11 ವರ್ಷದ ಬಾಲಕಿಗೆ ವ್ಯಾಲೆಂಟೈನ್ಸ್ ದಿನದಂದು ಶಿಕ್ಷಕ ಕಿರುಕುಳ ನೀಡಿದ್ದಾಗಿ ದೂರು ದಾಖಲಾಗಿದೆ.
ಸ್ಕೂಲ್‌ನಲ್ಲಿ ಮಕ್ಕಳು ಪರಸ್ಪರ ಪ್ರೀತಿಸುವುದು ಸಹಜ. ಆದರೆ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಪ್ರೀತಿಯೇ? ಶಿಕ್ಷಕರನ್ನು ಪೋಷಕರಂತೆ ದೇವರೆಂದು ಭಾವಿಸಬೇಕೆಂದು ಭಾರತೀಯ ಪರಂಪರೆ ಹೇಳುತ್ತದೆ. ಇತ್ತೀಚೆಗೆ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಪ್ರೀತಿಯೇ ಸುದ್ದಿಯಾಗುತ್ತಿದೆ.
ಅಮೆರಿಕದ ಫ್ಲೋರಿಡಾದಲ್ಲಿ ಓರ್ವ ಶಿಕ್ಷಕ ಇಂತಹ ಪ್ರೇಮ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದಾನೆ ಎಂದು ವರದಿಗಳು ತಿಳಿಸಿವೆ. ಪ್ರೀತಿಸುವಂತೆ ಒತ್ತಾಯಿಸಿ ಹಸ್ಯ ಪ್ರೇಮಕ್ಕೆ ಒತ್ತಾಯಿಸುವ ಕೈಬರಹದ ಪ್ರೇಮ ಪತ್ರ ಬಹಿರಂಗವಾದ ನಂತರ ವಿವಾದ ಶುರುವಾಗಿದೆ. ಫ್ಲೋರಿಡಾದ ಬ್ರಾಡೆಂಟನ್‌ನ ಬಿಡಿ ಗುಲೆಟ್ ಎಲಿಮೆಂಟರಿ ಶಾಲೆಯ ಆರನೇ ತರಗತಿಯ ಶಿಕ್ಷಕ 11 ವರ್ಷದ ಬಾಲಕಿಗೆ ಪ್ರೇಮ ಪತ್ರ ಬರೆದಿದ್ದಕ್ಕಾಗಿ ತನಿಖೆ ಎದುರಿಸುತ್ತಿದ್ದಾನೆ.
ಕಳೆದ ವ್ಯಾಲೆಂಟೈನ್ಸ್ ದಿನದಂದು ಮನಾಟೀ ಕೌಂಟಿ ಶಾಲೆಯ ಶಿಕ್ಷಕ ಜಾರೆಟ್ ವಿಲಿಯಮ್ಸ್ ತನ್ನ ಮಗಳಿಗೆ ಪ್ರೇಮ ಪತ್ರ ಬರೆದಿದ್ದಾರೆ ಎಂದು ವಿದ್ಯಾರ್ಥಿನಿಯ ತಾಯಿ ಎರಡು ಪುಟಗಳ ದೂರನ್ನು ಏಪ್ರಿಲ್ 23 ರಂದು ಪೊಲೀಸರಿಗೆ ನೀಡಿದ್ದಾರೆ. ದೂರು ದಾಖಲಾದ ವಾರಗಳ ನಂತರ ಶಿಕ್ಷಕ ರಾಜೀನಾಮೆ ನೀಡಿದ್ದಾರೆ. ತನ್ನ ಕೃತ್ಯಕ್ಕೆ ಶಿಕ್ಷಕ ಕ್ಷಮೆ ಕೇಳಿದರೂ, ಬಾಲಕಿಯನ್ನು ಇನ್ನೂ ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.
“ನಾನು ನಿನ್ನನ್ನು ನಿಜವಾಗಿಯೂ ಪ್ರೀತಿಸುತ್ತೇನೆ ಎಂದು ನಿನಗೆ ಗೊತ್ತು. ಏನೇ ಆದರೂ ಅದು ಎಂದಿಗೂ ಬದಲಾಗುವುದಿಲ್ಲ” ಎಂದು ಕ್ಷಮೆ ಪತ್ರದಲ್ಲಿ ಶಿಕ್ಷಕ ಬರೆದಿದ್ದಾರೆ. ನಾನು ನಿಮ್ಮ ಪ್ರೀತಿಯ ಶಿಕ್ಷಕನಾಗಲು ಬಯಸುತ್ತೇನೆ ಮತ್ತು ನಾವು ಇತ್ತೀಚೆಗೆ ತುಂಬಾ ಹತ್ತಿರವಾಗಿದ್ದೇವೆ ಎಂದು ಪತ್ರದಲ್ಲಿ ಹೇಳಿದ್ದು, ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಕೇಳಿಕೊಂಡಿದ್ದಾರೆ. ವ್ಯಾಲೆಂಟೈನ್ಸ್ ದಿನದಂದು ಇತರ ಮಕ್ಕಳನ್ನು ಗ್ರಂಥಾಲಯಕ್ಕೆ ಕಳುಹಿಸಿ, ತನ್ನ ಮಗಳಿಗೆ 44 ನಿಮಿಷಗಳ ಕಾಲ ಕಿರುಕುಳ ನೀಡಿದ್ದಾರೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ. ಮಗಳು ಈಗ ರಾತ್ರಿ ಭಯದ ಕನಸು ಕಂಡು ಎಚ್ಚರಗೊಂಡು ಕಿರುಚುತ್ತಾಳೆ ಎಂದೂ ತಾಯಿ ಹೇಳಿದ್ದಾರೆ. ಶಿಕ್ಷಕನ ನಡವಳಿಕೆಯನ್ನು “ಗಂಭೀರ ಮತ್ತು ಅತಿರೇಕದ ದುರ್ನಡತೆ” ಎಂದು ತಾಯಿ ಬಣ್ಣಿಸಿದ್ದಾರೆ. ಶಿಕ್ಷಕನ ವಿರುದ್ಧ ತನಿಖೆ ನಡೆಯುತ್ತಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.


