ದೇಶ ಭಕ್ತಿಗಲ್ಲ, ದೇಶವನ್ನು ದೋಚಲು 'ಇಂಡಿಯಾ' ಹೆಸರು ಬಳಕೆ: ಮೋದಿ
2024ರ ಲೋಕಸಭೆ ಚುನಾವಣೆಯನ್ನು ಒಗ್ಗೂಡಿ ಎದುರಿಸಲು ಪ್ರತಿಪಕ್ಷಗಳು ಬೆಂಗಳೂರಿನಲ್ಲಿ ಇತ್ತೀಚೆಗೆ ರಚನೆ ಮಾಡಿಕೊಂಡಿರುವ ‘ಇಂಡಿಯಾ’ ಮೈತ್ರಿಕೂಟದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಹರಿಹಾಯ್ದಿದ್ದಾರೆ.
ಸಿಕರ್: 2024ರ ಲೋಕಸಭೆ ಚುನಾವಣೆಯನ್ನು ಒಗ್ಗೂಡಿ ಎದುರಿಸಲು ಪ್ರತಿಪಕ್ಷಗಳು ಬೆಂಗಳೂರಿನಲ್ಲಿ ಇತ್ತೀಚೆಗೆ ರಚನೆ ಮಾಡಿಕೊಂಡಿರುವ ‘ಇಂಡಿಯಾ’ ಮೈತ್ರಿಕೂಟದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ದೇಶಭಕ್ತಿಯನ್ನು ತೋರಿಸುವ ಉದ್ದೇಶದಿಂದ ‘ಇಂಡಿಯಾ’ ಹೆಸರು ಇಟ್ಟಿಲ್ಲ. ದೇಶವನ್ನು ದೋಚುವ ದುರುದ್ದೇಶದಿಂದ ಆ ಹೆಸರು ಬಳಸಿಕೊಳ್ಳಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ (Assembly Election) ನಡೆಯಲಿರುವ ರಾಜಸ್ಥಾನದ (Rajasthan) ಸಿಕರ್‌ನಲ್ಲಿ ರಾರಯಲಿ ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ವಂಚಕ ಕಂಪನಿಗಳು ಈ ಹಿಂದೆ ಹೆಸರು ಬದಲಾವಣೆ ಮಾಡಿಕೊಳ್ಳುತ್ತಿದ್ದವು. ಅದೇ ರೀತಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಹೆಸರನ್ನು ಬದಲಿಸಿಕೊಂಡಿವೆ. ಕಾಂಗ್ರೆಸ್ ಎಂಬುದು ದಿಕ್ಕು ದಿಸೆ ಇಲ್ಲದ ಪಕ್ಷವಾಗಿದೆ ಎಂದು ಹರಿಹಾಯ್ದರು. ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಘೋಷಣೆ ಹಾಕಲಾಗಿತ್ತು. ಆಗ ಜನರು ಕಾಂಗ್ರೆಸ್ ಪಕ್ಷವನ್ನು ಬುಡಮೇಲು ಮಾಡಿದ್ದರು ಎಂದರು.
ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಅವರ ಆಧಾರ್ ಕಾರ್ಡ್‌ಗಳನ್ನೇ ತಿರುಚಿ ದುರುಪಯೋಗ ಮಾಡ್ಕೊಂಡ ಭೂಪ!
ತಮ್ಮ ಹಾಗೂ ಯುಪಿಎ ಸರ್ಕಾರದ (UPA Govt) ಹಳೆಯ ಕೆಲಸಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ಇಂಡಿಯಾ ಎಂಬ ಲೇಬಲ್ ಬಳಸಲು ಹೊರಟಿದ್ದಾರೆ. ಅವರಿಗೆ ನಿಜಕ್ಕೂ ಇಂಡಿಯಾ ಬಗ್ಗೆ ಕಾಳಜಿ ಇದ್ದಿದ್ದರೆ, ಭಾರತದ ವಿಚಾರದಲ್ಲಿ ಮಧ್ಯಪ್ರವೇಶಿಸಲು ವಿದೇಶಿಗರನ್ನು ಕೋರುತ್ತಿದ್ದರೇ ಎಂದು ತರಾಟೆಗೆ ತೆಗೆದುಕೊಂಡರು. ಮಹಾತ್ಮ ಗಾಂಧೀಜಿ ಅವರು ಭಾರತ ಬಿಟ್ಟು ತೊಲಗಿ ಎಂದು ಹೇಳಿದ್ದರು. ಇಂದು ಭ್ರಷ್ಟಾಚಾರ, ಪರಿವಾರವಾದ, ತುಷ್ಟೀಕರಣಗಳನ್ನು ಭಾರತ ಬಿಟ್ಟು ತೊಲಗಿ ಎಂದು ಹೇಳಬೇಕಾಗಿದೆ. ಕ್ವಿಟ್ ಇಂಡಿಯಾ ಎಂಬುದು ದೇಶವನ್ನು ರಕ್ಷಿಸಲಿದೆ, ನಮ್ಮ ದೇಶ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಈಸ್ಟ್ ಇಂಡಿಯಾ, ಪಿಎಫ್‌ಐ, ಇಂಡಿಯನ್ ಮುಜಾಹಿದೀನ್‌ನಲ್ಲೂ ‘ಇಂಡಿಯಾ’ ಇದೆ ಎನ್ನುವ ಮೂಲಕ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಟೀಕಿಸಿದ್ದರು.
1.25 ಲಕ್ಷ ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ನಡೆದ ಸಮಾರಂಭದಲ್ಲಿ ದೇಶದ 1.25 ಲಕ್ಷ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ ಚಾಲನೆ ನೀಡಿದರು ಹಾಗೂ 8.5 ಕೋಟಿ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ 17,000 ಕೋಟಿ ರು.ಗಳನ್ನು ಬಿಡುಗಡೆ ಮಾಡಿದರು. ಇದೇ ವೇಳೆ, ಬೇವು ಲೇಪಿತ ಯೂರಿಯಾಗಿಂತ ಹೆಚ್ಚು ಮಿತವ್ಯಕರವಾದ ಹಾಗೂ ಶಕ್ತಿಶಾಲಿಯಾದ ಸಲ್ಫರ್ ಲೇಪಿತ ಯೂರಿಯಾ ಗೋಲ್ಡ್ ರಸಗೊಬ್ಬರ ಬಿಡುಗಡೆ ಮಾಡಿದರು. ಮಣ್ಣಿನಲ್ಲಿ ಸಲ್ಫರ್ ಕೊರತೆ ಇದ್ದರೆ ಅದನ್ನು ಈ ಗೊಬ್ಬರ ನೀಗಿಸಲಿದೆ.
ಈ ವೇಳೆ ಮಾತನಾಡಿದ ಅವರು, ಈ ಕಿಸಾನ್ ಕೇಂದ್ರಗಳಲ್ಲಿ ರಸಗೊಬ್ಬರ ಸಹಿತ ಅನೇಕ ಸವಲತ್ತುಗಳು ಒಂದೇ ಸೂರಿನಲ್ಲಿ ಲಭಿಸುತ್ತವೆ. ರಸಗೊಬ್ಬರ ದರ ಭಾರತದಲ್ಲಿ ತೀರಾ ಅಗ್ಗವಾಗಿದೆ. ಭಾರತದಲ್ಲಿ ಯೂರಿಯದ ಒಂದು ಚೀಲಜ್ಜೆ 266 ರು. ದರ ಇದ್ದರೆ ಪಾಕ್‌ನಲ್ಲಿ 800 ರು., ಬಾಂಗ್ಲಾದೇಶದಲ್ಲಿ 720 ರು. ಹಾಗೂ ಚೀನಾದಲ್ಲಿ 2100 ರು. ಇದೆ. ಗ್ರಾಮ ಅಭಿವೃದ್ಧಿ ಆದರೆ ಮಾತ್ರ ದೇಶ ಅಭಿವೃದ್ಧಿ ಸಾಧ್ಯ. ಹೀಗಾಗಿ ಗ್ರಾಮದಲ್ಲೇ ಎಲ್ಲ ಸವಲತ್ತು ಸಿಗುವಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು. ಕಿಸಾನ್ ಕೇಂದ್ರಗಳಲ್ಲಿ ರಸಗೊಬ್ಬರ ಮಾತ್ರವಲ್ಲ, ಸರ್ಕಾರದ ವಿವಿಧ ಯೋಜನೆಗಳಿಗೆ ಅಲ್ಲಿ ಅರ್ಜಿ ಕೂಡ ಹಾಕಬಹುದಾಗಿದೆ.