ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಭೀಕರ ರೈಲು ದುರಂತವೊಂದು ಸಂಭವಿಸಿದ್ದು, ಘಟನೆಯಲ್ಲಿ ಮೃತರಾದವರ ಸಂಖ್ಯೆ ಈಗ 15ಕ್ಕೆ ಏರಿಕೆ ಆಗಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಸಿಲಿಗುರಿ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಮೃತರಾದವರ ಸಂಖ್ಯೆ 15ಕ್ಕೆ ಏರಿಕೆ ಆಗಿದೆ. ಸೀಲ್ದಾಹ್‌ಗೆ ಹೊರಟಿದ್ದ ಪ್ರಯಾಣಿಕ ರೈಲು ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ವರದಿಗಳ ಪ್ರಕಾರ ಅಪಘಾತದ ರಭಸಕ್ಕೆ ರೈಲಿನ ಎರಡು ಬೋಗಿಗಳು ಹಳಿಯಿಂದ ಕಳಚಿ ಬೇರೆಡೆ ಎಸೆಯಲ್ಪಟ್ಟಿವೆ. ಘಟನೆಯಲ್ಲಿ ಪ್ರಾರಂಭದಲ್ಲಿ ಐವರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿ ಆಗಿತ್ತು. .ಅಪಘಾತ ಸ್ಥಳದಲ್ಲಿ ಗಂಭೀರ ಸ್ಥಿತಿ ಇದೆ ಎಂದು ಡಾರ್ಜಿಲಿಂಗ್ ಹೆಚ್ಚುವರಿ ಎಸ್‌ಪಿ ಅಭಿಷೇಕ್ ರಾಯ್ ಹೇಳಿದ್ದರು. ಆದರೆ ಈಗ ಮೃತರ ಸಂಖ್ಯೆ 15ಕ್ಕೆ ಏರಿಕೆ ಆಗಿದೆ.
ಗೂಡ್ಸ್ ರೈಲು ಸಿಗ್ನಲ್ ಜಂಪ್ ಮಾಡಿದ್ದರಿಂದ ದುರಂತ
ಗೂಡ್ಸ್ ರೈಲು ಸಿಗ್ನಲ್ ಜಂಪ್ ಮಾಡಿದ್ದರಿಂದ ಈ ದುರಂತ ನಡೆದಿದೆ ಎಂದು ತಿಳಿದು ಬಂದಿದೆ. ಈ ದುರಂತದಲ್ಲಿ ಮೂವರು ರೈಲ್ವೆ ಸ್ಟಾಪ್ ಕೂಡ ಸಾವನ್ನಪ್ಪಿದ್ದಾರೆ ಎಂದು ವರದಿ ಆಗಿದೆ. ಗೂಡ್ಸ್ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಕಾಂಚನಗುಂಜ್ ರೈಲಿನ ಮೂರು ಬೋಗಿಗಳು ಹಳಿ ತಪ್ಪಿ ನೆಲಕ್ಕುರುಳಿದ್ದವು. ಗೂಡ್ಸ್ ರೈಲಿನ ಲೋಕೋಮೋಟಿವ್ ಪೈಲಟ್, ಸಹಾಯಕ ಲೋಕೋಮೋಟಿವ್ ಪೈಲಟ್ ಹಾಗೂ ಎಕ್ಸ್‌ಪ್ರೆಸ್ ಟ್ರೈನ್‌ನ ಗಾರ್ಡ್ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇತ್ತು. ಆದರೆ ಕಾಂಚನ್‌ಗುಂಜ್ ಎಕ್ಸ್‌ಪ್ರೆಸ್ ರೈಲಿನ ಹಿಂದಿನ ಎರಡು ಬೋಗಿಗಳಲ್ಲಿ ಒಂದು ಗಾರ್ಡ್ ಕೋಚ್ ಹಾಗೂ ಇನ್ನೊಂದು ಗೂಡ್ಸ್ ಕೋಚ್ ಆಗಿದ್ದರಿಂದ ಅವಘಡದ ಪ್ರಮಾಣ ಕಡಿಮೆ ಆಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ವರದಿಯ ಪ್ರಕಾರ, ಸೀಲ್ದಾಹ್‌ಗೆ ಹೊರಟಿದ್ದ ಕಂಚನ್‌ಜುಂಗ್ ಎಕ್ಸ್‌ಪ್ರೆಸ್ ರೈಲಿಗೆ ಇಂದು ಮುಂಜಾನೆ ನ್ಯೂ ಜಲಪೈಗುರಿ ಬಳಿ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ. 9 ಗಂಟೆ ವೇಳೆಗೆ ಘಟನೆ ನಡೆದಿದ್ದು, ಈ ಕಂಚನ್‌ಗುಂಜ್ ರೈಲು ತ್ರಿಪುರಾದ ಅಗರ್ತಲಾದಿಂದ ಹೊರಟಿದ್ದು ಸೀಲ್ದಾಹ್‌ನತ್ತ ಹೋಗುತ್ತಿತ್ತು. ಆದರೆ ನ್ಯೂ ಜಲಫೈಗುರಿ ರೈಲು ನಿಲ್ದಾಣಕ್ಕಿಂತ ಸ್ವಲ್ಪ ಹಿಂದೆ ರಂಗಪಾನಿ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 5 ಜನ ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳು ಹಾಗೂ ಬೋಗಿಯೊಳಗೆ ಸಿಲುಕಿರುವವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿತ್ತು.
ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಡಾರ್ಜಿಲಿಂಗ್ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದ ಸುದ್ದಿ ತಿಳಿದು ಶಾಕ್ ಆಯ್ತು. ಹೆಚ್ಚಿನ ಮಾಹಿತಿ ನಿರೀಕ್ಷಿಸುತ್ತಿದ್ದೇವೆ. ಕಾಂಚನಗುಂಜ್ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಸಿಕ್ಕಿದೆ, ವೈದ್ಯಕೀಯ ತಂಡ, ಎಸ್‌ಪಿ, ರಕ್ಷಣಾ ತಂಡ, ಆಂಬ್ಯುಲೆನ್ಸ್ ಹಾಗೂ ರಾಜ್ಯ ವಿಪತ್ತು ನಿರ್ವಹಣ ತಂಡ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದೆ ಎಂದು ಅವರು ಟ್ವಿಟ್ಟ ಮಾಡಿದ್ದಾರೆ.
