ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಹದೇಶ್ವರಪುರ ಹಾಗೂ ನೀಲನಹಳ್ಳಿ ಗೇಟ್ ಮಧ್ಯೆ ನಡೆದ ಘಟನೆ
ಪಾಂಡವಪುರ(ಸೆ.03): ಚಾಲಕನ ನಿರ್ಲಕ್ಷ್ಯದಿಂದಾಗಿ ಎತ್ತಿನಗಾಡಿಗಳಿಗೆ ಲಾರಿ ಡಿಕ್ಕಿಯಾಗಿ ಮೂರು ಎತ್ತುಗಳು ಸ್ಥಳದಲ್ಲೇ ಮೃತಪಟ್ಟು, ಎರಡು ಎತ್ತುಗಳಿಗೆ ಪೆಟ್ಟಾಗಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮಹದೇಶ್ವರಪುರ ಹಾಗೂ ನೀಲನಹಳ್ಳಿ ಗೇಟ್ ಮಧ್ಯೆ ಗುರುವಾರ ತಡರಾತ್ರಿ ಸಂಭವಿಸಿದೆ. ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಿಂದ ಪಾಂಡವಪುರ ತಾಲೂಕಿನ ನೀಲನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಬ್ಬು ತುಂಬಲು ಬಂದು ನಂತರ ಶ್ರೀರಂಗಪಟ್ಟಣ - ಜೇವರ್ಗಿ ಹೆದ್ದಾರಿ ಮಾರ್ಗವಾಗಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ನಾಗಮಂಗಲದ ಕಡೆಯಿಂದ ಮೈಸೂರಿನ ಕಡೆಗೆ ತರಕಾರಿ ತುಂಬಿಕೊಂಡು ಹೊರಟಿದ್ದ ಲಾರಿ ಎತ್ತಿನಗಾಡಿಗಳಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಒಂದರ ಹಿಂದೆ ಒಂದರಂತೆ ಬರುತ್ತಿದ್ದ ಎತ್ತುಗಳಿಗೆ ಎತ್ತಿನಗಾಡಿಯ ನೊಗದ ಕುಣಿಕೆ ಬಿಗಿದುಕೊಂಡಿರುವ ಜತೆಗೆ ಡಿಕ್ಕಿಯ ರಭಸದಿಂದ ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಸ್ಥಳದಲ್ಲೇ ಮೂರು ಎತ್ತುಗಳು ಮೃತಪಟ್ಟಿವೆ. ಇನ್ನೆರಡು ಎತ್ತುಗಳು ಪ್ರಾಣಾಪಾಯದಿಂದ ಪಾರಾಗಿದೆ.
ಮಂಡ್ಯದ ಜೀವನಾಡಿ ಮೈಷುಗರ್ ಒ ಅಂಡ್ ಎಂನಡಿ ಪುನಾರಂಭ
ಎತ್ತಿನಗಾಡಿಯಲ್ಲಿದ್ದ ಪಾಂಡವಪುರ ತಾಲೂಕಿನ ಮಹದೇಶ್ವರಪುರ ಗ್ರಾಮದ ರೈತರಾದ ಯೋಗೇಶ್, ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ಸುರೇಶ್ ಹಾಗೂ ವಿನುಕುಮಾರ್ ಗಾಯಗೊಂಡರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಗಂಭೀರವಾಗಿ ಗಾಯಗೊಂಡ ಎರಡು ಎತ್ತುಗಳ ಪೈಕಿ ಎತ್ತೊಂದನ್ನು ದೊಡ್ಡಬ್ಯಾಡರಹಳ್ಳಿ ಚೈತ್ರಾ ಗೋ ಶಾಲೆಗೆ ರವಾನಿಸಲಾಗಿದೆ. ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಮತ್ತೊಂದು ಎತ್ತಿಗೆ ಪಶು ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗಿದೆ. ಮೃತ ಮೂರು ಎತ್ತುಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ನೀಲನಹಳ್ಳಿ ಗೇಟ್ ಬಳಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಅಪಘಾತದಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೇಲುಕೋಟೆ ಪೊಲೀಸರು ಮಳೆಯ ನಡುವೆಯೂ ಕ್ರೇನ್‌ಗಳ ಮೂಲಕ ಎತ್ತಿನಗಾಡಿ ಮತ್ತು ಮೃತ ಎತ್ತುಗಳನ್ನು ರಸ್ತೆ ಬದಿಗೆ ಸರಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು. ಲಾರಿ ಚಾಲಕ ಮತ್ತು ಕ್ಲೀನರ್ ಲಾರಿಯನ್ನು ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ:
ಲಾರಿ ಅಪಘಾತದಲ್ಲಿ ಮೃತಪಟ್ಟ ಎತ್ತುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಬೆಳಗ್ಗೆ ಸ್ಥಳೀಯರು ಪ್ರತಿಭಟನೆ ನಡೆಸಿದರು.
Mandya Crime: ಹೇಮಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ
ಈ ವೇಳೆ ಶ್ರೀರಂಗಪಟ್ಟಣ - ಜೇವರ್ಗಿ ಹೆದ್ದಾರಿಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಗಂಟೆಗಟ್ಟಲೇ ಪ್ರತಿಭಟನೆ ನಡೆಸಿದ್ದರಿಂದ ಮತ್ತೇ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಮೇಲುಕೋಟೆ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಸುಮಾರಾಣಿ ನೇತೃತ್ವದಲ್ಲಿ ಲಾರಿ ಮಾಲೀಕರನ್ನು ಸ್ಥಳಕ್ಕೆ ಕರೆಯಿಸಿ ಮೃತ ಎತ್ತುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಅಂತ್ಯಗೊಂಡಿತು.
ಅಪಘಾತ ಸ್ಥಳಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು, ಬಿಜೆಪಿ ಯುವ ನಾಯಕ ಡಾ.ಎನ್.ಎಸ್.ಇಂದ್ರೇಶ್, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್ .ಕೆಂಪೂಗೌಡ, ರೈತಸಂಘದ ಪಾಂಡವಪುರ ಅಧ್ಯಕ್ಷ ಚಿಕ್ಕಾಡೆ ಹರೀಶ್ ಭೇಟಿ ನೀಡಿ ಎತ್ತುಗಳ ಸಾವಿಗೆ ಬೇಸರ ವ್ಯಕ್ತಪಡಿಸಿದರು. ಡಾ.ಇಂದ್ರೇಶ್ ನೊಂದ ರೈತ ಕುಟುಂಬಕ್ಕೆ ಸ್ಥಳದಲ್ಲೇ ಆರ್ಥಿಕ ಸಹಾಯ ಮಾಡಿದರು.
