ತೆಲಂಗಾಣದ ನಿಜಾಮಾಬಾದ್‌ನಲ್ಲಿ ದಂಪತಿ ತಮ್ಮ ಇಬ್ಬರು ಮಕ್ಕಳನ್ನು ಅನಾಥರನ್ನಾಗಿಸಿ ಸಾವಿಗೆ ಶರಣಾಗಿದ್ದಾರೆ. ಅಷ್ಟಕ್ಕೂ ಈ ದಂಪತಿಗೆ ಏನಾಗಿತ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ನಿಜಾಮಾಬಾದ್ (ತೆಲಂಗಾಣ): ಇಬ್ಬರು ಮುದ್ದಾದ ಮಕ್ಕಳನ್ನ ಅನಾಥರನ್ನಾಗಿ ಮಾಡಿ, ಅಪ್ಪ-ಅಮ್ಮ ಸಾವಿಗೆ ಶರಣಾದ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯ ವಿವರ

ಮೇಘನಾ ಮತ್ತು ನರೇಶ್ ಮೃತ ದುದೈವಿಗಳು. ಕಳೆದ ಮಂಗಳವಾರ ಈ ದಂಪತಿ ತಮ್ಮ ಮಕ್ಕಳಾದ ಆಯುಂಶ್ ಮತ್ತು ಮಿಥುನ್ ಅವರನ್ನು ಅತ್ತೆಯ ಮನೆಯಲ್ಲಿ ಬಿಟ್ಟು ಬಂದಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ತಮ್ಮ ನಿವಾಸಕ್ಕೆ ಬಂದು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಮನೆಯಲ್ಲಿ ನೋಟ್ ದೊರೆತಿದೆ. ಈ ನಿರ್ಧಾರಕ್ಕೆ ಆರ್ಥಿಕ ಸಂಕಷ್ಟ, ಆರೋಗ್ಯ ಸಮಸ್ಯೆಗಳು ಮತ್ತು ತೀವ್ರ ಖಿನ್ನತೆ ಕಾರಣ ಎಂದು ಉಲ್ಲೇಖಿಸಿದ್ದಾರೆ.

ನರೇಶ್ ವಿದ್ಯುತ್ ಇಲಾಖೆಯಲ್ಲಿ ಲೈನ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಮೇಘನಾ ಗೃಹಿಣಿಯಾಗಿದ್ದರು. ನರೇಶ್ ಕಳೆದ ಕೆಲವು ಸಮಯದಿಂದ ಗಂಭೀರ ಆರೋಗ್ಯ ಸಮಸ್ಯೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು ಹಾಗೂ ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಸೋದರಮಾವ ಮೋಹನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದಂಪತಿ ನಡುವೆ ಯಾವುದೇ ರೀತಿಯ ಜಗಳ ಅಥವಾ ಕಲಹಗಳು ಇರಲಿಲ್ಲ ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಇದು ಕೇವಲ ಮಾನಸಿಕ ಒತ್ತಡ ಮತ್ತು ಆರ್ಥಿಕ ಕಾರಣಗಳಿಂದ ನಡೆದ ಘಟನೆ ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.