ಮಥುರಾದ ಪ್ರೇಮಾನಂದ ಗೋವಿಂದ್ ಶರಣ್ ಅವರ ಕೇಲಿ ಕುಂಜ್ ಆಶ್ರಮಕ್ಕೆ ಭೇಟಿ ನೀಡಿದ್ದ 17 ವರ್ಷದ ಅನುಜ್ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಆಶ್ರಮದಲ್ಲಿ ನಡೆದ ಆತ್ಮಹತ್ಯೆ ಘಟನೆಯಿಂದ ಆತಂಕಗೊಂಡ ಪೋಷಕರು ಆಶ್ರಮದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮಥುರಾ(ಅ.3): ಪ್ರೇಮಾನಂದ ಗೋವಿಂದ್ ಶರಣ್ ಅವರ ಕೇಲಿ ಕುಂಜ್ ಆಶ್ರಮಕ್ಕೆ ಭೇಟಿ ನೀಡಿದ್ದ ಯುವಕ ಜು.3 ರಿಂದ ನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದ್ದು, ನಾಪತ್ತೆಯಾದ 17 ವರ್ಷದ ಬಾಲಕನ ಪೋಷಕರು ಆಶ್ರಮದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
ಸೆಪ್ಟೆಂಬರ್ 25 ರಂದು ಕಾಣೆಯಾಗಿದ್ದ ಯುವಕನೇ ಆತ್ಮ೧ಹತ್ಯೆ ಮಾಡಿಕೊಂಡನ? ಸಾವಿಗೆ ಕಾರಣವೇನು? ಯಾಕಾಗಿ ಆ ನಿರ್ಧಾರಕ್ಕೆ ಬಂದಿದ್ದು, ಆಶ್ರಮದಲ್ಲಿ ನಡೆದಿದ್ದೇನು?
ಹತ್ರಾಸ್ ಜಿಲ್ಲೆಯ ನಿವಾಸಿ ಅನುಜ್ ನಿಗೂಢ ನಾಪತ್ತೆ, ಸಾವಿನ ಕುರಿತಂತೆ ತಂದೆ ರಾಜ್‌ವೀರ್ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಅವರು ಹೇಳುವಂತೆ, ಅನುಜ್ ಜೂನ್ 26ರಂದು ಪ್ರೇಮಾನಂದ್ ಜಿ ಮಹಾರಾಜ್ ಎಂದೇ ಪ್ರಸಿದ್ಧರಾಗಿರುವ ಆಧ್ಯಾತ್ಮಿಕ ಗುರುಗಳಿಂದ ದೀಕ್ಷೆ ಪಡೆದಿದ್ದ. ದೀಕ್ಷೆ ಪಡೆದ ಅದೇ ದಿನ ಅನುಜ್ ಮನೆಗೆ ವಾಪಸ್ ಬಂದಿದ್ದ ಕೂಡ. ಆದರೆ ಜುಲೈ 3ರಂದು ಪ್ರೇಮಾನಂದ್ ಅವರ ಆಶೀರ್ವಾದ ಪಡೆಯಲು ಮತ್ತೆ ಆಶ್ರಮಕ್ಕೆ ಹೋಗಿದ್ದಾನೆ. ಹೋಗುವ ವೇಳೆ ಮೂರು ಪುಸ್ತಕಗಳು ಮತ್ತು ಜಪಮಾಲೆಯನ್ನು ಕೂಡ ತೆಗೆದುಕೊಂಡು ಹೋಗಿದ್ದಾನೆ. ಅಂದಿನಿಂದ ಅನುಜ್ ಎಲ್ಲಿದ್ದಾನೆ ಎಂಬ ಯಾವುದೇ ಮಾಹಿತಿ ನಮಗೆ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 25ರಂದು ಸತ್ತವರು ಯಾರು?
ಮಗನ ಬಗ್ಗೆ ಸುಳಿವು ಸಿಗದಿದ್ದಾಗ ನಾವು ಆಶ್ರಮಕ್ಕೆ ಹೋದೆವು. ಆಗ ಆಶ್ರಮದ ಆಡಳಿತ ಮಂಡಳಿ ತಮ್ಮನ್ನು ಒಳಗೆ ಪ್ರವೇಶಿಸಲು ಬಿಡಲಿಲ್ಲ. ಅಲ್ಲದೆ, ಅನುಜ್ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನೂ ನೀಡಲಿಲ್ಲ ಎಂದು ತಂದೆ ಆರೋಪಿಸಿದ್ದಾರೆ. ಸೆಪ್ಟೆಂಬರ್ 25ರಂದು ಕೇಲಿ ಕುಂಜ್ ಆಶ್ರಮದಲ್ಲಿ ಶಿಷ್ಯರೊಬ್ಬರು ಆತ್ಮ೧ಹತ್ಯೆ ಮಾಡಿಕೊಂಡ ಘಟನೆ ನಡೆದ ಬಳಿಕ ಕುಟುಂಬದ ಆತಂಕ ಮತ್ತಷ್ಟು ಹೆಚ್ಚಾಗಿದೆ ಅದು ಮಗನೇ ಇರಬಹುದಾ ಎಂಬ ಅನುಮಾನ ಹೆಚ್ಚಾಗಿದೆ ಎಂದು ರಾಜ್‌ವೀರ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಆಶ್ರಮದ ಹೊರಗೆ ಪ್ರತಿಭಟನೆ ನಡೆಸಿದರು.
ಅನುಜ್ ಬಗ್ಗೆ ಪೊಲೀಸ್ ಅಧಿಕಾರಿ ಹೇಳೋದೇ ಬೇರೆ!
ಆದರೆ ವೃಂದಾವನ ವೃತ್ತದ ಪೊಲೀಸ್ ಅಧಿಕಾರಿ ಸಂದೀಪ್ ಕುಮಾರ್ ಸಿಂಗ್ ಅವರು ಅನುಜ್ ಬಗ್ಗೆ ಹೇಳುವುದೇ ಬೇರೆ. ಅನುಜ್ ಕೋಚಿಂಗ್ ತರಗತಿಗಳಿಗೆ ತೆರಳಿದ್ದರೂ ಮನೆಗೆ ವಾಪಸ್ ಬಂದಿಲ್ಲ ಎಂದು ಆರೋಪಿಸಿ ಆತನ ಪೋಷಕರು ಜುಲೈ 5ರಂದು ಹತ್ರಾಸ್‌ನ ಸದಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಅನುಜ್ ಆಶ್ರಮದೊಳಗಿದ್ದಾನೆ. ಆದರೆ ಆಶ್ರಮದ ಆಡಳಿತ ಮಂಡಳಿ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಪೋಷಕರು ವೃಂದಾವನಕ್ಕೆ ಬಂದಿದ್ದರು. ಪೊಲೀಸರು ಆಶ್ರಮದ ಆಡಳಿತ ಮಂಡಳಿಯೊಂದಿಗೆ ಮಾತನಾಡಿದ್ದಾರೆ. ಜೂನ್ 26ರಂದು ಅನುಜ್ ದೀಕ್ಷೆ ಪಡೆದಿರುವುದು ನಿಜ. ಆದರೆ ಆತ ಆಶ್ರಮದಲ್ಲಿ ವಾಸಿಸುತ್ತಿರಲಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಹಾಗಾದರೆ ಅನುಜ್ ಎಲ್ಲಿದ್ದಾನೆ?
ಅನುಜ್‌ನನ್ನು ಪತ್ತೆಹಚ್ಚಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಪೊಲೀಸರು ಕುಟುಂಬಕ್ಕೆ ಭರವಸೆ ನೀಡಿದ್ದಾರೆ. ಆದರೆ ನಿಜವಾಗಿಯೂ ಅನುಜ್ ಎಲ್ಲಿದ್ದಾನೆ, ಜೂನ್ 26 ರಂದು ಆತ್ಮ೧ಹತ್ಯೆ ಮಾಡಿಕೊಂಡ ವ್ಯಕ್ತಿ ಯಾರು? ಈ ಬಗ್ಗೆ ಯಾಕೆ ಪೋಷಕರಿಗೆ ಮಾಹಿತಿ ನೀಡಿಲ್ಲ ಎಂಬುದು ಅನುಮಾನವಾಗಿಯೇ ಉಳಿದಿದೆ. ಸದ್ಯ ಎಲ್ಲ ಅನುಮಾನಗಳಿಗೆ ಪೊಲೀಸ್ ತನಿಖೆಯ ಬಳಿಕವೇ ಉತ್ತರ ಸಿಗಲಿದೆ.

