ತೇಜಸ್ವಿ ಪ್ರಸಾದ್ ಯಾದವ್ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂಬ ಆರೋಪ. ಚುನಾವಣಾ ಆಯೋಗದಿಂದ ಸ್ಪಷ್ಟನೆ ಮತ್ತು ಹಕ್ಕು-ಆಕ್ಷೇಪಣೆಗೆ ಕಾಲಾವಕಾಶ.

ಪಾಟ್ನಾ (ಆ.2): ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಪಾಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ, ವಿಶೇಷ ಪರಿಷ್ಕರಣೆ (SIR) ಸಮಯದಲ್ಲಿ ನಾನು ಫಾರ್ಮ್ ಭರ್ತಿ ಮಾಡಿದ್ದೆ, ಆದರೆ ಕರಡು ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಹೇಗೆ ಸ್ಪರ್ಧಿಸಲಿ? ಎಂದು ಪ್ರಶ್ನಿಸಿದರು. ಈ ವೇಳೆ ಅವರು ತಮ್ಮ ಮೊಬೈಲ್‌ನಲ್ಲಿ EPIC ಸಂಖ್ಯೆಯನ್ನು ಪರಿಶೀಲಿಸಿದ ವೀಡಿಯೊವನ್ನು ಪತ್ರಕರ್ತರಿಗೆ ತೋರಿಸಿದರು.

ಚುನಾವಣಾ ಆಯೋಗ ಸ್ಪಷ್ಟನೆ:

ತೇಜಸ್ವಿ ಯಾದವ್‌ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಯಾದವ್‌ರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ 416ನೇ ಸ್ಥಾನದಲ್ಲಿದೆ. ಅವರ ಹೆಸರು ಇಲ್ಲ ಎಂಬ ಹೇಳಿಕೆ ಸುಳ್ಳು ಮತ್ತು ವಾಸ್ತವಿಕವಾಗಿ ತಪ್ಪಾಗಿದೆ ಎಂದು ಸ್ಪಷ್ಟನೆ ನೀಡಿದೆ.

Scroll to load tweet…

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ,ಕರಡು ಮತದಾರರ ಪಟ್ಟಿಯ ಕುರಿತು ಆಗಸ್ಟ್ 1 ರಿಂದ ಸೆಪ್ಟೆಂಬರ್ 1, 2025 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ತೇಜಸ್ವಿ ಯಾದವ್‌ರ ಹೆಸರು ಒಂದು ವೇಳೆ ಸೇರಿಲ್ಲದಿದ್ದರೆ, ಅದನ್ನು ಸರಿಪಡಿಸಲು ಎರಡು ತಿಂಗಳ ಕಾಲಾವಕಾಶವಿದೆ ಎಂದು ತಿಳಿಸಿದ್ದಾರೆ. ಅಂತಿಮ ಮತದಾರರ ಪಟ್ಟಿ ಸೆಪ್ಟೆಂಬರ್ 1, 2025 ರಂದು ಬಿಡುಗಡೆಯಾಗಲಿದೆ. ಈ ವಿವಾದವು ಬಿಹಾರದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮತದಾರರ ಪಟ್ಟಿಯ ನಿಖರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ