ಕೊಪ್ಪ(ಫೆ.10): ಜ್ಞಾನೇಂದ್ರಿಯ, ಕರ್ಮೇಂದ್ರಿಯಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ನಮ್ಮಲ್ಲಿದ್ದರೂ ಸಮಾಧಾನ, ಶಾಂತಿ, ನೆಮ್ಮದಿ, ಪ್ರಶಾಂತತೆಯಾಗಲಿ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಸತ್ಯದ ಹುಡುಕಾಟದಲ್ಲಿ ನಮ್ಮನ್ನೇ ನಾವು ಹುಡುಕಿಕೊಳ್ಳಬೇಕಾಗುತ್ತದೆ. ಸನಾತನ ಧರ್ಮ ಹಿಂದೆಯೂ ಇತ್ತು ಈಗಲೂ ಇದೆ, ಮುಂದೆಯೂ ಇರುತ್ತದೆ ಎಂದು ಆರ್‌ಎಸ್‌ಎಸ್‌ ಸರಸಂಘ ಚಾಲಕ್‌ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಭಾನುವಾರ ತಾಲೂಕಿನ ಹರಿಹರಪುರ ಸಮೀಪದ ಪ್ರಬೋಧಿನೀ ಗುರುಕುಲದಲ್ಲಿ ಆಯೋಜನೆಗೊಂಡ ಅರ್ಧಮಂಡಲೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮನ್ನು 500 ವರ್ಷ ಮೊಗಲರು, 200 ವರ್ಷ ಆಂಗ್ಲರು ಆಳಿದರೂ ಶಿಕ್ಷಣ ಪದ್ಧತಿ ನಾಶವಾಗಿಲ್ಲ. ವೇದ ಇನ್ನೂ ಉಳಿದುಕೊಂಡಿದೆ. 5000 ವರ್ಷಗಳ ಹಿಂದೆ ಇದ್ದ ಸನಾತನ ಸಂಸ್ಕೃತಿ ಈಗಲೂ ಆಚರಣೆಯಲ್ಲಿದೆ ಎಂದರೆ ಸನಾತನ ಧರ್ಮ ಎಂದೂ ಅಳಿಯುವುದಿಲ್ಲ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೊರಗಡೆ ಜಗತ್ತಿನಲ್ಲಿ ಆಗಾಗ್ಗ ಹೊಸ ಪರಿವರ್ತನೆಗಳಾಗುತ್ತಿರುತ್ತವೆ. ಕೆಲವರು ಬದಲಾವಣೆಯ ಸುತ್ತ ಅನ್ವೇಷಣೆ ಮಾಡುತ್ತಿರುತ್ತಾರೆ. ಪರಿವರ್ತನೆ ಆಗುತ್ತಿರುವಂತೆ ಅನ್ವೇಷಣೆ  ನಿಲ್ಲಿಸಿ ಬಿಡುತ್ತಾರೆ. ಸತ್ಯಾನ್ವೇಷಣೆ ಮಾಡುವವರಿಗೆ ಪರಿವರ್ತನಾಶೀಲ ಜೀವಂತ ಜಗತ್ತಿನಲ್ಲಿ ಸನಾತನವಾಗಿ ಉಳಿಯುವುದು ಒಂದೇ ವಿಚಾರವಾಗಿದೆ ಎಂದು ಗೋಚರವಾದರೂ ಸತ್ಯಾನ್ವೇಷಣೆಯನ್ನು ಮುಂದುವರಿಸುತ್ತಾರೆ. ಅಂಥವರ ಹುಡುಕಾಟ ಪೂರ್ಣವಾಗುತ್ತದೆ. ನಮ್ಮ ವಿಚಾರವನ್ನೇ ಒಪ್ಪಿಕೊಳ್ಳಬೇಕು ಎಂದು ರಾಕ್ಷಸರು ಬಯಸುತ್ತಿದ್ದರೆ, ದೇವತೆಗಳು ಎಲ್ಲರ ರಕ್ಷಣೆಯನ್ನು ಬಯಸುತ್ತಿದ್ದರು ಎಂದರು.

ಮಾಹಿತಿ ತಂತ್ರಜ್ಞಾನಕ್ಕಾಗಿ ವಿದ್ಯೆ ಎಂದು ತಿಳಿದ ಅನೇಕರು ಅಗತ್ಯತೆಗಿಂತ ಹೆಚ್ಚು ತಂತ್ರಜ್ಞಾನ ಬಳಸುತ್ತ ಅದರ ಗುಲಾಮರಾಗುತ್ತಿದ್ದಾರೆ. ಗುರುಕುಲ ವಿದ್ಯೆಯಿಂದ ವಿಚಾರವಂತ ಮನಸ್ಸುಗಳು ಸೃಷ್ಠಿಯಾಗುತ್ತಿದ್ದರೆ ಈಗ ವಿದ್ಯೆಯಿಂದ ವಿವಾದಗಳಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ತ್ರಿಮೂರ್ತಿಗಳು ತಮ್ಮ ಶಕ್ತಿಯಿಂದ ಶಕ್ತಿ ದೇವತೆಯನ್ನು ಸೃಷ್ಠಿಸಿ ಮಾತೃಸ್ವರೂಪಿಯಾಗಿ ಕಾಣುತ್ತಿದ್ದರು. ರಾಕ್ಷಸ ಕುಲದ ಮಹಿಷಾಸುರನು ತನ್ನ ಶಕ್ತಿಯನ್ನು ಪತ್ನಿಯ ರೂಪವಾಗಿಸಿ ದಾಸಿಯಂತೆ ಕಾಣುತ್ತಿದ್ದನು. ಪಡೆದ ಜ್ಞಾನವನ್ನು ಮಾತೃಸ್ವರೂಪಿಯಾಗಿ ಪೂಜಿಸುತ್ತ ಸರಿಯಾದ ಮಾರ್ಗದಲ್ಲಿ ಬಳಸಿಕೊಂಡಾಗ ಸುಜ್ಞಾನ ಜಗತ್ತಿನ ಪರಿಚಯವಾಗುತ್ತದೆ ಎಂದರು.

ಹಿಂದಿನ ಕಾಲದಲ್ಲಿ ವಿದ್ಯೆ, ಧನ, ಶಕ್ತಿಯನ್ನು ಸಾಧುಸಂತರ ಜ್ಞಾನ ರಕ್ಷಣೆಗೆ ಬಳಸಿಕೊಳ್ಳಲಾಗುತ್ತಿತ್ತು. ಈಗ ಈ ಮೂರನ್ನು ಕಲಹದ ಕಿಚ್ಚು ಹಚ್ಚಲು ಬಳಸಿಕೊಳ್ಳುವವರೇ ಹೆಚ್ಚಾಗಿರುವುದು ವಿಪರ್ಯಾಸ. ಮಾಹಿತಿ ನೀಡುವುದಷ್ಟೇ ಶಿಕ್ಷಣವಲ್ಲ. ಸಂಸ್ಕಾರವಂತ ಜೀವನ ನಡೆಸುವಂತಹ ವಿದ್ಯೆ ನೀಡುವುದು ಶಿಕ್ಷಣ. ನಮ್ಮ ಶಿಕ್ಷಣ ವ್ಯವಸ್ಥೆ ಎಂದೂ ರಾಜಾಶ್ರಿತವಲ್ಲ, ಸಮಾಜಾಶ್ರಿತವಾಗಿದೆ. ಈ ಅರ್ಥಪೂರ್ಣ ಕಾರ್ಯಕ್ರಮ ಹರಿಹರಪುರಕ್ಕಷ್ಟೇ ಸೀಮಿತವಾಗದಿರಲಿ. ನಮ್ಮ ವಿಚಾರವನ್ನು ಜಗತ್ತಿನ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಮುಂದಿನ ದಿನದಲ್ಲಿ ಜಗತ್ತು ಸನಾತನ ಧರ್ಮ ಆಧಾರಿತ ಗುರುಕುಲ ಶಿಕ್ಷಣ ಪದ್ಧತಿಯನ್ನು ಕೇಳುತ್ತದೆ. ಅದನ್ನು ಕೊಡಲು ನಾವು ಸಿದ್ಧರಾಗಿರಬೇಕು ಎಂದು ತಿಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಮೆರಿಕಾದ ವೇದವಿದ್ವಾಂಸ ಪದ್ಮಭೂಷಣ ಡೇವಿಡ್‌ ಫ್ರಾಲಿ ಅವರು ಮಾತನಾಡಿ, ಇಂದಿನ ಜನಾಂಗ ಷೇಕ್ಸ್‌ಪಿಯರ್‌ ನೆನೆಸಿಕೊಂಡು ಹೆಮ್ಮೆ ಪಡುತ್ತಾರೆ. ಕಾಳಿದಾಸನನ್ನು ಮರೆತುಬಿಡುತ್ತಾರೆ. ಕಾಳಿದಾಸನ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವಂತಾಗಬೇಕು. ಇಂದು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾಗಿದೆ. ಕೇವಲ ಭಾರತಕ್ಕಾಗಿ ಮಾತ್ರ ಅಲ್ಲ ಜಾಗತೀಕರಣಕ್ಕಾಗಿ ಉಳಿಸಿಕೊಳ್ಳಬೇಕಾಗಿದೆ ಎಂದರು.

ಅರ್ಧಮಂಡಲೋತ್ಸವದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಪದ್ಮಶ್ರೀ ಡಾ. ವಿ.ಆರ್‌. ಗೌರಿಶಂಕರ್‌ ಮಾತನಾಡಿ, ಪರಕೀಯರ ಅನುಕರಣೆಯಂತೆ ಸಿಲ್ವರ್‌ ಜ್ಯೂಬಿಲಿ, ಗೋಲ್ಡನ್‌, ಡೈಮಂಡ್‌ ಜ್ಯೂಬಿಲಿಗಳೆಂದು ಕಾರ್ಯಕ್ರಮಗಳನ್ನು ಹೆಸರಿಸದೇ ಅರ್ಧಮಂಡಲೋತ್ಸವ ಎಂದು ನಾಮಕರಣ ಮಾಡುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಮೆರೆದು ಪ್ರಬೋಧಿನೀ ಗುರುಕುಲ ಸಾಧನೆಯನ್ನು ಮಾಡಿದೆ ಎಂದರು.

ವೇದಘೋಷದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಅಖಿಲ ಭಾರತ ಸಾಹಿತ್ಯ ಪರಿಷತ್ತು ಕರ್ನಾಟಕ ವಿಭಾಗದ ಉಪಾಧ್ಯಕ್ಷ ಹಾಗೂ ಪತ್ರಕರ್ತ ಹರಿಪ್ರಸಾದ್‌ ಕೋಣೆಮನೆ ಸ್ವಾಗತಿಸಿ, ಗುರುಕುಲದ ವ್ಯವಸ್ಥಾಪಕ ಉಮೇಶ್‌ ರಾವ್‌ ವಂದಿಸಿದರು. ಆರ್‌ಎಸ್‌ಎಸ್‌ ಹಿರಿಯ ಪ್ರಚಾರಕ ಪ್ರೊ.ರಾಮಚಂದ್ರ ಭಟ್‌ ಕೋಟೆಮನೆ, ಸೀತಾರಾಮ ಕೇದಿಲಾಯ, ಸಮಿತಿಯ ಕಾರ್ಯಾಧ್ಯಕ್ಷ ಎಚ್‌.ಬಿ. ರಾಜಗೋಪಾಲ್‌ ಮುಂತಾದವರು ಉಪಸ್ಥಿತರಿದ್ದರು.