ಶ್ರೀನಗರ(ಸೆ.28: ಭದ್ರತಾ ಪಡೆಯ ಕಣ್ಣು ತಪ್ಪಿಸಲು ಉಗ್ರರು ಟಾಯ್ಲೆಟ್‌ಗೆಂದು ತೋಡಲಾದ ಶೌಚ ಗುಂಡಿಗÜಳು, ಮಳೆಗಾಲದಲ್ಲಿ ನೀರು ಹರಿಯಲೆಂದು ಇರುವ ನಾಲೆಯ ಕೆಳಗೆ ಸ್ಟೀಲ್‌ ಬಾಕ್ಸ್‌ಗಳಲ್ಲಿ ಅಡಗಿಕೊಳ್ಳುವುದು, ಮಾನವ ನಿರ್ಮಿತ ಹೊಂಡಗಳಲ್ಲಿ ಆಶ್ರಯ ಪಡೆಯುವುದು... ಹೀಗೆ ಹೊಸ ರೀತಿಯ ತಂತ್ರಗಳ ಮೊರೆ ಹೋಗಿದ್ದಾರೆ. ಭದ್ರತಾ ಪಡೆಗಳು ಉಗ್ರರ ವಿರುದ್ಧದ ಕಾರ್ಯಾರಣೆಯನ್ನು ತೀವ್ರಗೊಳಿಸಿ ಅಡಗುದಾಣಗಳನ್ನು ನಾಶಗೊಳಿಸಿದ್ದರಿಂದ ಉಗ್ರರು ಹೊಸದಾದ ಅಡಗುದಾಣಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಉಗ್ರರು ನೆಲದ ಅಡಿಯಲ್ಲಿರುವ ಬಂಕರ್‌ಗಳು ಮತ್ತು ಸುರಂಗಗಳಲ್ಲಿ ಅಡಗಿಕೊಳ್ಳುವುದು ಹೊಸದೇನೂ ಅಲ್ಲ. ಅವುಗಳನ್ನು ಒಂದೊಂದೆ ಪತ್ತೆಹಚ್ಚಿ ಉಗ್ರರ ಸಂಹಾರ ಮಾಡಲಾಗುತ್ತಿದೆ. ಉಗ್ರರ ಅಡಗುತಾಣಗಳ ಪತ್ತೆಗೆ ಅತ್ಯಾಧುನಿಕ ಡ್ರೋನ್‌ಗಳನ್ನು ಬಳಕೆ ಮಾಡಲಾಗತ್ತಿದೆ. ಹೀಗಾಗಿ ಉಗ್ರರು ಈಗ ಯಾರ ಕಣ್ಣಿಗೂ ಕಾಣದಿರಲೆಂದು ಟಾಯ್ಲೆಟ್‌ಗೆಂದು ತೋಡಲಾದ ಶೌಚ ಗುಂಡಿಗಳನ್ನು ಆಶ್ರಯಿಸಿದ್ದಾರೆ. ಈ ಟಾಯ್ಲೆಟ್‌ಗಳು ಹೊರ ನೋಟಕ್ಕೆ ಮಲ ವಿಸರ್ಜನೆಗೆ ಬಳಸಿದಂತೆ ಕಾಣುವುದರಿಂದ ಯಾವುದೇ ಅನುಮಾನ ಬರುವುದಿಲ್ಲ. ಆದರೆ, ಟ್ಯಾಕ್‌ನ ಒಳಗಡೆ ಪ್ರತ್ಯೇಕ ಕೋಣೆಯನ್ನು ನಿರ್ಮಿಸಿ ಅದರಲ್ಲಿ ಉಗ್ರರು ಅಡಗಿ ಕೂರುತ್ತಿದ್ದಾರೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಗಡಿಯಲ್ಲಿ ಇರುವ ಲಸ್ಸಿಪುರ ಪ್ರದೇಶದ ಮನೆಯೊಂದರ ಮೇಲೆ ಭದ್ರತಾ ಪಡೆಗಳು ಸತತ ಆರು ಬಾರಿ ಶೋಧ ನಡೆಸಿದರೂ ಉಗ್ರರು ಪತ್ತೆ ಆಗಿರಲಿಲ್ಲ. ಆದರೆ, ಹೊಸದಾಗಿ ತೋಡಿದ್ದ ಶೌಚ ಗುಂಡಿ ಅಗೆದ ವೇಳೆ ಇಬ್ಬರು ಉಗ್ರರು ಪತ್ತೆ ಆಗಿದ್ದರು. ಇದೇ ರೀತಿಯ ಇನ್ನೊಂದು ಘಟನೆಯಲ್ಲಿ ಮನೆಯನ್ನು ಶೋಧಿಸಲು ತೆರಳಿದ್ದಾಗ ಸೆಪ್ಟಿಕ್‌ ಟ್ಯಾಂಕ್‌ನಲ್ಲಿ ಅಡಗಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದರು. ಬಳಿಕ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು ಎಂದು ಜಮ್ಮು- ಕಾಶ್ಮೀರ ಡಿಜಿಪಿ ದಿಲ್‌ಬಾಗ್‌ ಸಿಂಗ್‌ ತಿಳಿಸಿದ್ದಾರೆ.