ಸನಾತನ ಪದದ ಅರ್ಥವೂ ತಿಳಿಯದ ಮೂರ್ಖರ ಕೈಗೆ ಆಡಳಿತ ಸಿಕ್ಕರೆ ಮುಂದಿನ ಪೀಳಿಗೆಯ ಗತಿ ಏನು?

ಸನಾತನ ಧರ್ಮವೆಂದರೆ ಹೆಚ್ಚು ಕಾಲ ಉಳಿಯುವಂಥದ್ದು ಎಂದರ್ಥ. ಆದರೆ, ನಮ್ಮ ತನವನ್ನು ತಪ್ಪಾಗಿ ಅರ್ಥೈಸಿಕೊಂಡು ಇದೀಗ ಹೇಗೆ ಅಪಾರ್ಥ ಪಡೆದುಕೊಳ್ಳುತ್ತಿದೆ ಎಂದು ಇಲ್ಲಿ ವಿವರಿಸಲಾಗಿದೆ.

The Misinterpretation of Sanatana Dharma by Politicians and Its True Meaning ckm

ಶ್ರೀಕಂಠ ಶಾಸ್ತ್ರಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಒಂದು ಮನೆಯಲ್ಲಿ ಅಪ್ಪ ಮಾಧವ, ಅಮ್ಮ ಮಾಧವೀ ಇರ್ತಾರೆ. ಅವರಿಗೊಬ್ಬ ಮಗ ಶಂಕರ, ಸೊಸೆ ಗೌರೀ. ಅವರಿಬ್ಬರಿಗೊಬ್ಬ ಮಗ ಶಕ್ತಿಧರ. ಕೆಲ ವರ್ಷಗಳು ಕಳೆದ ಮೇಲೆ ಈ ಶಕ್ತಿಧರನಿಗೆ ಮದುವೆಯಾಗಿ ಅವನ ಮಗ ವಿದ್ಯಾಧರನಿಗೆ ಕುಟುಂಬ ಪರಂಪರೆಯಿಂದ ಬಂದ ಯಾವುದೋ ಒಂದು ಮಹಾನ್ ವಿದ್ಯೆಯ ಕೌಶಲ್ಯಕ್ಕೆ ಅಂತಾರಾಷ್ಟ್ರೀಯ ಪುರಸ್ಕಾರ ದೊರೆಯುತ್ತದೆ. ಇದರಿಂದ ಪ್ರಭಾವಿತನಾದ ಒಬ್ಬ ಜರ್ಮನ್ ದೇಶದ ಮಿಲ್ಲರ್ ಎಂಬಾತ ಭಾರತಕ್ಕೆ ಬಂದು ಈ ವಿದ್ಯಾಧರನ ಕುಟುಂಬದ ಹಿನ್ನೆಲೆ ಅವರ ಮುತ್ತಾತ ಮಾಧವನಿಂದ ಬಳುವಳಿಯಾಗಿ ಬಂದ ವಿದ್ಯೆ ಅವರ ಹಿನ್ನೆಲೆ ಸಂಸಾರ ಇತ್ಯಾದಿಗಳ ಕುರಿತಾದ ದೊಡ್ಡ ಗ್ರಂಥವೊಂದನ್ನ ಬರೆದು ಪ್ರಕಟ ಮಾಡುತ್ತಾನೆ. ಅವನು ಬರೆದ ಕೃತಿಯೇ ಈ ಹೊತ್ತಿಗೂ ಇಡೀ ಪ್ರಪಂಚಕ್ಕೆ ಮೂಲಾಧಾರಗ್ರಂಥವಾಗಿ ಉಳಿದಿದೆ.

ಇದಾದ ಎಷ್ಟೋ ಶತಮಾನಗಳ ನಂತರ ಅದೇ ವಿದ್ಯಾಧರ ಕುಟುಂಬದಲ್ಲಿ ಜನಿಸಿದ ವಿವೇಕಧರ ಎಂಬುವವನು ಒಮ್ಮೆ ಪುಸ್ತಕ ಖರೀದಿಗೆಂದು ಅಂಗಡಿಗೆ ಹೋದಾಗ ಅಲ್ಲಿ ಜರ್ಮನ್ ದೇಶದ ಮಿಲ್ಲರ್ ಬರೆದ ತನ್ನ ಮನೆತನದ ಪುಸ್ತಕ ಸಿಗುತ್ತದೆ. ಓದಿದವನಿಗೆ ದು:ಖ, ಬೇಸರ, ಕೋಪ ಎಲ್ಲವೂ ಒಮ್ಮೆಲೆ ಸ್ಫೋಟವಾಗುತ್ತದೆ. ಕಾರಣ ಇಡೀ ಪುಸ್ತಕದಲ್ಲಿ ಸತ್ಯದ ವಿಷಯವೇ ಇಲ್ಲ. ಎಲ್ಲವೂ ತಪ್ಪು ತಪ್ಪಾಗಿ ಬರೆದು ಪ್ರಕಟ ಮಾಡಿದ್ದಾನೆ. ಮಾಧವ ಎಂಬುವವನನ್ನ ಮಾಢವ ಎಂದೂ ಶಂಕರನನ್ನು ಸಾಂಕರನೆಂದೂ ಶಕ್ತಿಧರನನ್ನು ಷಟ್ಕಿಧರ್ ಎಂದೂ ಅವರ ಕುಟುಂಬದ ವಿದ್ಯೆಯ ಹೆಸರನ್ನೇ ಅದಲು-ಬದಲು ಮಾಡಿಟ್ಟು ಸರ್ವವನ್ನೂ ತಪ್ಪಾಗಿ ಪ್ರಕಟಿಸಿಬಿಟ್ಟಿದ್ದಾನೆ. ಕಾರಣ : ಬರೆದವನಿಗೆ ಇಲ್ಲಿನ ಭಾಷೆ ಗೊತ್ತಿಲ್ಲ, ಇಲ್ಲಿನ ಸೊಗಡು ತಿಳಿದಿಲ್ಲ, ವಿದ್ಯೆಯ ಮೂಲದ ಅರಿವಿಲ್ಲ. ನೆಲ, ಜಲ, ಭಾಷೆಯ ನಾಡಿಯನ್ನೇ ಅರಿಯದವನಿಗೆ ಸತ್ಯದ ಬರಹ ಹೇಗೆ ಸಾಧ್ಯ? ನಿಜವಾಗಿ ಶಕ್ತಿಧರನ ಬಗ್ಗೆ ತಿಳಿಯಬೇಕಾದರೆ ಅವನ ಕುಟುಂಬದವರನ್ನ, ಅವರ ಮನೆತನದವರನ್ನ ಕೇಳಿ ತಿಳಿಯಬೇಕಲ್ಲವೇ? ಇದರ ಗಂಧ-ಗಾಳಿಯ ಸೋಂಕೇ ಇಲ್ಲದ ಅನ್ಯ ದೇಶೀಯರ ಬಳಿ ಹೋಗಿ ಇಲ್ಲಿನವರ ಬಗ್ಗೆ ಕೇಳಿದರೆ, ಅಥವಾ ಅವರು ಬರೆದುಕೊಟ್ಟದ್ದನ್ನೇ ಸತ್ಯವೆಂದು ನಂಬಿದರೆ ಅದಕ್ಕೆ ಅರ್ಥವಿದೆಯೇ?

'ಸನಾತನ ಧರ್ಮ ಹಿಂದೆಯೂ ಇತ್ತು ಈಗಲೂ ಇದೆ, ಮುಂದೆಯೂ ಇರುತ್ತದೆ'

ಪಾಪ ಈಗ ಈ ವಿವೇಕಧರ ಎಲ್ಲಾದರೂ ಸಭೆಗಳಿಗೆ ಹೋಗಿ ಶಕ್ತಿಧರ ಎಂದು ಕಥೆ ಪ್ರಾರಂಭಿಸಿದರೆ ಕೇಳಿದ ಜನರೇ ಹೇಳುತ್ತಿದ್ದಾರೆ ಶಕ್ತಿಧರ ಅಲ್ಲಾ ಅದು ಷಟ್ಕಿಧರ್ ಅಂತ. ತಪ್ಪು ಹೇಳೀ ಹೇಳಿ ಕೇಳೀ ಕೇಳೀ ಈಗ ತಪ್ಪೇ ಜಗಜ್ಜಾಹೀರಾಗಿದೆ. ಅದನ್ನು ಸರಿಪಡಿಸಲು. ಅವನ ಕುಟುಂಬದವರು ಎಷ್ಟು ತಲೆಚಚ್ಚಿಕೊಳ್ಳುತ್ತಿದ್ದಾರೋ! ಅದೆಷ್ಟು ಹೋರಾಡುತ್ತಿದ್ದಾರೋ!

ಭಾರತೀಯ ಪರಂಪರೆಗೂ ಈ ಸ್ಥಿತಿ ಈಗ!
ಯಾಕೆ ಈ ಕಥೆ ಹೇಳಿದೆನೆಂದರೆ ನಮ್ಮ ಭಾರತೀಯ ಸಂಸ್ಕೃತಿ ಭಾರತೀಯ ಪರಂಪರೆ, ಪ್ರಾಚೀನತೆಗೆ ಈಗ ಇಂಥದ್ದೇ ಪರಿಸ್ಥಿತಿ ಬಂದಿದೆ. ಸತ್ಯ ಮರೆಯಾಗಿದೆ. ಈಗ ಜರ್ಮನ್ನವರೋ, ಗ್ರೀಸಿನವರೋ ಬರೆದ, ವ್ಯಾಖ್ಯಾನಿಸಿದ ಪುಸ್ತಕಗಳನ್ನಿಟ್ಟುಕೊಂಡು ನಮ್ಮ ಭಾಷೆಗೆ ಅರ್ಥ ಹುಡುಕುವ ದಾರಿದ್ರ್ಯ ಬಂದಿದೆ. ನಾಗರೀಕತೆ ಎಂಬುದರ ಅರ್ಥಬೇಕಾ ಮ್ಯಾಕ್ಸ್ ಮುಲ್ಲರ್ ನ ವ್ಯಾಖ್ಯಾನ ಹುಡುಕುತ್ತೇವೆ, ಸನಾತನ ಎಂಬುದರ ಅರ್ಥಬೇಕಾ ಉದಯ ನಿಧಿ ಹೇಳಿದ್ದೇ ತಲೆಯಲ್ಲಿ ಉಳಿಯುತ್ತದೆ. ಸನಾತನ ಅಂದರೆ ಅದು ಸದಾಕಾಲ ಇರುವುದು ಎಂಬ ಸಣ್ಣ ಅರ್ಥವೂ ತಿಳಿಯದ ಮೂರ್ಖರ ಕೈಗೆ ಆಡಳಿತ ಸಿಕ್ಕಿಬಿಟ್ಟರೆ ಮುಂದಿನ ಪೀಳಿಗೆಯ ಗತಿ ಏನು? ಸತ್ಯವನ್ನೇ ತಿಳಿಯದ ಮೂರ್ಖರಿಂದ ದೇಶದ ಉದ್ಧಾರವಾದರೂ ಹೇಗೆ ಸಾಧ್ಯ? ನಮ್ಮ ದೇಶ, ನೆಲ, ಭಾಷೆ, ವೇದ, ಪುರಾಣ, ರಾಮಾಯಣ, ಮಹಾಭಾರತ ಇದ್ಯಾವುದೂ ನಮ್ಮ ಹೃದಯದೊಳಗೆ ಇಳಿಯದೇ ಹೋದರೆ ದೇಶವನ್ನು ಪ್ರೀತಿಸುವುದಾದರೂ ಹೇಗೆ? ನಮ್ಮವರನ್ನು ಗೌರಿವಿಸುವುದಾದರೂ ಹೇಗೆ? ತಂದೆ-ತಾಯಿಗಳನ್ನೇ ಸಂಶಯಿಸುವವರು ಮಕ್ಕಳಾದರೂ ಹೌದಾ? 

ಈ ಹೊತ್ತಿಗೂ ಈ ಆರ್ಯ, ದ್ರಾವಿಡ, ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆ ಇತ್ಯಾದಿಗಳ ಸರಿಯಾದ ಸ್ಪಷ್ಟನೆಯೂ ನಮಗಿಲ್ಲ. ನೀವು ಈಗ ಯಾವುದೇ ಇತಿಹಾಸ ಪುಸ್ತಕವನ್ನು ಓದಿ ಭರತದ ಜನಾಂಗಗಳ ಕುರಿತಾದ ಸಂಶೋಧನೆ (Research) ಬೇಕು ಅಂದ್ರೆ ರಿಸ್ಲೆ ಬರೆದದ್ದನ್ನ ಓದಬೇಕು. ಡಾ. ಐಕ್ಲೆಡ್ ಬರೆದ ಸಂಶೋಧನಾ ಪುಸ್ತಕಗಳನ್ನ ಓದಬೇಕು. ದಕ್ಷಿಣ ರಷ್ಯಾಭಾಗದಿಂದ ಹೊರಟು ಟ್ರೋಜನ್ ಸಂಸ್ಕೃತಿಯನ್ನ ನಾಶ ಮಾಡಿ ಪಶ್ಚಿಮದಲ್ಲಿ ಡಾನ್ಯೂಬ್ ಮಾರ್ಗವಾಗಿ ಹೋಗಿ ಯೂರೋಪಿನ ಪ್ರಾಚೀನ ಜನರನ್ನ ಗೆದ್ದು ಥೆಸಲಿ, ಮ್ಯಾಸಿಡೋನಿಯ ಮೂಲಕ ಗ್ರೀಸ್ ದೇಶವನ್ನು ಆಕ್ರಮಿಸಿ ಮಿನೋವನ್ ಮೈಕೆನಿಯನ್ ಸಂಸ್ಕೃತಿಯನ್ನು ಹಾಳುಮಾಡಿ ಪೂರ್ವದಲ್ಲಿ ಆನಟೋಲಿಯ, ಸಿರಿಯ, ಇರಾನ್ ಮಾರ್ಗವಾಗಿ ಬಂದು ಪಾಮಿರ್ ಹಿಂದೂಕುಷ್ ಶ್ರೇಣಿಗಳನ್ನು ದಾಟಿ ಪಂಜಾಬ್ ಹಾಗೂ ಸಿಂಧೂ ಪ್ರಾಂತ್ಯವನ್ನ ಕ್ರಿ.ಪೂ. 1500 ರಲ್ಲಿ ಪ್ರವೇಶಿಸಿ ಸಿಂಧೂ ಸಂಸ್ಕೃತಿಯನ್ನು ನಾಶಮಾಡಿ, ದ್ರಾವಿಡರನ್ನ ದಕ್ಷಿಣಕ್ಕೆ ಓಡಿಸಿ, ಸಾಮ್ರಾಜ್ಯಗಳನ್ನ ಸ್ಥಾಪಿಸಿದರು ಅಂತ ಪಾಶ್ಚಾತ್ಯ ವಿದ್ವಾಂಸರ ಅಭಿಪ್ರಾಯ. ಇದಕ್ಕೆ ಅವರು ಇಟ್ಟ ಹೆಸರುಗಳೇನು ಗೊತ್ತಾ? ಇಂಡೋ ಯುರೋಪಿಯನ್ (Indo European), ಇಂಡೋ ಜರ್ಮಾನಿಕ್, ಇಂಡೋ ಇರಾನಿಯನ್, ಇತ್ಯಾದಿ ಇಷ್ಟಾನುಸಾರ ನಾಮಕರಣ ಮಾಡಿದರು. ಪ್ರಾಚೀನ ಇರಾನಿಯನ್ನರೇ ಆರ್ಯನ್ನರು. ಅವರಿಂದ ಓಡಿಸಲ್ಪಟ್ಟವರೇ ದ್ರಾವಿಡರು ಅಂತನ್ನುವ ಅನ್ಯ ದೇಶದವರು ಬರೆದ ಗ್ರಂಥಗಳನ್ನೇ ಆಧಾರವಾಗಿಟ್ಟುಕೊಂಡು ಈ ಹೊತ್ತಿಗೂ ಅದನ್ನೇ ನಂಬಿ ಮೂಢರಾಗಿರುವ ನಾವು ಸತ್ಯದ ಇತಿಹಾಸವನ್ನು ಒಪ್ಪಿಕೊಳ್ಳುವುದು ಎಂದಿಗೆ?

ಪ್ರತಿ ಮರವೂ ದೇವರ ವಾಸಸ್ಥಾನ, ಯಾವ ಮರದಲ್ಲಿ ಯಾವ ದೇವರಿದ್ದಾನೆ?

ನಮ್ಮ ಭಾರತದ ಅತ್ಯಂತ ಪ್ರಾಚೀನ ಸಾಹಿತ್ಯವೆಂದರೆ ಅದು ಋಗ್ವೇದ. ಋಷಿಗಳು ವೇದಗಳನ್ನು ತಪಸ್ಸಿನಿಂದ ಕಂಡುಕೊಂಡ ಸತ್ಯಗಳು. ಋಷಿಗಳೇ ನಮ್ಮ ಮೂಲಜರು. ಎಸ್ ಶ್ರೀಕಂಠ ಶಾಸ್ತ್ರಿಗಳು ಕೊಡುವ ಸರಸ್ವತೀ ದೃಷದ್ವತ್ಯೋರ್ದೇ ವನದ್ಯೋಯದಂತರಂ ತಂ ದೇವ ನಿರ್ಮಿತಂ ದೇಶಂ ಬ್ರಹ್ಮಾವರ್ತ ಪ್ರಚಕ್ಷತೇ ಎಂಬ ಆಧಾರದಂತೆ ನಮ್ಮ ಋಷಿಗಳು ಇದ್ದದ್ದು ಬಹ್ಮಾವರ್ತದ ಪ್ರದೇಶದಲ್ಲಿ. ಈಗಿನ ಗಂಗಾ-ಯಮುನಾ ಪ್ರಾಂತ್ಯದಲ್ಲಿ. ಗಂಗಾ, ಯಮುನಾ, ಸರಸ್ವತೀ, ಶತದ್ರು, ಪರುಷ್ಣೀ, ಅಸಿಕ್ನೀ ಮರುದ್ಪೃದಾ, ವಿಶಸ್ತಾ , ಆರ್ಜೀಕೀಯ ಸುಷೋಮಾ ಎಂಬುದಾಗಿ ಪೂರ್ವದಿಂದ ಪಶ್ಚಿಮದವರೆಗಿನ ನದೀ ಪ್ರಾಂತ್ಯಗಳಲ್ಲಿ ಬದುಕಿ ಬಾಳಿದವರು. ಎಲ್ಲಿಂದಲೋ ಬಂದು ಬಾಳಿದವರಲ್ಲ ನಮ್ಮವರು ಎಂಬುದಕ್ಕೆ ಎಸ್ ಶ್ರೀಕಂಠ ಶಾಸ್ತ್ರಿಗಳ ಭಾರತೀಯ ಸಂಸ್ಕೃತಿ ಎಂಬ ಒಂದು ಪುಸ್ತಕವನ್ನು ಓದಿದರೆ ಸ್ಪಷ್ಟ ಇತಿಹಾಸವೇನು ಎಂಬುದರ ಸಂಪೂರ್ಣ ಪರಿಚಯವಾಗುತ್ತದೆ.

ಎಸ್ ಶ್ರೀಕಂಠ ಶಾಸ್ತ್ರೀಗಳು, ಜದುನಾಥ್ ಸರ್ಕಾರ್,  ಮಜುಮ್ದಾರ್, ಸುರೇಂದ್ರನಾಥ್ ದಾಸಗುಪ್ತ ಇಂಥ ಮಹನೀಯರ ಸಂಶೋಧನಾ ಗ್ರಂಥಗಳನ್ನು ಓದದಿದ್ದರೆ ನಿಮಗೆ ಸತ್ಯದರ್ಶನವಾಗುವುದಾದರೂ ಎಂದಿಗೆ? ಇವುಗಳನ್ನು ಪಠ್ಯಕ್ಕೆ ಅಳವಡಿಸದಿದ್ದರೆ ನಮ್ಮ ಮಕ್ಕಳಿಗೆ ಮುಂದಿನ ಪೀಳಿಗೆಗೆ ಸನಾತನ, ಸಂಸ್ಕೃತಿ, ನಾಗರೀಕತೆ, ವರ್ಣ ವ್ಯವಸ್ಥೆ, ಈ ಶಬ್ದಗಳ ಅರ್ಥವಾದರೂ ಸರಿಯಾಗಿ ತಿಳಿಯುವುದು ಹೇಗೆ? ಯಾರೋ ಮೂರ್ಖರ ಮಾತುಗಳನ್ನು ಖಂಡಿಸುವುದಕ್ಕಿಂತ ಸತ್ಯವನ್ನು ಹೃದಯಕ್ಕೆ ತುಂಬಿಕೊಂಡು ಹುಟ್ಟಿದ ಮಣ್ಣಿನ ಗೌರವವನ್ನೂ, ನಮ್ಮ ಮನೆಯ ಹಿರಿಯರ ಹಿರಿಮೆಯನ್ನು ಕಾಪಾಡುವುದು ನಿಜವಾದ ಸತ್ಪ್ರಜೆಯ ಲಕ್ಷಣವಲ್ಲವೇ?
 

Latest Videos
Follow Us:
Download App:
  • android
  • ios