ಬೀದಿನಾಯಿಗಳ ದಾಳಿಗೆ 5 ವರ್ಷದ ಬಾಲಕ ಬಲಿ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಬೀದಿನಾಯಿಗಳ ಹಿಂಡೊಂದು ಐದು ವರ್ಷದ ಬಾಲಕನ ಮೇಲೆ ಮುಗಿಬಿದ್ದು, ಕಚ್ಚಿ ಗಾಯಗೊಳಿಸಿದ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ನೆರೆಯ ರಾಜ್ಯ ತೆಲಂಗಾಣದ ನಿಜಮಾಬಾದ್‌ನಲ್ಲಿ(Nizamabad) ನಡೆದಿದೆ.
ಹೈದರಾಬಾದ್: ಬೀದಿನಾಯಿಗಳ ಹಿಂಡೊಂದು ಐದು ವರ್ಷದ ಬಾಲಕನ ಮೇಲೆ ಮುಗಿಬಿದ್ದು, ಕಚ್ಚಿ ಗಾಯಗೊಳಿಸಿದ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ನೆರೆಯ ರಾಜ್ಯ ತೆಲಂಗಾಣದ ನಿಜಮಾಬಾದ್‌ನಲ್ಲಿ(Nizamabad) ನಡೆದಿದೆ. ಈ ಆಘಾತಕಾರಿ ದೃಶ್ಯ ಅಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಬೆಚ್ಚಿ ಬೀಳಿಸುವಂತಿದೆ. ಬಾಲಕನ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಅದೇ ಸ್ಥಳದಲ್ಲಿ ಈ ಅನಾಹುತ ನಡೆದಿದೆ. ಮೃತ ಬಾಲಕನನ್ನು ಪ್ರದೀಪ್ (Pradeep) ಎಂದು ಗುರುತಿಸಲಾಗಿದೆ.
ಬಾಲಕ ತಾನು ತಂದೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗುತ್ತಿದ್ದಾಗ ಈ ಅನಾಹುತ ನಡೆದಿದೆ. ಮೂರರಿಂದ ನಾಲ್ಕು ಬೀದಿ ನಾಯಿಗಳು ಬಾಲಕನನ್ನು ರಸ್ತೆಯಲ್ಲಿ ಬೆನ್ನಟ್ಟಿಕೊಂಡು ಹೋಗಿ ನಂತರ ಕಚ್ಚಿ ಎಳೆದಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಭಯ ಎಂಥವರನ್ನು ಒಂದು ಕ್ಷಣ ಬೆಚ್ಚಿ ಬೀಳಿಸುವಂತೆ ಮಾಡುತ್ತಿದೆ. ಬಾಲಕನ ನಡೆದುಕೊಂಡು ಹೋಗುತ್ತಿರಬೇಕಾದರೆ ಒಂದು ನಾಯಿ ಆತನನ್ನು ಬೆನ್ನಟ್ಟಿದೆ. ಅಷ್ಟರಲ್ಲಿ ಅಲ್ಲಿದ್ದ ಇನ್ನು ಮೂರು ನಾಯಿಗಳು ಸೇರಿಕೊಂಡಿದ್ದು, ಬಾಲಕನನ್ನು ನೆಲಕ್ಕೆ ಕೆಡವಿ ಒಂದಾದ ಮೇಲೊಂದರಂತೆ ದಾಳಿ ನಡೆಸಿ ಬಾಲಕನನ್ನು ಕಚ್ಚಿ ಎಳೆದಾಡಿವೆ. ಈ ವೇಳೆ ಮಗು ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸಿದರೂ, ಕಾಡು ಮೃಗಗಳಂತೆ ಎರಗಿದ ಈ ಬೀದಿನಾಯಿಗಳಿಂದ ಬಾಲಕನಿಗೆ ಪಾರಾಗಲು ಸಾಧ್ಯವಾಗಿಲ್ಲ. ನಾಯಿಗಳ ಭೀಕರ ದಾಳಿಯಿಂದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಈ ಕರುಳು ಹಿಂಡುವ ದೃಶ್ಯ ಎಂಥವರನ್ನು ಕೂಡ ಒಂದು ಕ್ಷಣ ಕಣ್ಣೀರಿಡುವಂತೆ ಮಾಡುತ್ತಿದೆ.
ಬೆಳಗಾವಿ ಜನರ ನಿದ್ದೆಗೆಡಿಸಿದ ಏಕೈಕ ಬೀದಿ ನಾಯಿ, ಮಹಾನಗರ ಪಾಲಿಕೆ ವಿರುದ್ಧ ಜನರ ಅಸಮಾಧಾನ!
ಭಾನುವಾರ ಈ ಘಟನೆ ನಡೆದಿದ್ದು, ಮೃತ ಬಾಲಕ ಪ್ರದೀಪ್ ಅಂಬರ್‌ಪೇಟ್‌ನ ಇರುಕುಲ ಬಸ್ತಿ ಸಮೀಪದ ನಿವಾಸಿಯಾಗಿರುವ ಗಂಗಾಧರ್ ಎಂಬುವವರ ಪುತ್ರ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬಾಲಕನ ಕುಟುಂಬದವರು ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಾಯಕಾರಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿ ನಾಯಿಗಳನ್ನು ನಿಯಂತ್ರಿಸಲು ವಿಫಲವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದಕ್ಕೂ ಮೊದಲು ಗುಜರಾತ್‌ನ (Gujarat) ಸೂರತ್‌ನಲ್ಲಿ (Surat) ಬೀದಿ ನಾಯಿಗಳ ದಾಳಿಯಿಂದ ನಾಲ್ಕು ವರ್ಷದ ಮಗು ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಈಗ ತೆಲಂಗಾಣದಲ್ಲಿ ಪುಟ್ಟ ಬಾಲಕ ಬೀದಿ ನಾಯಿಗಳ ದಾಳಿಗೆ ಬಲಿಯಾಗಿದ್ದಾನೆ. ಇದಕ್ಕೂ ಮೊದಲು, ಜನವರಿಯಲ್ಲಿ, ಬಿಹಾರದ ಅರ್ರಾದಲ್ಲಿ ಬೀದಿನಾಯಿಯೊಂದು ಕಚ್ಚಿದ್ದರಿಂದ 80 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ಅಪಾರ್ಟ್‌ಮೆಂಟ್‌ಗಳಲ್ಲಿ ನಾಯಿಗಳನ್ನು ಸಾಕುವ ಬಗ್ಗೆ ಈಗಾಗಲೇ ಪರ ವಿರೋಧಗಳು ಸಾಕಷ್ಟು ವ್ಯಕ್ತವಾಗಿವೆ. ಸಾಕುನಾಯಿಗಳು ಲಿಫ್ಟ್‌ಗಳಲ್ಲಿ ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಹಲವು ಘಟನೆಗಳು ನಡೆದ ನಂತರ ನಾಯಿಗಳನ್ನು ಸಾಕಲು ಅವಕಾಶ ನೀಡಬಾರದು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಶೃಂಗೇರಿಗೆ ಪಾದಯಾತ್ರೆ ಹೊರಟವರಿಗೆ ಬೀದಿನಾಯಿ ಸಾಥ್, ಕ್ಷೇತ್ರ ತಲುಪಿದ ನಂತರ ಕಣ್ಮರೆ!