ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆಜಾದ್ ಸಮಾಜ ಪಕ್ಷ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಈ ಮೂಲಕ ಮಹಾಘಟಬಂಧನ್‌ಗೆ ನೇರ ಸವಾಲು ಒಡ್ಡಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಜೋಹರ್ ಆಜಾದ್ ತಿಳಿಸಿದ್ದಾರೆ.
ಪಾಟ್ನಾ (ಜು.23): ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಎನ್‌ಡಿಎ ಮತ್ತು ಮಹಾಘಟಬಂಧನ್ ನಡುವಿನ ಮುಖ್ಯ ಸ್ಪರ್ಧೆಯ ನಡುವೆ, ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ ಪಕ್ಷ ಕಾನ್ಶಿರಾಮ್ ಬಿಹಾರದಲ್ಲಿ 100 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ.
ಮಹಾಘಟಬಂಧನ್‌ಗೆ ಸವಾಲು:
ಪಾಟ್ನಾದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಜೋಹರ್ ಆಜಾದ್, 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು. ಇದರಲ್ಲಿ 60 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಗಿದ್ದು, ಉಳಿದ ಕ್ಷೇತ್ರಗಳಿಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು. 46 ಕ್ಷೇತ್ರಗಳಲ್ಲಿ ಮಹಾಘಟಬಂಧನ್‌ಗೆ ನೇರ ಸವಾಲು ಒಡ್ಡಲಾಗುವುದು ಎಂದು ಅವರು ಹೇಳಿದರು. 'ಮಹಾಘಟಬಂಧನ್ ಎಲ್ಲಾ ವರ್ಗಗಳನ್ನು ಒಗ್ಗೂಡಿಸಿಲ್ಲ, ಸಾರ್ವಜನಿಕರಲ್ಲಿ ಅಸಮಾಧಾನವಿದೆ," ಎಂದು ಆಜಾದ್ ಆರೋಪಿಸಿದರು.
ಜುಲೈ 21ರಂದು ರಾಷ್ಟ್ರೀಯ ಸಮಾವೇಶ
ಜುಲೈ 21ರಂದು ಪಾಟ್ನಾದಲ್ಲಿ ನಡೆಯಲಿರುವ ಆಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಚಂದ್ರಶೇಖರ್ ಆಜಾದ್ ಭಾಗವಹಿಸಿ, ಚುನಾವಣಾ ಕಾರ್ಯತಂತ್ರವನ್ನು ಅಂತಿಮಗೊಳಿಸಲಿದ್ದಾರೆ.
ಎಲ್ಜೆಪಿ (ರಾಮ್ ವಿಲಾಸ್) ಹೇಳಿದ್ದೇನು?
ಈ ಘೋಷಣೆಗೆ ಪ್ರತಿಕ್ರಿಯಿಸಿರುವ ಎಲ್ಜೆಪಿ (ರಾಮ್ ವಿಲಾಸ್) ವಕ್ತಾರ ಶಶಿಭೂಷಣ್ ಪ್ರಸಾದ್, 'ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಹಕ್ಕಿದೆ, ಆದರೆ ಇದರಿಂದ ನಮಗೆ ಯಾವುದೇ ವ್ಯತ್ಯಾಸವಾಗದು. ದಲಿತ ಸಮುದಾಯವು ಚಿರಾಗ್ ಪಾಸ್ವಾನ್ ಅವರೊಂದಿಗಿದೆ' ಎಂದು ಹೇಳಿದರು.
ತಜ್ಞರ ವಿಶ್ಲೇಷಣೆ ಏನು ಹೇಳುತ್ತೆ?
ರಾಜಕೀಯ ವಿಶ್ಲೇಷಕ ಸಂತೋಷ್ ಕುಮಾರ್ ಪ್ರಕಾರ, ಆಜಾದ್ ಸಮಾಜ ಪಕ್ಷವು ರವಿದಾಸ್ ಸಮುದಾಯದ ಮತಬ್ಯಾಂಕ್‌ನಲ್ಲಿ ಪ್ರಭಾವ ಬೀರಲು ಯತ್ನಿಸುತ್ತಿದೆ. 'ಚಂದ್ರಶೇಖರ್ ಆಜಾದ್ ಮಾಯಾವತಿಯವರ ಮತಬ್ಯಾಂಕ್‌ಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. 500-1000 ಮತಗಳನ್ನು ಪಡೆದರೂ ಕೆಲವು ಕ್ಷೇತ್ರಗಳಲ್ಲಿ ಸಮೀಕರಣ ಬದಲಾಗಬಹುದು ಎಂದು ಅವರು ಹೇಳಿದ್ದಾರೆ. ಆದರೆ, ಎನ್‌ಡಿಎಗೆ ಯಾವುದೇ ನೇರ ನಷ್ಟವಾಗದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ, ಏಕೆಂದರೆ ಪಾಸ್ವಾನ್ ಮತದಾರರು ಎನ್‌ಡಿಎ ಜೊತೆ ಬಲವಾಗಿ ನಿಂತಿದ್ದಾರೆ. ಚಂದ್ರಶೇಖರ್ ಆಜಾದ್ ಅವರ ಈ ಕ್ರಮವು ಬಿಹಾರದ ರಾಜಕೀಯ ಲೆಕ್ಕಾಚಾರವನ್ನು ಹೇಗೆ ಬದಲಾಯಿಸಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.
