ಇಲ್ಲೊಂದು ಕಡೆ ತನ್ನ ಬೆನ್ನಮೇಲೆ ಗಾಡಿಯನ್ನು ಹೊತ್ತು ಸಾಗಿಸುತ್ತಿದ್ದ ಎತ್ತೊಂದು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿತು ಎಂದು ಅಧಿಕಾರಿಗಳು ಎತ್ತಿನ ಗಾಡಿಯ ಮಾಲೀಕನಿಗೆ ದಂಡ ವಿಧಿಸಿದ ವಿಚಿತ್ರ ಘಟನೆ ತೆಲಂಗಾಣದ ಖಮ್ಮಂನಲ್ಲಿ ನಡೆದಿದೆ. 

ಖಮ್ಮಂ: ಸಾಮಾನ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ದಂಡ ವಿಧಿಸಲಾಗುವುದು ಎಂಬ ಬೋರ್ಡ್‌ಗಳು ನಗರದ ಹಲವೆಡೆ ಇರುವುದನ್ನು ನೀವು ನೋಡಿರಬಹುದು. ಆದರೆ ಇದ್ಯಾವುದರ ಕೇರೇ ಇಲ್ಲದೇ, ಸಮೀಪದಲ್ಲೇ ಸಾರ್ವಜನಿಕ ಶೌಚಾಲಯವಿದ್ದರೂ ಸಹ ಅಲ್ಲಿ ಹೋದರೆ ದುಡ್ಡು ನೀಡಬೇಕಾಗುತ್ತದೆ ಎಂದು, ಹಾದಿಯಲ್ಲಿ ಹಾದು ಹೋಗುವ ಸಾರ್ವಜನಿಕರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ರಸ್ತೆಬದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರನ್ನು ನೀವು ನೋಡಿರಬಹುದು. ದಂಡ ವಿಧಿಸಲಾಗುವುದು ಎಂಬ ಫಲಕದ ಕೆಳಗೆಯೇ ಮೂತ್ರ ವಿಸರ್ಜಿಸಿದರು ಅವರಿಗೆ ಯಾರೂ ದಂಡ ವಿಧಿಸುವವರೇ ಇರುವುದಿಲ್ಲ. ಹೀಗಿರುವಾಗ ಇಲ್ಲೊಂದು ಕಡೆ ತನ್ನ ಬೆನ್ನಮೇಲೆ ಗಾಡಿಯನ್ನು ಹೊತ್ತು ಸಾಗಿಸುತ್ತಿದ್ದ ಎತ್ತೊಂದು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿತು ಎಂದು ಅಧಿಕಾರಿಗಳು ಎತ್ತಿನ ಗಾಡಿಯ ಮಾಲೀಕನಿಗೆ ದಂಡ ವಿಧಿಸಿದ ವಿಚಿತ್ರ ಘಟನೆ ತೆಲಂಗಾಣದ ಖಮ್ಮಂನಲ್ಲಿ ನಡೆದಿದೆ. 

ಬುದ್ದಿ ಇರುವ ಸುಶಿಕ್ಷಿತರೆನಿಸಿರುವ ಮನುಷ್ಯರೇ ನಿಯಮಗಳನ್ನು ಪಾಲಿಸಲು ಸಿದ್ಧರಿಲ್ಲ. ಹೀಗಿರುವಾಗ ನಾಗರಿಕ ಶಿಷ್ಟಾಚಾರದ ಅರಿವಿಲ್ಲದ, ಮಾತು ಬಾರದ ಮೂಕ ಪ್ರಾಣಿಗಳಿಗೆ ಸರ್ಕಾರಿ ನಿಯಮದ ಅರಿವು ಹೇಗಿರಲು ಸಾಧ್ಯ. ಹೀಗಿರುವಾಗ ಈ ರೀತಿ ದಂಡ ವಿಧಿಸಿದ್ದು, ಎಷ್ಟು ಸರಿ ಎಂದು ಅನೇಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರೈತನ ಬದುಕನ್ನೇ ಬರ್ಬಾದ್ ಮಾಡಿದ ಲಂಪಿಸ್ಕಿನ್ ರೋಗ: ಬಂದಷ್ಟು ಬೆಲೆಗೆ ಎತ್ತು ಮಾರಾಟ ಮಾಡುತ್ತಿರುವ ಅನ್ನದಾತ..!

ಎತ್ತುಗಳ ಮಾಲೀಕರಾದ ಸುಂದರ್‌ಲಾಲ್ ಲೋಧ್ (Sundarlal Loadh) ಎಂಬುವವರು, ಹೂವಿನ ಕುಂಡಗಳನ್ನು ಹಾಗೂ ಮಣ್ಣುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಎತ್ತಿನ ಗಾಡಿಯ ಮೂಲಕ ಸಾಗಿಸುತ್ತಿದ್ದರು. ಜೀವನೋಪಾಯಕ್ಕಾಗಿ ಈ ಕೆಲಸ ಮಾಡುತ್ತಿದ್ದ ಲೋಧ್ ಅವರ ಎತ್ತುಗಳು ಖಮ್ಮಂನ ಸಿಂಗರೇಣಿ ಕಾಲೀರೀಸ್ ಕಂಪನಿ ಲಿಮಿಟೆಡ್ (ಎಸ್‌ಸಿಸಿಎಲ್) ಪ್ರಧಾನ ವ್ಯವಸ್ಥಾಪಕರ ಕಚೇರಿ ಎದುರು ಮೂತ್ರ ವಿಸರ್ಜನೆ ಮಾಡಿದ್ದವು ಎಂದು ತಿಳಿದು ಬಂದಿದೆ. ಸಿಂಗರೇಣಿ ಕಾಲೀರೀಸ್ ಕಂಪನಿ ಲಿಮಿಟೆಡ್ ಕೊತ್ತಪೂಸಪಲ್ಲಿ (Kothapoosapalli) ಹಾಗೂ ಪತ್ತಪೂಸಪಲ್ಲಿ ಮಾರ್ಗ ಮಧ್ಯೆ ಇದ್ದು, ಅಲ್ಲಿಗೆ ತಲುಪಿದ ಸಂದರ್ಭದಲ್ಲಿ ಎತ್ತುಗಳು ಮೂತ್ರ ವಿಸರ್ಜನೆ ಮಾಡಿವೆ. 

ಸಿಂಗರೇಣಿ ಕಾಲೀರೀಸ್ ಕಂಪನಿ ಲಿಮಿಟೆಡ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯ(IPC) ಸೆಕ್ಷನ್ 290 (ಸಾರ್ವಜನಿಕರಿಗೆ ತೊಂದರೆ) ಅಡಿ ಲೋಧ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಅವರನ್ನು ಯೆಲ್ಲಾಂಡು (Yellandu) ಪ್ರದೇಶದಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನವಂಬರ್ 29 ರಂದು ಈ ಘಟನೆ ನಡೆದಿದೆ. ಅಂದು ಈತನಿಗೆ 100 ರೂಪಾಯಿ ದಂಡ ವಿಧಿಸುವಂತೆ ನೋಟೀಸ್ ಬಂದಿತ್ತು. ಆದರೆ ಅವರ ಬಳಿ ಹಣವಿರಲಿಲ್ಲ. ಅಂದು ನನ್ನ ಬಳಿ ಹಣವಿರಲಿಲ್ಲ ಹಾಗೂ ಕರ್ತವ್ಯದಲ್ಲಿದ್ದ ಪೇದೆಯೊಬ್ಬರಿಗೆ ಮನವಿ ಮಾಡಿ ಹಣ ಇರುವಾಗ ವಾಪಸ್ ಕೊಡುವೆ ಈಗ ನನ್ನ ಬಳಿ ಹಣವಿಲ್ಲ ಎಂದು ಮನವಿ ಮಾಡಿದಾಗ ಅವರು ಆ 100 ರೂಪಾಯಿ ದಂಡವನ್ನು ಪಾವತಿ ಮಾಡಿದರು ಎಂದು ಸುಂದರ್‌ಲಾಲ್ ಲೋಧ್ ಹೇಳಿಕೊಂಡಿದ್ದಾರೆ. 

ಚಾಲಕನ ನಿರ್ಲಕ್ಷ್ಯದಿಂದ ಎತ್ತಿನಗಾಡಿಗಳಿಗೆ ಲಾರಿ ಡಿಕ್ಕಿ: ಮೂರು ಎತ್ತುಗಳು ಸ್ಥಳದಲ್ಲೇ ಸಾವು

ಆ ಕಚೇರಿಯ ಮುಂದೆ ಹೋರಿಗಳು (Bull) ಮೂತ್ರ ಮಾಡುತ್ತವೆ ಎಂಬ ನಿರೀಕ್ಷೆ ನನಗಿರಲಿಲ್ಲ. ಈ ಎತ್ತಿನಗಾಡಿಯೇ ನನ್ನ ಜೀವನದ ಮೂಲಾಧಾರವಾಗಿದೆ. ನಮ್ಮ ಕುಟುಂಬ ನಾಲ್ಕು ತಲೆಮಾರಿನಿಂದ ಕೃಷಿಯಲ್ಲಿ ತೊಡಗಿತ್ತು. ಆದರೆ ಖಮ್ಮಂ ಜಿಲ್ಲೆಯ ಕಾರೇಪಲ್ಲಿ ಮಂಡಲದ ಉಸಿರಿಕಾಯಲಪಲ್ಲಿಯಲ್ಲಿರುವ ನನ್ನ ಜಮೀನನ್ನು ಸಿಂಗರೇಣಿ ಕಾಲೀರೀಸ್ ಕಂಪನಿ ಲಿಮಿಟೆಡ್‌ಗೆ ನೀಡಲಾಗಿತ್ತು. ಆದರೆ ಸೂಕ್ತ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಈಗ ಎತ್ತಿನ ಗಾಡಿಯೇ ನನ್ನ ಆದಾಯದ ಮೂಲವಾಗಿದೆ. ಈ ಆಸ್ತಿ ಪರಿಹಾರದ ವಿಚಾರವಾಗಿ ನಾವು ಕೋರ್ಟ್‌ಗೆ ಅಲೆದಾಡಿದ್ದೆವು. ಆದಾಗ್ಯೂ ಅವರು ನಮ್ಮ ಜಮೀನಿಗೆ ತಕ್ಕ ಬೆಲೆ ನೀಡಲಿಲ್ಲ ಎಂದು ಸುಂದರ್‌ಲಾಲ್ ಲೋಧ್ ಹೇಳಿದರು. ಮೂಕ ಪ್ರಾಣಿಗಳ ವಿರುದ್ಧ ಇವರು ದಂಡ ವಿಧಿಸಿದ್ದಾರೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವ ಜನರ ವಿರುದ್ಧ ಇವರು ಕ್ರಮ ಕೈಗೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.