ಬೆಳಗಾವಿ ಜನರ ನಿದ್ದೆಗೆಡಿಸಿದ ಏಕೈಕ ಬೀದಿ ನಾಯಿ, ಮಹಾನಗರ ಪಾಲಿಕೆ ವಿರುದ್ಧ ಜನರ ಅಸಮಾಧಾನ!
ಕಳೆದ ನಾಲ್ಕು ದಿನಗಳಿಂದ ಬೀದಿನಾಯಿಯೊಂದು ಕುಂದಾನಗರಿ ಬೆಳಗಾವಿ ಜನರ ನಿದ್ದೆಗೆಡಿಸಿದೆ. ಕಳೆದ ನಾಲ್ಕು ದಿನಗಳ ಅಂತರದಲ್ಲಿ ಒಂದೇ ಬೀದಿ ನಾಯಿ ಬರೋಬ್ಬರಿ 19 ಜನರಿಗೆ ಕಚ್ಚಿ ಗಾಯಗೊಳಿಸಿದೆ. ಬೆಳಗಾವಿಯ ಮಾರುಕಟ್ಟೆಗೆ ಬರಲು ಜನ ಭಯ ಪಡುತ್ತಿದ್ದಾರೆ.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಫೆ.4): ಕಳೆದ ನಾಲ್ಕು ದಿನಗಳಿಂದ ಬೀದಿನಾಯಿಯೊಂದು ಕುಂದಾನಗರಿ ಬೆಳಗಾವಿ ಜನರ ನಿದ್ದೆಗೆಡಿಸಿದೆ. ಕಳೆದ ನಾಲ್ಕು ದಿನಗಳ ಅಂತರದಲ್ಲಿ ಒಂದೇ ಬೀದಿ ನಾಯಿ ಬರೋಬ್ಬರಿ 19 ಜನರಿಗೆ ಕಚ್ಚಿ ಗಾಯಗೊಳಿಸಿದೆ. ಪ್ರಿಂಟಿಂಗ್ ಪ್ರೆಸ್ ಮಾಲೀಕ, ಹೋಟೆಲ್ ಸಿಬ್ಬಂದಿ ಸೇರಿ 19 ಜನರಿಗೆ ಬೀದಿ ನಾಯಿ ಕಚ್ಚಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಕಚ್ಚಿದ ಬೀದಿ ನಾಯಿ ಬಿಟ್ಟು ಬೇರೆ ಬೀದಿ ನಾಯಿ ಹಿಡಿದುಕೊಂಡು ಹೋಗಿದ್ದಾರೆ. ಬೆಳಗಾವಿಯ ಮಾರುಕಟ್ಟೆ ಪ್ರದೇಶದಲ್ಲಿ ಬಿಂದಾಸ್ ಆಗಿ ಬೀದಿ ನಾಯಿ ಓಡಾಡುತ್ತಿದ್ದು ಮಹಾನಗರ ಪಾಲಿಕೆ ಸಿಬ್ಬಂದಿ ಕ್ಯಾರೇ ಎನ್ನುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೇ ಬೀದಿ ನಾಯಿ ಇತರೇ ನಾಯಿಗಳ ಮೇಲೆಯೂ ಅಟ್ಯಾಕ್ ಮಾಡುತ್ತಿದೆಯಂತೆ. ತಾವು ಆ ನಾಯಿಯನ್ನು ಹಿಂಬಾಲಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು ಬಾಪಟ್ ಗಲ್ಲಿ ಕಾರು ಪಾರ್ಕಿಂಗ್ ಸ್ಥಳ, ಖಡೇಬಜಾರ್, ಗಣಪತಿ ಬೀದಿ, ಕಡೋಲ್ಕರ್ ಬೀದಿ, ಕಿರ್ಲೋಸ್ಕರ್ ರಸ್ತೆ ಸೇರಿ ಎಲ್ಲೆಡೆ ಓಡಾಡುತ್ತಿದೆ. ನಾವು ಆ ನಾಯಿಯ ಫಾಲೋ ಮಾಡಿ ಮಹಾನಗರ ಪಾಲಿಕೆ ಸಿಬ್ಬಂದಿಗೆ ಮಾಹಿತಿ ನೀಡಿದ್ದೆವು. ಆದರೆ ಆ ವೇಳೆ ಯಾರೊಬ್ಬರೂ ಬರಲಿಲ್ಲ ಎಂದು ಬಾಪಟ್ ಬೀದಿಯ ನಿವಾಸಿ ವಿಜಯ್ ಆರೋಪಿಸಿದ್ದಾರೆ.
ಬಿಹಾರದಲ್ಲಿ 30 ಬೀದಿ ನಾಯಿಗಳನ್ನು ಗುಂಡಿಕ್ಕಿ ಕೊಂದ ನಿತೀಶ್ ಕುಮಾರ್ ಸರ್ಕಾರ..!
ಕರ್ನಾಟಕ ಮಹಾರಾಷ್ಟ್ರ ಗೋವಾಗೆ ಸಂಪರ್ಕ ಕೊಂಡಿಯಾಗಿರುವ ನಗರವಾಗಿರುವ ಬೆಳಗಾವಿಯ ಮಾರುಕಟ್ಟೆಗೆ ಶಾಪಿಂಗ್‌ಗೆ ಅಂತಾ ನೆರೆಯ ಮಹಾರಾಷ್ಟ್ರ ಗೋವಾದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಪುಟ್ಟ ಪುಟ್ಟ ಮಕ್ಕಳ ಮೇಲೆ ಇದೇ ಬೀದಿ ನಾಯಿ ದಾಳಿ ಮಾಡಿದ್ರೆ ಯಾರು ಹೊಣೆ? ಮಾರುಕಟ್ಟೆ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಮಹಾನಗರ ಪಾಲಿಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಬೀದಿ ನಾಯಿಗಾಗಿ ಜುಟ್ಟು ಜುಟ್ಟು ಹಿಡಿದು ಕಿತ್ತಾಡಿಕೊಂಡ ನಾರಿಯರು... ವಿಡಿಯೋ ವೈರಲ್
'ಆಪರೇಷನ್ ಡಾಗ್' ಕಾರ್ಯಾಚರಣೆಗೆ ಜನರ ಅಸಮಾಧಾನ:
ಇನ್ನು ಕೆಲ ತಿಂಗಳುಗಳ ಹಿಂದೆ ಬೀದಿ ನಾಯಿಗಳ ಕಾಟ ಹೆಚ್ಚಾಗಿತ್ತು. ಬಳಿಕ ಮಹಾನಗರ ಪಾಲಿಕೆ ಆಪರೇಷನ್ ಡಾಗ್ ಕಾರ್ಯಾಚರಣೆ ಆರಂಭಿಸಿ ಬೀದಿ ನಾಯಿಗಳ ಸೆರೆಹಿಡಿದು ಸಂತಾನ ಹರಣ ಚಿಕಿತ್ಸೆ ನೀಡಲು ಬೆಂಗಳೂರು ಮೂಲದ ಎನ್‌ಜಿಒಗೆ ಟೆಂಡರ್ ನೀಡಲಾಗಿತ್ತು. ಸದ್ಯ ಬೆಳಗಾವಿ ನಗರದಲ್ಲಿ ದಿನಕ್ಕೆ 30 ನಾಯಿಗಳನ್ನು ಸೆರೆ ಹಿಡಿದು ಅವುಗಳ ಸಂತಾನಹರಣ ಚಿಕಿತ್ಸೆ ಮಾಡಿ ಮತ್ತೆ ಅವುಗಳನ್ನು ಸೆರೆ ಹಿಡಿದ ಸ್ಥಳದಲ್ಲಿಯೇ ಬಿಡಲಾಗುತ್ತಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ಮಾರ್ಗಸೂಚಿ ಹೊರಡಿಸಿದ್ದು ಆ ಪ್ರಕಾರ ತಾವು ಕ್ರಮ ಕೈಗೊಳ್ಳುತ್ತಿರಯವುದಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.