್ದೆ ಜಾರಿಗೊಳಿಸಿದ್ದರು. ಆದರೆ ಆಗ ಅಲ್ಲಿನ ಬುಡಕಟ್ಟು ಜನಾಂಗದ ಹಿತಾಸಕ್ತಿ ಕಾಪಾಡುವುದು ನಮ್ಮ ಉದ್ದೇಶ ಎಂದು ಬ್ರಿಟಿಷರು ತೋರಿಕೆಗಷ್ಟೇ ಹೇಳಿದ್ದರು. ಆದಾಗ್ಯೂ, ಈ ವ್ಯವಸ್ಥೆಯಿಂದ ಅಸ್ಸಾಂನಲ್ಲಿ ಬ್ರಿಟಿಷರ ವಾಣಿಜ್ಯ ಹಿತಾಸಕ್ತಿಗಳು ಪರಿಣಾಮಕಾರಿಯಾಗಿ ಅಸ್ತಿತ್ವಕ್ಕೆ ಬಂದವು. ಬುಡಕಟ್ಟು ಜನಾಂಗ ಆಕ್ರಮಣದಿಂದ ರಕ್ಷಣೆ ಪಡೆಯಿತು.

ವಿಭಜನಾ ರೇಖೆಯ ಎರಡೂ ಬದಿಯ ಜನರ ಪ್ರವೇಶ ಮತ್ತು ನಿರ್ಗಮನ ಸಾಮ್ರಾಜ್ಯಶಾಹಿ ಸರ್ಕಾರದ ಕೈಯಡಿಯಲ್ಲಿ ಬಂತು. ಭಾರತ ಸರ್ಕಾರದ ಕಾಯ್ದೆ-1935 ಒಂದು ಹೆಜ್ಜೆ ಮುಂದೆ ಹೋಗಿ ‘ಹೊರತುಪಡಿಸಿದ ಪ್ರದೇಶ’ ಮತ್ತು ‘ಬಾಗಶಃ ಹೊರತುಪಡಿಸಿದ ಪ್ರದೇಶ’ ಎಂದು ವಿಭಜಿಸಿ ಅದನ್ನು ಭಾರತದ ಶಾಸಕಾಂಗದಿಂದ ಹೊರಗಿರಿಸಿ, ಅದರ ಅಧಿಕಾರವನ್ನು ಪ್ರಾಂತೀಯ ಗವರ್ನರ್‌ ಸುಪರ್ದಿಗೆ ವಹಿಸಿತು.

'ಪೌರತ್ವ ಕಾಯ್ದೆ ಕಟ್ಟುಕತೆಗೆ ಕಿವಿಗೊಡಬೇಡಿ; ಮುಸ್ಲಿಮರಿಗೆ ತೊಂದರೆಯಾಗಲ್ಲ'

ಭೂಮಿ ಖರೀದಿಸುವಂತಿಲ್ಲ

ಸ್ವಾತಂತ್ರ್ಯಾನಂತರವೂ ರಾಷ್ಟ್ರೀಯ ಮತ್ತು ಪ್ರಾಂತೀಯ ರಾಜಕೀಯ ನಾಯಕತ್ವದ ಪ್ರಭಾವವನ್ನು ಕಾಯ್ದುಕೊಳ್ಳುವುದು ಇನ್ನರ್‌ ಲೈನ್‌ ವ್ಯವಸ್ಥೆಯ ಹಿಂದಿನ ಲಾಜಿಕ್‌. ಬಿಎಫ್‌ಇಆರ್‌ ಕಾಯ್ದೆಯು ಈಗಲೂ ಪ್ರಸ್ತುತವಾಗಿದೆ ಎಂದರೆ ಅದಕ್ಕೆ ಕಾರಣ ಆ ಕಾಯ್ದೆಯಲ್ಲಿರುವ ಸೆಕ್ಷನ್‌ 7. ಅದರಲ್ಲಿ, ‘ಕಾಯ್ದೆಯ ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಈ ಜಿಲ್ಲೆಗೆ ಸೇರಿಲ್ಲದ ಯಾವುದೇ ವ್ಯಕ್ತಿಯು ಈ ಪ್ರದೇಶದ ವ್ಯಾಪ್ತಿಯೊಳಗೆ ಯಾವುದೇ ಭೂಮಿ ಖರೀದಿಸುವುದು ಕಾನೂನಾರ್ಹ ಅಲ್ಲ’ ಎಂದು ಉಲ್ಲೇಖಿಸಲಾಗಿದೆ.

ಈ ಪ್ರಕಾರ ನಿಯಮದ ಅನ್ವಯ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಮಿಜೋರಂ ರಾಜ್ಯಗಳಿಗೆ ದೇಶದ ಇತರ ರಾಜ್ಯದವರು ಪ್ರವೇಶ ಮಾಡಬೇಕೆಂದಿದ್ದರೆ ಅನುಮತಿ ಪಡೆಯಬೇಕು. ಜೊತೆಗೆ ಮೂರು ರಾಜ್ಯಗಳ ಆಯಾ ಸ್ಥಳೀಯ ಪ್ರದೇಶದಲ್ಲಿ ಉದ್ಯೋಗ, ಜಮೀನು ಖರೀದಿಗೆ ಸ್ಥಳೀಯರಿಗೆ ಮಾತ್ರ ಅವಕಾಶವಿರುತ್ತದೆ.

ಬುಡಕಟ್ಟು ಜನಾಂಗದ ಭೂಮಿಯು ಹೆಚ್ಚಾಗಿ ಸಾಂಪ್ರದಾಯಿಕ ಕಾನೂನಿನ ವ್ಯಾಪ್ತಿಗೆ ಒಳಪಟ್ಟು ರಕ್ಷಣೆಗೊಳಪಟ್ಟಿವೆ. ಈ ರಾಜ್ಯಗಳ ಬುಡಕಟ್ಟು ಜನಾಂಗದ ಭೂಮಿಯನ್ನು ರಾಜ್ಯ ಸರ್ಕಾರದ ನಿಬಂಧನೆಗಳಿಗೆ ಒಳಪಟ್ಟು, ಬೇರೆ ರಾಜ್ಯದ ಬುಡಕಟ್ಟು ಜನಾಂಗದವರಿಗೆ ಮಾತ್ರ ಮಾರಾಟ ಮಾಡಬಹುದು.

ಇನ್ನು ಅಣೆಕಟ್ಟುಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ವಿಮಾನ ನಿಲ್ದಾಣ ನಿರ್ಮಾಣ ಮತ್ತಿತರೆ ಸಾರ್ವಜನಿಕ ಹಿಸಾಸಕ್ತಿಯಾಧಾರಿತ ಮೂಲಸೌಕರ‍್ಯ ನಿರ್ಮಾಣ ಸಂದರ್ಭದಲ್ಲಿ ಭೂ ಸ್ವಾಧೀನ ಕಾಯ್ದೆಯಡಿ ಪರಿಹಾರ ಹಣ ಒದಗಿಸಿ ಭೂಮಿಯನ್ನು ಪಡೆಯಲಾಗುತ್ತಿದೆ. ಇತ್ತೀಚೆಗೆ ಕೆಲ ರಾಜ್ಯ ಸರ್ಕಾರಗಳು ಖಾಸಗಿ ಹಣ ಹೂಡಿಕೆಗೆ ಭೂಮಿಯನ್ನು ಗುತ್ತಿಗೆಗೆ ನೀಡುತ್ತಿವೆ.

ಪ್ರವಾಸೋದ್ಯಮಕ್ಕೆ ಹೊಡೆತ

ಆಸ್ತಿ ಸ್ವಾಧೀನಕ್ಕೂ ಮೀರಿ ಈಶಾನ್ಯ ಭಾರತದ ಈ ನಿರ್ಬಂಧವನ್ನು ಪ್ರವೇಶಕ್ಕೆ ಸಂಬಂಧಿಸಿದ ನಿರ್ಬಂಧ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಭಾರತೀಯರು ಈ ರಾಜ್ಯಗಳಿಗೆ ಪ್ರವಾಸ ಹೋಗಬೇಕೆಂದರೂ ಎಷ್ಟುಕಾಲದವರೆಗೆ ಇರುತ್ತೇವೆಂದು ತಿಳಿಸಿ ಪರವಾನಗಿ ಪಡೆಯಬೇಕು. ಈ ಪರವಾನಗಿ ಪಡೆಯುವುದು ತ್ರಾಸದಾಯಕವೇನಲ್ಲ. ಆದರೂ ಇದರಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುತ್ತಿದೆ.

ಬುಡಕಟ್ಟು ಜನಾಂಗದ ರಕ್ಷಣೆಗಾಗಿ ಇದ್ದ ಕಾನೂನು ಪ್ರತ್ಯೇಕತೆಯ ಅಸ್ತ್ರವಾಗುತ್ತಿದೆ. ಅದರ ಜೊತೆಗೆ ಅರುಣಾಚಲದಂತಹ ರಾಜ್ಯಗಳಲ್ಲಿ ಇದಕ್ಕೆ ಪರಿಹಾರವಾಗಿ ಇ-ಐಎಲ್‌ಪಿ ಯನ್ನೂ ಜಾರಿ ಮಾಡಿ, ಪರವಾನಗಿ ಪಡೆಯುವ ಜಟಿಲ ಪ್ರಕ್ರಿಯೆಯನ್ನು ಸರಳ ಮಾಡಲಾಗಿದೆ.

ಪಾಕ್ ಹಿಂದೂ ನಿರಾಶ್ರಿತರ ಶಿಬಿರದಲ್ಲಿ ನಾವು: ಬದುಕು-ಬವಣೆಯ ಕತೆ ಕೇಳಿ ನೀವು!

ಸಾಂಪ್ರದಾಯಿಕತೆ ಈಗಲೂ ಜೀವಂತ

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಇನ್ನರ್‌ ಲೈನ್‌ ಪರ್ಮಿಟ್‌ ಹೊಂದಿರುವ ರಾಜ್ಯಗಳು ವಿನಾಯಿತಿ ಪಡೆಯುತ್ತಿರುವುದು ಈ ರಾಜ್ಯಗಳಿಗೆ ರವಾನೆಯಾಗುತ್ತಿರುವ ಪ್ರಮುಖ ರಾಜಕೀಯ ಸಂಕೇತ. ಸುಮಾರು 150 ವರ್ಷಗಳ ಹಿಂದೆ ಸ್ಥಳೀಯ ಜನರ ರಕ್ಷಣೆಗೆ ಬ್ರಿಟಿಷರು ಜಾರಿ ಮಾಡಿದ್ದ ಕಾನೂನು ಈಗ ಸಂಪೂರ್ಣ ವಿಭಿನ್ನ ಕಾರಣಗಳಿಗಾಗಿ ಆಧುನಿಕ ಕಾಲದಲ್ಲಿಯೂ ಸಹ ಅತ್ಯುತ್ತಮ ವ್ಯವಸ್ಥೆಯಾಗಿದೆ. ಈ ಪ್ರದೇಶದ ವಿಶಿಷ್ಟಭಾಷಾ ಮತ್ತು ಸಾಂಸ್ಕೃತಿಕ ಹೆಗ್ಗುರುತನ್ನು ಕಾನೂನಿನಿಂದ ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ.

ಈ ಪ್ರದೇಶದ ನಿವಾಸಿಗಳು ಬುಡಕಟ್ಟು ಜನಾಂಗದವರಲ್ಲ ಎಂಬ ವಾದವೂ ಇದೆ. ಆದರೆ ಭಾರತದಿಂದ ಪ್ರತ್ಯೇಕವಾಗಿರುವ ಗ್ರಾಮೀಣ ಈಶಾನ್ಯವು ಮುಂದುವರೆದಿರುವ ಇತರ ಪ್ರದೇಶಗಳಿಗೆ ತದ್ವಿರುದ್ಧವಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಈಶಾನ್ಯ ರಾಜ್ಯಗಳ ಬುಡಕಟ್ಟು ಸಮುದಾಯದ ಜೀವನದ ಸರಳತೆಯು ಹಳ್ಳಿಗಳಲ್ಲಿ ಹಾಗೇ ಉಳಿದಿದೆ. ಇವತ್ತಿಗೂ ಅಲ್ಲಿನ ಜನಜೀವನ ಸಾಂಪ್ರದಾಯಿಕ ಸಂಗತಿಗಳ ಸುತ್ತ ಸುತ್ತುತ್ತಿದೆ. ಈಶಾನ್ಯದ ಬೆಟ್ಟಗಳನ್ನು ಬಯಲು ಸೀಮೆಯ ಜನರು ವ್ಯಾಪಾರದ ದುರಾಸೆಯಿಂದ ನೋಡುತ್ತಿದ್ದರು. ಇನ್ನರ್‌ ಲೈನ್‌ ಪರ್ಮಿಟ್‌ ವ್ಯವಸ್ಥೆಯು ಅದಕ್ಕೆ ತಡೆಯೊಡ್ಡಿದೆ.

ಈಶಾನ್ಯವು ಭಾರತದ ಉಳಿದ ಭಾಗಗಳಿಗಿಂತ ಅನನ್ಯವಾಗಿರುವ ಸಂಸ್ಕೃತಿಗಳು ಮತ್ತು ಜನಾಂಗಗಳ ಒಂದು ಹೂವಿನ ಕುಂಡ. ಒಂದು ರಾಷ್ಟ್ರವಾಗಿ, ದೋಷಯುಕ್ತ ನಾಗರಿಕತೆಯ ನಿಯಮಗಳನ್ನು ಈ ಪ್ರದೇಶ ಮೇಲೆ ಹೇರದೆ, ಇಲ್ಲಿನ ಜನರು ತಮ್ಮದೇ ಆದ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ಧಿ ಹೊಂದಲು ಅವಕಾಶ ನೀಡುವುದು ನಮ್ಮ ಕರ್ತವ್ಯ.

-  ಆಶಿಶ್‌ ಕುಂದ್ರಾ,

ಜನರಲ್‌ ಅಡ್ಮಿನಿಸ್ಪ್ರೇಶನ್‌ ಇಲಾಖೆ ಆಯುಕ್ತ, ಮಿಜೋರಂ