ಚುನಾವಣೆಗೆ ಮೊದಲು ಕೈಗೆ ಇಡಿ ಶಾಕ್: ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷನ ಮನೆ ಮೇಲೆ ಇ.ಡಿ. ದಾಳಿ
ಕಳೆದ ವರ್ಷದ ಶಿಕ್ಷಕರ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ ಸಿಂಗ್ ದೋಸ್ತಾರಾ (Govind Singh Dostara)ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ.

ಪಿಟಿಐ ಜೈಪುರ: ಕಳೆದ ವರ್ಷದ ಶಿಕ್ಷಕರ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ ಸಿಂಗ್ ದೋಸ್ತಾರಾ (Govind Singh Dostara)ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ. ಇದೇ ವೇಳೆ, ಇತ್ತೀಚೆಗೆ ಹೋಟೆಲ್ ಉದ್ಯಮಿಗಳ ಮೇಲೆ ನಡೆದ ಇ.ಡಿ. ದಾಳಿಗೆ ಸಂಬಂಧಿಸಿದಂತೆ ವಿದೇಶಿ ವಿನಿಮಯ ಕಾಯ್ದೆ (FEMA) ಉಲ್ಲಂಘನೆ ಆರೋಪದ ಕುರಿತಾದ ವಿಚಾರಣೆಗೆ ಬರಬೇಕೆಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಪುತ್ರ ವೈಭವ್ ಗೆಹ್ಲೋಟ್‌ಗೂ ಸಮನ್ಸ್ ಜಾರಿ ಮಾಡಿದೆ.
ಮುಂದಿನ ತಿಂಗಳು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಕಾಂಗ್ರೆಸಿಗರಿಗೆ ಕಿರುಕುಳ ನೀಡಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಒಂದು ದೇಶ, ಒಂದು ಚುನಾವಣೆಗೆ ಬೇಕು 30 ಲಕ್ಷ ಇವಿಎಂ..!
ಕಳೆದ ವರ್ಷ ರಾಜಸ್ಥಾನ ಪಬ್ಲಿಕ್ ಸರ್ವೀಸ್ ಕಮಿಷನ್ (RPSC) ಮೂಲಕ ಶಿಕ್ಷಕರ ನೇಮಕಾತಿ ಪರೀಕ್ಷೆ ನಿಗದಿಯಾಗಿತ್ತು. ಆ ವೇಳೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. ಆ ಸಂಬಂಧ ರಾಜಸ್ಥಾನ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದರು. ತನಿಖೆಯ ವೇಳೆ ಆರೋಪಿಗಳು ಕಾಂಗ್ರೆಸ್ ನಾಯಕರ ಹೆಸರುಗಳನ್ನು ಹೇಳಿದ್ದರು. ಪ್ರತಿ ಅಭ್ಯರ್ಥಿಯಿಂದ 8ರಿಂದ 10 ಲಕ್ಷ ರು. ಪಡೆದು ಪ್ರಶ್ನೆ ಪತ್ರಿಕೆಗಳನ್ನು ನೀಡಿದ್ದಾಗಿ ಆರೋಪಿ ಬಾಯಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಮಾಜಿ ಶಿಕ್ಷಣ ಸಚಿವರೂ ಆಗಿರುವ ದೋಸ್ತಾರಾ, ಕಾಂಗ್ರೆಸ್ ಅಭ್ಯರ್ಥಿ ಓಂಪ್ರಕಾಶ್ ಹುಡ್ಲಾ (Omprakash Hoodla) ಸೇರಿದಂತೆ ಕೆಲವರ ಮನೆಗಳಲ್ಲಿ ಶೋಧ ನಡೆಸಲಾಗಿದೆ.
ಚುನಾವಣೆ ಸಮೀಪದಲ್ಲಿರುವ ವೇಳೆ ಈ ದಾಳಿ ನಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನದಲ್ಲಿ ತನ್ನ ಸೋಲು ನಿಶ್ಚಿತವಾದ್ದರಿಂದ ಬಿಜೆಪಿ ಕೊನೆಯ ದಾಳ ಉರುಳಿಸಿದೆ. ಛತ್ತೀಸ್‌ಗಢದ ಬಳಿಕ ರಾಜಸ್ಥಾನದಲ್ಲೂ ಇ.ಡಿ. ಪ್ರಚಾರಕ್ಕೆ ಧುಮುಕಿದೆ. ಇ.ಡಿ. ಹಾಗೂ ಸಿಬಿಐ ಅಧಿಕಾರಿಗಳೇ ಬಿಜೆಪಿಯ ನಿಜವಾದ ‘ಪನ್ನಾ ಪ್ರಮುಖ್’ಗಳು (ಕಾರ್ಯಕರ್ತರು). ಮೋದಿಯ ಸರ್ವಾಧಿಕಾರ ಈ ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಅವರು ಕೆಂಡಕಾರಿದ್ದಾರೆ.
ಡಿಬಿಟಿಗಾಗಿ ಸರ್ಕಾರಿ ಶಾಲೆಗೆ ಸೇರಿ ಖಾಸಗಿಯಲ್ಲಿ ಓದುತ್ತಿರುವ ಅನುಮಾನ: 20 ಲಕ್ಷ ವಿದ್ಯಾರ್ಥಿಗಳ ವಜಾ
ಚುನಾವಣೆ ನಡೆಯುವ ಎಲ್ಲ ರಾಜ್ಯಗಳಲ್ಲಿ ಇ.ಡಿ. ದಾಳಿ ನಡೆಯುತ್ತದೆ. ಛತ್ತೀಸ್‌ಗಢ, ಕರ್ನಾಟಕ, ಹಿಮಾಚಲ ಪ್ರದೇಶದಲ್ಲೂ ಚುನಾವಣೆಗೆ ಸ್ವಲ್ಪ ಸಮಯದ ಮೊದಲು ದಾಳಿಗಳು ನಡೆದಿದ್ದವು. ಇಂತಹ ದಾಳಿ ನಡೆದಲ್ಲೆಲ್ಲ ಕಾಂಗ್ರೆಸ್ ಗೆದ್ದಿದೆ. ಬಿಜೆಪಿಯವರು ದೇಶದಲ್ಲಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಭಯೋತ್ಪಾದನೆ ನಡೆಸುತ್ತಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದೂರಿದ್ದಾರೆ.