ನವದೆಹಲಿ[ಜ.22]:  ರೈಲ್ವೆ ಟಿಕೆಟ್‌ಗಳನ್ನು ಅಕ್ರಮವಾಗಿ ಇ-ಬುಕಿಂಗ್‌ ಮಾಡುತ್ತಿದ್ದ ಅತ್ಯಂತ ಬೃಹತ್‌ ಜಾಲವೊಂದನ್ನು ಇತ್ತೀಚೆಗೆ ಭೇದಿಸಿ ಬೆಂಗಳೂರಿನ ಒಬ್ಬ ಸೇರಿದಂತೆ ಇಬ್ಬರನ್ನು ಬಂಧಿಸಿದ್ದ ರೈಲ್ವೆ ರಕ್ಷಣಾ ಪಡೆಗೆ (ಆರ್‌ಪಿಎಫ್‌) ಸ್ಫೋಟಕ ಮಾಹಿತಿಗಳು ಲಭಿಸಿವೆ. ಈ ಜಾಲವು ಅಕ್ರಮವಾಗಿ ರೈಲ್ವೆ ಟಿಕೆಟ್‌ ಬುಕಿಂಗ್‌ ಮಾಡಿ ತಿಂಗಳಿಗೆ 10-15 ಕೋಟಿ ರುಪಾಯಿ ಗಳಿಸುತ್ತಿತ್ತು ಮತ್ತು ಗಳಿಸಿದ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಸರಬರಾಜು ಮಾಡುತ್ತಿತ್ತು. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಕೊಲ್ಲಿ ದೇಶಗಳಿಗೆ ಈ ಜಾಲದ ನಂಟಿದೆ ಎಂದು ತಿಳಿದುಬಂದಿದೆ.

ಅಕ್ರಮ ರೈಲ್ವೆ ಟಿಕೆಟ್‌ ಬುಕಿಂಗ್‌ ಜಾಲದ ಬೆನ್ನಟ್ಟಿದ್ದ ಆರ್‌ಪಿಎಫ್‌ ಬಲೆಗೆ ಕಳೆದ ವರ್ಷದ ಅಕ್ಟೋಬರ್‌ 31ರಂದು ಬೆಂಗಳೂರಿನ ಪೀಣ್ಯದ ಎಂ. ಹನುಮಂತರಾಜು (37) ಎಂಬಾತ ಸಿಕ್ಕಿಬಿದ್ದಿದ್ದ. ಈ ಜಾಲಕ್ಕೆ ಇನ್ನಷ್ಟುಬಲೆ ಬೀಸಿದಾಗ ಜಾರ್ಖಂಡ್‌ ಮೂಲದ ಮಾಜಿ ಮದರಸಾ ವಿದ್ಯಾರ್ಥಿ ಹಾಗೂ ಸ್ವಯಂಕಲಿಕೆ ಮೂಲಕ ಸಾಫ್ಟ್‌ವೇರ್‌ ತಂತ್ರಜ್ಞನಾಗಿದ್ದ ಗುಲಾಂ ಮುಸ್ತಫಾ (26) ಎಂಬಾತ ಜನವರಿ 8ರಂದು ಒಡಿಶಾದ ಭುವನೇಶ್ವರದಲ್ಲಿ ಬಂಧಿತನಾಗಿದ್ದ.

ಮುಸ್ತಫಾನ ವಿಚಾರಣೆಯನ್ನು ಆರ್‌ಪಿಎಫ್‌ ನಡೆಸಿದಾಗ, ಈತ 563 ನಕಲಿ ಐಆರ್‌ಸಿಟಿಸಿ ಐಡಿಗಳನ್ನು ಸೃಷ್ಟಿಸಿ ಟಿಕೆಟ್‌ ಬುಕಿಂಗ್‌ ಮಾಡುತ್ತಿದ್ದ. 2400 ಎಸ್‌ಬಿಐ ಖಾತೆಗಳು ಹಾಗೂ 600 ಪ್ರಾದೇಶಿಕ ಬ್ಯಾಂಕ್‌ ಖಾತೆಗಳು ಸೇರಿದಂತೆ 3000 ಬ್ಯಾಂಕ್‌ ಖಾತೆಗಳನ್ನು ತೆರೆದು ಆ ಮೂಲಕ ಬುಕಿಂಗ್‌ ವಹಿವಾಟು ನಡೆಸುತ್ತಿದ್ದ. ಸಂಗ್ರಹವಾದ ಹಣವನ್ನು ‘ಕ್ರಿಪ್ಟೋ ಕ್ರೆರೆನ್ಸಿ’ ಮೂಲಕ ವಿವಿಧ ಕಡೆ ವರ್ಗಾಯಿಸುತ್ತಿದ್ದ. ಈ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಆತ ಸರಬರಾಜು ಮಾಡಿರಬಹುದು ಎಂದು ತಿಳಿದುಬಂದಿದೆ ಎಂದು ಆರ್‌ಪಿಎಫ್‌ ಮಹಾನಿರ್ದೇಶಕ ಅರುಣ್‌ ಕುಮಾರ್‌ ತಿಳಿಸಿದ್ದಾರೆ.

ಇದಲ್ಲದೆ, ‘ಈ ಅಕ್ರಮ ಟಿಕೆಟ್‌ ಜಾಲದ ಮಾಸ್ಟರ್‌ ಮೈಂಡ್‌ ಹಮೀದ್‌ ಅಶ್ರಫ್‌ ಎಂಬಾತ ಎಂದೂ ಗೊತ್ತಾಗಿದೆ. ಅಶ್ರಫ್‌ ಕೂಡ ಸಾಫ್ಟ್‌ವೇರ್‌ ಡೆವಲಪರ್‌. ಈತ 2019ರಲ್ಲಿ ಉತ್ತರ ಪ್ರದೇಶದ ಗೊಂಡಾ ಶಾಲೆಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಭಾಗಿಯಾಗಿದ್ದ ಹಾಗೂ ಜಾಮೀನು ಪಡೆದ ಸಂದರ್ಭದಲ್ಲಿ ದುಬೈಗೆ ಓಡಿ ಹೋಗಿರುವ ಶಂಕೆ ಇದೆ’ ಎಂದು ಕುಮಾರ್‌ ತಿಳಿಸಿದ್ದಾರೆ.

ಇದೇ ವೇಳೆ ಮುಸ್ತಫಾ ನೀಡಿದ ಹೇಳಿಕೆ ಆಧರಿಸಿ ಇನ್ನೂ 27 ಮಂದಿಯನ್ನು ವಶಕ್ಕೆ ತೆಗೆದುಕೊಂಡು ಆರ್‌ಪಿಎಫ್‌ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮುಸ್ತಫಾನನ್ನು ಕರ್ನಾಟಕ ಪೊಲೀಸರೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಟಿಕೆಟ್‌ ಬುಕಿಂಗ್‌ ದಂಧೆ ಹೇಗೆ?

ಬಂಧಿತ ಮುಸ್ತಫಾ ಬಳಿ 2 ಲ್ಯಾಪ್‌ಟಾಪ್‌ ಸಿಕ್ಕಿವೆ. ಇವುಗಳನ್ನು ಪರಿಶೀಲಿಸಿದಾಗ ಎಎನ್‌ಎಂಎಸ್‌ ಎಂಬ ಸಾಫ್ಟ್‌ವೇರ್‌ ಪತ್ತೆಯಾಗಿದೆ. ಈ ಸಾಫ್ಟ್‌ವೇರ್‌ ಬಳಸಿಯೇ ಆತ ಐಆರ್‌ಸಿಟಿಸಿ ವೆಬ್‌ಸೈಟ್‌ ಹ್ಯಾಕ್‌ ಮಾಡಿದ್ದಾನೆ.

ಎಎನ್‌ಎಂಎಸ್‌ ಸಾಫ್ಟ್‌ವೇರ್‌ ಬಳಸಿದರೆ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ರೈಲು ಟಿಕೆಟ್‌ ಬುಕಿಂಗ್‌ ಮಾಡುವಾಗ ಕಡ್ಡಾಯವಾಗಿ ಎದುರಾಗುವ ‘ಕ್ಯಾಪ್ಕಾ’ ಕೋಡ್‌ ಎಂಟ್ರಿ ಹಾಗೂ ‘ಬ್ಯಾಂಕ್‌ ಒಟಿಪಿ’ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವೇ ಎದುರಾಗುವುದಿಲ್ಲ. ಈ ಮೂಲಕ 563 ಐಆರ್‌ಸಿಟಿಸಿ ಲಾಗಿನ್‌ ಐಡಿಗಳನ್ನು ಹಾಗೂ 3 ಸಾವಿರ ಬ್ಯಾಂಕ್‌ ಖಾತೆಗಳನ್ನು ಸೃಷ್ಟಿಸಿಕೊಂಡಿದ್ದ. ಹಲವಾರು ಐಡಿಗಳನ್ನು ಈತ ಇತರರಿಗೆ ಕೊಟ್ಟು ಅವರಿಂದ ಕಮಿಷನ್‌ ವಸೂಲಿ ಮಾಡುತ್ತಿದ್ದ.

ಸುಮಾರು 20 ಸಾವಿರ ನಕಲಿ ಏಜೆಂಟ್‌ಗಳು ಈ ಜಾಲದಲ್ಲಿದ್ದಾರೆ ಎನ್ನಲಾಗಿದ್ದು, ಜಾಲದ ಮಾಸಿಕ ಆದಾಯವೇ 10-15 ಕೋಟಿ ರುಪಾಯಿ.

250ಕೆಜಿ ತೂಕದ ಐಸಿಸ್ ಉಗ್ರನನ್ನು ಎತ್ತುವಲ್ಲಿ ಸುಸ್ತಾದ ಪೊಲೀಸರು!.

ಇನ್ನು ಅಸಲಿ ಐಆರ್‌ಸಿಟಿಸಿ ಸಾಫ್ಟ್‌ವೇರ್‌ನಲ್ಲಿ 1 ಟಿಕೆಟ್‌ ಬುಕಿಂಗ್‌ಗೆ ಸರಾಸರಿ 2.55 ನಿಮಿಷ ಬೇಕು. ಆದರೆ ನಕಲಿ ಸಾಫ್ಟ್‌ವೇರ್‌ನಲ್ಲಿ 1.48 ನಿಮಿಷ ಸಾಕು. ಅಲ್ಲದೆ, ಏಕಕಾಲಕ್ಕೆ ಹಲವಾರು ಟಿಕೆಟ್‌ ಬುಕ್‌ ಮಾಡಬಹುದು. ಏಕಕಾಲಕ್ಕೆ ಅನೇಕ ಟಿಕೆಟ್‌ ಬುಕ್‌ ಮಾಡುವುದು ಅಸಲಿ ಸಾಫ್ಟ್‌ವೇರ್‌ನಲ್ಲಿ ಆಗದು.

ಆಧಾರ್‌, ಪಾನ್‌ ಸಾಫ್ಟ್‌ವೇರ್‌ ಕೂಡ ಉಂಟು!

ನಕಲಿ ಆಧಾರ್‌ ಕಾರ್ಡ್‌ ಹಾಗೂ ಪಾನ್‌ ಕಾರ್ಡ್‌ ಸೃಷ್ಟಿಸುವ ಸಾಫ್ಟ್‌ವೇರ್‌ ಕೂಡ ಮುಸ್ತಫಾ ಬಳಿ ಇದೆ ಎಂದು ಆರ್‌ಪಿಎಫ್‌ ಡಿಜಿ ಅರುಣ್‌ ಕುಮಾರ್‌ ತಿಳಿಸಿದ್ದಾರೆ. ಇದೇ ವೇಳೆ, ಮುಸ್ತಫಾ ಪಾಕಿಸ್ತಾನದ ತಬ್ಲೀಕ್‌-ಎ-ಜಮಾತ್‌ ಎಂಬ ಸಂಘಟನೆಯ ಅನುಯಾಯಿಯಾಗಿದ್ದ. ಈ ಸಂಘಟನೆಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಕೊಲ್ಲಿ ದೇಶಗಳು, ಇಂಡೋನೇಷ್ಯಾ ಹಾಗೂ ನೇಪಾಳದ ಸದಸ್ಯರಿದ್ದಾರೆ. ಈತನ ಲ್ಯಾಪ್‌ಟಾಪ್‌ ಪರಿಶೀಲಿಸಿದಾಗ ಅನೇಕ ಪಾಕಿಸ್ತಾನಿ ಸಾಫ್ಟ್‌ವೇರ್‌ಗಳು ಹಾಗೂ ನಿಗೂಢಾರ್ಥದ ಸಂದೇಶಗಳು ಲಭ್ಯವಾಗಿವೆ.

ಸಿಂಗಾಪುರಕ್ಕೆ ಹಣ ರವಾನೆ:

ಸಿಂಗಾಪುರ ಮೂಲದ ಸಾಫ್ಟ್‌ವೇರ್‌ ಕಂಪನಿಗೆ ಈತನಿಂದ ಹಣ ರವಾನೆಯಾಗಿರುವುದು ಗೊತ್ತಾಗಿದೆ. ಈ ಕಂಪನಿಯ ವಿರುದ್ಧ ಈಗಾಗಲೇ ಸಿಂಗಾಪುರ ಪೊಲೀಸರು ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸುತ್ತಿದ್ದಾರೆ ಎಂದು ಆರ್‌ಪಿಎಫ್‌ ಪತ್ತೆ ಮಾಡಿದೆ.

ಅಕ್ರಮ ಸಿಮ್‌ ಬಳಸಿ ಸಿಕ್ಕಿಬಿದ್ದ ಜಿಹಾದಿ ಗ್ಯಾಂಗ್‌!...

ಇತ್ತೀಚೆಗೆ ಮುಸ್ತಫಾನಿಂದ ‘ಗುರೂಜಿ’ ಎಂಬಾತನಿಗೆ 13 ಲಕ್ಷ ರು. ಸಂದಾಯವಾಗಿದೆ. ಆತ ಈ ಸಮೂಹದ ತಾಂತ್ರಿಕ ತಜ್ಞ ಎನ್ನಲಾಗಿದೆ. ಯುಗೋಸ್ಲಾವಿಯಾ ಸಂಖ್ಯೆ ಬಳಸಿ, ಗುರೂಜಿ ತನ್ನ ಗುರುತಿ ಸಿಗದಂತೆ ವ್ಯವಹರಿಸುತ್ತಿದ್ದ ಎಂದು ಅರುಣ್‌ ಕುಮಾರ್‌ ಹೇಳಿದ್ದಾರೆ.

ವಿಚಾರಣೆ ವೇಳೆ ಕೆಲವು ಸಂಗತಿಗಳನ್ನು ಬಾಯಿಬಿಟ್ಟಿರುವ ಆತ, ‘2017ರಲ್ಲಿ ನಾನು ಐಆರ್‌ಸಿಟಿಸಿ ಇ-ಟಿಕೆಟ್‌ ಬುಕ್ಕಿಂಗ್‌ನ ಏಜೆಂಟ್‌ ಐಡಿ ತೆರೆದೆ. ನಂತರ ಇತರ ಆರೋಪಿಯ ಜತೆ ಸೇರಿ ಎಎನ್‌ಎಂಎಸ್‌ ಸಾಫ್ಟ್‌ವೇರ್‌ ಬಳಸಿ ಐಆರ್‌ಸಿಟಿಸಿ ವೆಬ್‌ಸೈಟ್‌ ಹ್ಯಾಕ್‌ ಮಾಡಿದೆ. 563 ನಕಲಿ ಐಡಿ ತೆರೆದು, ಅಕ್ರಮವಾಗಿ ಇ-ಟಿಕೆಟ್‌ ಬುಕ್ಕಿಂಗ್‌ ಆರಂಭಿಸಿದೆ’ ಎಂದು ತಿಳಿಸಿದ್ದಾನೆ. ಎನ್‌ಐಎ, ಜಾರಿ ನಿರ್ದೇಶನಾಲಯ, ಕರ್ನಾಟಕ ಪೊಲೀಸರು, ಗುಪ್ತಚರ ದಳದವರೂ ಈತನ ವಿಚಾರಣೆ ನಡೆಸಿದ್ದಾರೆ.