ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ 16 ವರ್ಷದ ವಿದ್ಯಾರ್ಥಿನಿ ಶಾಲಾ ಆವರಣದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಈ ಘಟನೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಆಘಾತವನ್ನುಂಟುಮಾಡಿದೆ.

ಹೈದಾರಾಬಾದ್‌: ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಸಣ್ಣ ವಯಸ್ಸಿನ ಮಕ್ಕಳ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಏನೂ ಅರಿಯದ ಪುಟ್ಟ ಪುಟ್ಟ ಮಕ್ಕಳು ಡಾನ್ಸ್ ಮಾಡುವಾಗ ಆಟ ಆಡುತ್ತಿರುವಾಗ ಅಥವಾ ತರಗತಿಯಲ್ಲಿ ಕುಳಿತಿರುವಾಗಲೇ ಸಾವನ್ನಪ್ಪಿದಂತಹ ಹಲವು ಪ್ರಕರಣಗಳು ಈಗಾಗಲೇ ನಡೆದಿವೆ. ಈ ಎಲ್ಲಾ ಘಟನೆಗಳು ಮಾಸುವ ಮೊದಲೇ ಈಗ ಹೃದಯಾಘಾತಕ್ಕೆ ಮತ್ತೊಬ್ಬಳು ವಿದ್ಯಾರ್ಥಿ ಪ್ರಾಣ ತೆತ್ತಿದ್ದಾಳೆ. ಶಾಲೆಗೆ ನಡೆದು ಹೋಗುತ್ತಿದ್ದ ವಿದ್ಯಾರ್ಥಿ ತರಗತಿಗೆ ಕಾಲಿಡುವ ಮೊದಲೇ ಶಾಲಾ ಆವರಣದ ಹೊರಭಾಗದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ತೆಲಂಗಾಣ ರಾಜ್ಯದ ಕಾಮರೆಡ್ಡಿ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

16 ವರ್ಷದ ಶ್ರೀನಿಧಿ ಹೃದಯಾಘಾತಕ್ಕೆ ಬಲಿಯಾದ 10ನೇ ಕ್ಲಾಸ್ ವಿದ್ಯಾರ್ಥಿನಿ. ರಾಮರೆಡ್ಡಿ ಮಂಡಲದ ಸಿಗರಾಯನಪ್ಪಲಿ ನಿವಾಸಿಯಾದ ಈಕೆ ಶಿಕ್ಷಣದ ಕಾರಣಕ್ಕೆ ಕಾಮರೆಡ್ಡಿಯಲ್ಲಿ ವಾಸ ಮಾಡುತ್ತಿದ್ದಳು. ಕಾಮರೆಡ್ಡಿಯ ಖಾಸಗಿ ಶಾಲೆಯಲ್ಲಿ ಈಕೆ 10ನೇ ತರಗತಿ ಓದುತ್ತಿದ್ದಳು. ಅಧಿಕಾರಿಗಳ ಮಾಹಿತಿ ಪ್ರಕಾರ ಶಾಲೆಯ ಆವರಣ ತಲುಪುತ್ತಿದ್ದಂತೆ ಈಕೆಗೆ ಎದೆ ನೋವು ಕಾಣಿಸಿಕೊಂಡಿದ್ದು, ಕ್ಷಣದಲ್ಲೇ ಕುಸಿದು ಬಿದ್ದಿದ್ದಾಳೆ. 

ಶಾಲಾ ಶಿಕ್ಷಕರೊಬ್ಬರು ಆಕೆಯನ್ನು ಗಮನಿಸಿ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಸಿಪಿಆರ್ (ಹೃದಯ ಶ್ವಾಸಕೋಶದ ಪುನರುಜ್ಜೀವನ) ಸೇರಿದಂತೆ ಆರಂಭಿಕ ಚಿಕಿತ್ಸೆ ನೀಡಿದರು, ಆದರೆ ಆಕೆ ಪ್ರತಿಕ್ರಿಯಿಸದಿದ್ದಾಗ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಆದರೆ ದುರಾದೃಷ್ಟವಶಾತ್ ಎರಡನೇ ಆಸ್ಪತ್ರೆಯಲ್ಲಿ ಶ್ರೀ ನಿಧಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಶ್ರಿನಿಧಿ ಹಠಾತ್ ಸಾವಿಗೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆಘಾತದ ಜೊತೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಶ್ರೀ ನಿಧಿಯಂತಹ ಚಿಕ್ಕ ಹುಡುಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಹಲವಾರು ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದಾರೆ. ಆಕೆಯ ದೇಹವನ್ನು ಅವರ ಊರಿಗೆ ಕೊಂಡೊಯ್ಯಲಾಗಿದೆ. 

ಅಲಿಘರ್‌ನ ಸಿರೌಲಿ ಗ್ರಾಮದ 6 ನೇ ತರಗತಿ ವಿದ್ಯಾರ್ಥಿ ಮೋಹಿತ್ ಚೌಧರಿ ಎಂಬಾತ ಹೃದಯಾಘಾತದಿಂದ ಸಾವನ್ನಪ್ಪಿದ ತಿಂಗಳುಗಳ ನಂತರ ಈಗ ಮತ್ತೊಬ್ಬ ವಿದ್ಯಾರ್ಥಿನಿ ಶ್ರೀನಿಧಿ ಸಾವು ಸಂಭವಿಸಿದೆ. 14 ವರ್ಷದ ಬಾಲಕ ಮೋಹಿತ್ ಚೌಧರಿ ವಾರ್ಷಿಕ ಕ್ರೀಡಾ ದಿನದ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾಗ ಅಭ್ಯಾಸ ಓಟದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದ. ಇದಕ್ಕೂ ಮೊದಲು ಅದೇ ಜಿಲ್ಲೆಯ 8 ವರ್ಷದ ಬಾಲಕಿ ದೀಕ್ಷಾ ಎಂಬಾಕೆ ತನ್ನ ಸ್ನೇಹಿತೆಯರ ಜೊತೆ ಆಟವಾಡುತ್ತಿದ್ದಾಗ ಸಾವನ್ನಪ್ಪಿದ್ದಳು.